Site icon Vistara News

Moral education : ಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣ; ನಾಳೆಯ ಸಭೆಗೆ ಮುಸ್ಲಿಂ, ಕ್ರೈಸ್ತ, ಜೈನ ಗುರುಗಳಿಗಿಲ್ಲ ಆಹ್ವಾನ?

moral ethic education ನೈತಿಕ ಶಿಕ್ಷಣ

ಬೆಂಗಳೂರು: ಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣವನ್ನು (Moral education) ಅನುಷ್ಠಾನಗೊಳಿಸುವ ಉದ್ದೇಶದೊಂದಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಸೋಮವಾರ (ಜ.9) ಹಮ್ಮಿಕೊಳ್ಳಲಾಗಿರುವ ದುಂಡು ಮೇಜಿನ ಸಮಾಲೋಚನಾ ಸಭೆ ಬಗ್ಗೆ ಅಪಸ್ವರ ಕೇಳಿಬಂದಿದೆ. ಸರ್ವ ಧರ್ಮ ಗುರುಗಳನ್ನು ಕರೆಯುವುದಾಗಿ ಶಿಕ್ಷಣ ಇಲಾಖೆ ಹೇಳಿಕೊಂಡಿದ್ದು, ಹಿಂದು ಸ್ವಾಮೀಜಿಯವರನ್ನು ಬಿಟ್ಟರೆ ಇದುವರೆಗೂ ಮುಸ್ಲಿಂ, ಕ್ರೈಸ್ತ, ಜೈನ ಧರ್ಮ ಗುರುಗಳನ್ನು ಕರೆದಿಲ್ಲ ಎಂಬ ಆರೋಪ ಕೇಳಿಬಂದಿದೆ.

ವಿಧಾನಸೌಧದ 3ನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ಸಮಾಲೋಚನಾ ಸಭೆ ನಡೆಯಲಿದ್ದು, ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಸೇರಿದಂತೆ ಶಿಕ್ಷಣ ತಜ್ಞರು, ವಿವಿಧ ಧಾರ್ಮಿಕ ಗುರುಗಳು, ಚಿಂತಕರು, ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಶಿಕ್ಷಣ ಇಲಾಖೆ ಹೇಳಿಕೊಂಡಿತ್ತು.

ಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣವನ್ನು ಅಳವಡಿಸುವ ಕುರಿತು ಅಭಿಪ್ರಾಯ/ಸಲಹೆಗಳನ್ನು ಸಂಗ್ರಹಿಸಲು ಈ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ವ್ಯಕ್ತವಾಗುವ ಅಂಶಗಳ ಆಧಾರದ ಮೇಲೆ ಇಲಾಖಾ ಹಂತದಲ್ಲಿ ಆಯೋಜಿಸುವ ಸಭೆಗಳಲ್ಲಿ ಚರ್ಚಿಸಿ ‘ಮೌಲ್ಯ ಶಿಕ್ಷಣ’ದ ಅನುಷ್ಠಾನದ ವಿಧಾನಗಳನ್ನು ಅಂತಿಮಗೊಳಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದರು.

ಇದನ್ನೂ ಓದಿ | Gautam Adani | 26/11ರ ಉಗ್ರರ ದಾಳಿಯಲ್ಲಿ ಬಹುಶಃ ಹತ್ಯೆಗೀಡಾಗುತ್ತಿದ್ದೆ: ಗೌತಮ್‌ ಅದಾನಿ ಬಹಿರಂಗ

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿಯೂ ಮೌಲ್ಯ ಶಿಕ್ಷಣಕ್ಕೆ ಮಹತ್ವ ನೀಡಲಾಗಿದ್ದು, ಎಲ್ಲ ಶಾಲೆಗಳಲ್ಲಿ ಇದರ ಅಳವಡಿಕೆ ಬಗ್ಗೆ ಚಿಂತನೆ ನಡೆಯಲಿದೆ. ಆದರೆ, ಯಾವ ಯಾವ ವಿಚಾರಗಳು ಪಠ್ಯದಲ್ಲಿ ಒಳಗೊಳ್ಳಬೇಕು ಎಂಬ ಬಗ್ಗೆ ಈ ಸಭೆಯಲ್ಲಿ ಚರ್ಚೆಗೆ ಒಳಪಡಲಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಧರ್ಮ ಗುರುಗಳನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದು ಶಿಕ್ಷಣ ಸಚಿವರು ಹೇಳಿದ್ದರು.

ಕೆಲವು ಧರ್ಮಗುರುಗಳಿಗೆ ಮಾಹಿತಿಯೇ ಇಲ್ಲ?
ಮುಸ್ಲಿಂ, ಕ್ರಿಶ್ಚಿಯನ್, ಜೈನ ಧರ್ಮದ ಗುರುಗಳಿಗೆ ಮಾಹಿತಿಯೇ ಇಲ್ಲ ಎಂಬ ಆರೋಪ ಈಗ ಕೇಳಿಬಂದಿದೆ. ಹಿಂದು ಸ್ವಾಮೀಜಿಗಳನ್ನು ಮಾತ್ರ ಸಭೆಗೆ ಆಹ್ವಾನಿಸಿ ಏಕ ಧರ್ಮೀಯ ಗುರುಗಳಿಗೆ ಮಣೆ ಹಾಕಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ.

ಯಾರು ಯಾರಿಗೆ ಆಹ್ವಾನ?
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಿರಿಗೆರೆ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ರಾಮಕೃಷ್ಣ ಮಠದ ಸ್ವಾಮೀಜಿ, ಆರ್ಟ್ ಆಫ್ ಲಿವಿಂಗ್ ರವಿಶಂಕರ್‌ ಗುರೂಜಿ, ಸದ್ಗುರು ಜಗ್ಗಿ ವಾಸುದೇವ್‌ ಅವರಿಗೆ ಆಹ್ವಾನ ನೀಡಲಾಗಿದೆ. ಇನ್ನು ಶಿಕ್ಷಣ ತಜ್ಞ ಗುರುರಾಜ್ ಕರ್ಜಗಿ ಹಾಗೂ ಕಾಂಗ್ರೆಸ್‌ ನಾಯಕರಾದ ಡಾ. ಜಿ. ಪರಮೇಶ್ವರ್‌, ಎಂ.ಬಿ. ಪಾಟೀಲ್ ಹಾಗೂ ಕೃಷ್ಣ ಭೈರೇಗೌಡ ಅವರಿಗೆ ಆಹ್ವಾನ ನೀಡಲಾಗಿದೆ. ಆದರೆ, ವಕ್ಫ್‌ ಬೋರ್ಡ್, ಮುಸ್ಲಿಂ ಸಂಘಟನೆ, ಉಲೇಮಾ ಸಂಸ್ಥೆ ಹಾಗೂ ಜೈನ ಹಾಗೂ ಕ್ರಿಶ್ಚಿಯನ್‌ ಧರ್ಮ ಗುರುಗಳಿಗೆ ಈ ಬಗ್ಗೆ ಮಾಹಿತಿ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ | Viral Video | ಭಯಂಕರ ಚಳಿಯಲ್ಲಿ ಅಂಗಿ ಬಿಚ್ಚಿ ಕುಣಿದ ಕಾಂಗ್ರೆಸ್ ಕಾರ್ಯಕರ್ತರು; ಭಾರತ್ ಜೋಡೋ ಯಾತ್ರೆಯಲ್ಲಿ ಹುಮ್ಮಸ್ಸು

Exit mobile version