ಬೆಂಗಳೂರು ಗ್ರಾಮಾಂತರ: ಹಾಸ್ಟೆಲ್ ಪಕ್ಕದಲ್ಲಿದ್ದ ಹೊಂಡದಲ್ಲಿ ಈಜಲು ಹೋಗಿ ವಿದ್ಯಾರ್ಥಿಯೊಬ್ಬ ನೀರು ಪಾಲಾಗಿದ್ದ, ಇದೀಗ ಅದೇ ಹೊಂಡದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವವಾಗಿ ಪತ್ತೆ ಆಗಿದ್ದಾನೆ. ಇಲ್ಲಿನ ದೇವನಹಳ್ಳಿ ತಾಲೂಕಿನ ದೇವನಾಯಕನಹಳ್ಳಿಯಲ್ಲಿನ ಮೊರಾರ್ಜಿ ದೇಸಾಯಿ ವಸತಿ (Morarji Desai Hostel) ಶಾಲೆಯ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ವಸತಿ ಶಾಲೆಯ ಮೇಲ್ವಿಚಾರಕನೊಂದಿಗೆ ಆರೇಳು ವಿದ್ಯಾರ್ಥಿಗಳು ಹಾಸ್ಟೆಲ್ ಪಕ್ಕದ ಹೊಂಡದಲ್ಲಿ ಈಜಲು ತೆರಳಿದ್ದರು. ಶಾಲೆಯ 7ನೇ ತರಗತಿ ವಿದ್ಯಾರ್ಥಿ ಜುನೇದ್ ಪಾಷಾ (14) ಈಜು ಬಾರದೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದ. ಗುರುವಾರ ಸಂತೋಷ್ ಎಂಬಾತನ ಮೃತದೇಹ ಪತ್ತೆ ಆಗಿದೆ.
ದೇವನಾಯಕನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 180ರಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ವಸತಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಪ್ರವಾಸಕ್ಕೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಮೇಲ್ವಿಚಾರಣೆಯನ್ನು ಒಬ್ಬ ಯುವಕನಿಗೆ ಒಪ್ಪಿಸಲಾಗಿತ್ತು.
ಬುಧವಾರ ಮಧ್ಯಾಹ್ನ ವಸತಿ ಶಾಲೆ ಸಮೀಪದ ನೀರಿನ ಹೊಂಡ (ಕುಂಟೆಯ)ದಲ್ಲಿ ಮೇಲ್ವಿಚಾರಕನ ಸಹಿತ 6 ಹುಡುಗರು ಈಜಲು ತೆರಳಿದ್ದರು. ಈ ವೇಳೆ ಊರಿನವರು ಕಂಡು ಬೈದು ಕಳುಹಿಸಿದ್ದರು. ಆದರೂ ಮತ್ತೆ ಈಜಲು ಹೊಂಡಕ್ಕೆ ಇಳಿದಿದ್ದು, ಈಜು ಬಾರದ ಜುನೈದ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ಇದೀಗ ಸಂತೋಷ್ ಎಂಬಾತನ ಮೃತದೇಹ ಪತ್ತೆ ಆಗಿದೆ.
ಪೋಷಕರ ಅಳಲು ಮುಗಿಲು ಮುಟ್ಟಿದೆ. ಬೇಜವಾಬ್ದಾರಿ ತೋರಿದ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವನಹಳ್ಳಿ ತಹಸೀಲ್ದಾರ್ ಶಿವರಾಜ್ ಭೇಟಿ ನೀಡಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ | Coronavirus | ಹೈರಿಸ್ಕ್ ದೇಶಗಳಿಂದ ಬಂದಿದ್ದ ಮೂವರಿಗೆ ಪಾಸಿಟಿವ್; ಜಿನೋಮಿಕ್ ಟೆಸ್ಟ್‌ಗೆ ಸ್ಯಾಂಪಲ್ಸ್ ರವಾನೆ