ಬೆಂಗಳೂರು: ಇಲ್ಲಿನ ಮಹಾವೀರ್ ರ‍್ಯಾನ್ಸನ್ ಅಪಾರ್ಟ್‌ಮೆಂಟ್‌ನಲ್ಲಿ ಕಲುಷಿತ ನೀರು (Contaminated Water) ಕುಡಿದು 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಮಕ್ಕಳು ವಾಂತಿ, ಭೇದಿ ಹಾಗೂ ಜ್ವರದಿಂದ ಬಳಲುತ್ತಿದ್ದಾರೆ. ತೀವ್ರ ಅಸ್ವಸ್ಥಗೊಂಡಿರುವ ನಾಲ್ವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇಬ್ಬರು ಮಕ್ಕಳು ಹೆಚ್ಚಿನ ಚಿಕಿತ್ಸೆಗೆ ಬೆಳ್ಳಂದೂರು ಬಳಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರೆ, ಮತ್ತಿಬ್ಬರು ಸಿಂಗಸಂದ್ರ ಪ್ರಾಥಮಿಕ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಡಿಸ್ಜಾರ್ಜ್ ಮಾಡಲಾಗಿದೆ.
ಕಲುಷಿತ ನೀರು ಸೇವನೆಯಿಂದ ಮಕ್ಕಳು ಅಸ್ವಸ್ಥಗೊಂಡಿರುವ ಸಂಬಂಧ ದೂರು ದಾಖಲಾಗಿದೆ. ಸಿಂಗಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ, ಅಪಾರ್ಟ್‌ಮೆಂಟ್‌ನ ಮಾಲೀಕರ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಕೊಪ್ಪಳದಲ್ಲಿ ವಾಂತಿ, ಭೇದಿಗೆ ಬಾಲಕಿ ಬಲಿ: ಸಾವಿನ ಸಂಖ್ಯೆ ಮೂರಕ್ಕೇರಿಕೆ, ಹೆಚ್ಚಿದ ಆತಂಕ
ಕೊಪ್ಪಳ: ಇಲ್ಲಿನ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ವಾಂತಿ, ಭೇದಿಯಿಂದ ಬಾಲಕಿಯೊಬ್ಬಳು (Contaminated Water) ಮೃತಪಟ್ಟಿದ್ದಾಳೆ. ನಿರ್ಮಲಾ ಈರಪ್ಪ ಬೆಳಗಲ್ (10) ಮೃತ ಬಾಲಕಿಯಾಗಿದ್ದಾಳೆ. ಬುಧವಾರ ರಾತ್ರಿ (ಜೂ.7) ತೀವ್ರ ವಾಂತಿ ಭೇದಿ ಕಾಣಿಸಿಕೊಂಡಿದ್ದು, ನಿರ್ಮಲಾ ಅಸ್ವಸ್ಥಗೊಂಡಿದ್ದಳು.
ಗುರುವಾರ ಬೆಳಗಿನ ಜಾವ ನಿರ್ಮಲಾಳನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅದಾಗಲೇ ಉಸಿರು ನಿಲ್ಲಿಸಿದ್ದಾಳೆ. ಬಿಜಕಲ್ ಗ್ರಾಮದಲ್ಲಿ ಇಲ್ಲಿಯವರೆಗೂ 45 ಜನರು ವಾಂತಿ ಭೇದಿಯಿಂದ ಬಳಲುತ್ತಿದ್ದಾರೆ. ಇನ್ನು ನಿರ್ಮಲ ಪೋಷಕರು ದುಡಿಯಲು ಕೇರಳಕ್ಕೆ ಹೋಗಿದ್ದು, ಅತ್ತೆಯ ಮನೆಯಲ್ಲಿ ಈಕೆಯನ್ನು ಬಿಟ್ಟು ಹೋಗಿದ್ದರು. ಬುಧವಾರ ರಾತ್ರಿ ನಿರ್ಮಲಗೆ ವಾಂತಿ ಭೇದಿ ಆಗುತ್ತಿತ್ತು. ಹೀಗಾಗಿ ಪ್ರಾಥಮಿಕ ಚಿಕಿತ್ಸೆಗೆಂದು ಗುರುವಾರ ಬೆಳಗ್ಗೆ ಬಿಜಕಲ್ ಗ್ರಾಮದಲ್ಲಿದ್ದ ಆರೋಗ್ಯ ಕೇಂದ್ರಕ್ಕೆ ಕರೆದು ಹೋಗಿದ್ದರು. ಆದರೆ ಅಲ್ಲಿ ಹೆಚ್ಚು ರೋಗಿಗಳಿದ್ದ ಕಾರಣಕ್ಕೆ ಕುಷ್ಟಗಿಗೆ ಕಳುಹಿಸಲಾಗಿತ್ತು. ಆದರೆ ಅದಾಗಲೇ ಬಾಲಕಿ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಕುಡಿಯುವ ನೀರಿನಿಂದಲೆ ವಾಂತಿ ಭೇದಿಯಾಗಿ ಮೃತಪಟ್ಟಿದ್ದಾಳೆ ಎಂದು ಮೃತ ಬಾಲಕಿಯ ಸಂಬಂಧಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ಮನೆ ಖರೀದಿ ಮೋಸಕ್ಕೆ ಯುವತಿ ಬಲಿ; ಸೈನ್ಸ್ ಎಕ್ಸಾಂನಲ್ಲಿ ಫೇಲ್ ಆಗಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ
ತಾತ್ಕಾಲಿಕ ಆರೋಗ್ಯ ಕೇಂದ್ರ ಆರಂಭ
ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ವಾಂತಿ ಭೇದಿಯಿಂದ ಬಾಲಕಿ ಮೃತಪಟ್ಟ ಹಿನ್ನೆಲೆ ಸ್ಥಳಕ್ಕೆ ಡಿಎಚ್ಓ ಡಾ.ಅಲಕಾನಂದ ಮಳಗಿ, ಟಿಎಚ್‌ಓ ಡಾ. ಆನಂದ ಗೋಟೂರು, ಇಓ ಶಿವಪ್ಪ ಸುಭೇದಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಡಾ ಅಲಕಾನಂದ ಮಳಗಿ, ಗ್ರಾಮದಲ್ಲಿ ತಾತ್ಕಾಲಿಕವಾಗಿ ಆರೋಗ್ಯ ಕೇಂದ್ರವನ್ನು ಆರಂಭಿಸಲಾಗಿದೆ. ಇಲ್ಲಿ ಬರುವ ರೋಗಿಗಳಿಗೆ ಪರೀಕ್ಷೆ ಮಾಡಲಾಗುತ್ತಿದೆ. ಎಲ್ಲ ಗ್ರಾಮಗಳಲ್ಲಿಯೂ ಕುಡಿಯುವ ನೀರಿನ ಪರೀಕ್ಷೆ ಮಾಡಲಾಗುತ್ತಿದೆ. ಜತೆಗೆ ಬಾಲಕಿಯ ಸಾವಿನ ಬಗ್ಗೆ ತಜ್ಞರ ವರದಿ ಬರುತ್ತದೆ. ಆ ಬಳಿಕ ಕಲುಷಿತ ನೀರಿನಿಂದ ಮೃತಪಟ್ಟಿರುವುದಾ? ಇಲ್ಲವಾ? ಎಂಬುದು ತಿಳಿಯಲಿದೆ. ಸದ್ಯ, ಬಾಲಕಿಯ ಮೃತದೇಹವನ್ನು ತಾಲೂಕಾಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ