Site icon Vistara News

CET | ಮಳೆಯಿಂದ ವಿದ್ಯುತ್‌ ಅಡಚಣೆ ಹಿನ್ನೆಲೆ ಸಿಇಟಿ ದಾಖಲೆ ಪರಿಶೀಲನೆಗೆ ಹೆಚ್ಚಿನ ಕಾಲಾವಕಾಶ

CET

ಬೆಂಗಳೂರು: ರಾಜ್ಯಾದ್ಯಂತ ವಿಪರೀತ ಮಳೆಯಿಂದ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿರುವ ಹಿನ್ನೆಲೆಯಲ್ಲಿ ಸಿಇಟಿ (CET) ಬರೆದಿರುವ ಅಭ್ಯರ್ಥಿಗಳಿಗೆ ಕೆಲವು ಆನ್‌ಲೈನ್‌ ದಾಖಲಾತಿಗಳನ್ನು ಸರಿಯಾಗಿ ನಮೂದಿಸಲು ಮತ್ತಷ್ಟು ಕಾಲಾವಕಾಶ ಕೊಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.

“ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ. ಇದನ್ನು ಅಭ್ಯರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಶಾಲಾ ವ್ಯಾಸಂಗದ ವಿವರಗಳನ್ನು ಮೊದಲು ಅಪೂರ್ಣವಾಗಿ ತುಂಬಿರುವವರು ಸರಿಯಾದ ವಿವರ ತುಂಬಲು ಸೆ.1ರಿಂದ 7ರವರೆಗೆ ಪ್ರತಿದಿನ ರಾತ್ರಿ 10ರಿಂದ ಮರುದಿನ ಬೆಳಗ್ಗೆ 8ರವರೆಗೆ (ಭಾನುವಾರ ಪೂರ್ತಿ ದಿನ) ಅವಕಾಶ ಇರಲಿದೆ. ಇದು ಈವರೆಗೂ ಶಾಲಾ ದಾಖಲಾತಿ ಪರಿಶೀಲನೆ ಆಗದಿರುವ ಅಭ್ಯರ್ಥಿಗಳಿಗೆ ಮಾತ್ರ ಅನ್ವಯ ಆಗಲಿದೆ” ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.

“ಶಾಲಾ ವಿವರಗಳು ಮತ್ತು ಜಿಲ್ಲೆ/ತಾಲೂಕು ವಿವರಗಳನ್ನು ತುಂಬದೆ ಇದ್ದರೆ, ಅಂತಹವರಿಗೆ ಆಯಾ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಇದನ್ನು ಸರಿಪಡಿಸಿಕೊಳ್ಳಲು ಸೆ.7ರವರೆಗೆ ಅವಕಾಶ ಕೊಡಲಾಗಿದೆ” ಎಂದರು.

“ಒಂದೆರಡು ವರ್ಷಗಳ ಶಾಲಾ ವಿವರಗಳನ್ನು ತಪ್ಪಾಗಿ ನಮೂದಿಸಿರುವವರಿಗೆ ಸೆ.8ರ ಬಳಿಕ ಅವಕಾಶ ಕೊಡಲಾಗುವುದು. ಜತೆಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್.ಡಿ. ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದರೆ ಅಂತಹವರು ಸೆ.3ರ ಬೆಳಗ್ಗೆ 8ರಿಂದ ಸೆ.5ರ ಸಂಜೆ 5 ಗಂಟೆಯ ಒಳಗೆ ಅದನ್ನು ಸರಿಪಡಿಸಿಕೊಳ್ಳಬಹುದು” ಎಂದು ತಿಳಿಸಿದರು.

ಇದನ್ನೂ ಓದಿ | ಸಿಇಟಿ ಫಲಿತಾಂಶದಲ್ಲಿ ಅನ್ಯಾಯ: ಕೆಇಎ ಎದುರು ರಿಪೀಟರ್ಸ್ ವಿದ್ಯಾರ್ಥಿಗಳು, ಪೋಷಕರಿಂದ ಪ್ರತಿಭಟನೆ

Exit mobile version