ಪಾವಗಡ: ಆಂಬ್ಯುಲೆನ್ಸ್‌ನಲ್ಲಿ ಗರ್ಭಿಣಿಯು ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ (Pavagada News) ನಡೆದಿದೆ. ಶುಶ್ರೂಷಕ ಹಾಗೂ ಚಾಲಕನ ಸಮಯಪ್ರಜ್ಞೆಯಿಂದ ಮೂರು ಜೀವಗಳು ಉಳಿದಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಜೆ. ಅಚ್ಚಮ್ಮನಹಳ್ಳಿ ಗ್ರಾಮದ ಲಕ್ಷ್ಮಿ ಅನಿಲ್ ಕುಮಾರ್ ಎಂಬುವವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಸದ್ಯ ಮೂವರು ಆರೋಗ್ಯವಾಗಿದ್ದಾರೆ. ಸೋಮವಾರ ರಾತ್ರಿ 12 ಗಂಟೆಗೆ ಗರ್ಭಿಣಿಗೆ ಹೆರಿಗೆ ನೋವು ಕಂಡು ಬಂದ ಹಿನ್ನೆಲೆಯಲ್ಲಿ ವೈ.ಎನ್.ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತಡರಾತ್ರಿ ವೈದ್ಯರು ಇಲ್ಲದ ಕಾರಣ ಅಲ್ಲಿನ ಶುಶ್ರೂಷಕಿ ಪ್ರಾಥಮಿಕ ಚಿಕಿತ್ಸೆ ನೀಡಿ ಪಾವಗಡ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅದರೆ ತಾಲೂಕು ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಬುಡ್ಡರೆಡ್ಡಿಹಳ್ಳಿ ಬಳಿ ಅವಳಿ ಮಕ್ಕಳಿಗೆ ತಾಯಿ ಜನ್ಮ ಕೊಟ್ಟಿದ್ದಾಳೆ.
ನಂತರ ತಾಯಿ, ಮಕ್ಕಳನ್ನು ಶುಶ್ರೂಷಕ ನರೇಂದ್ರ ಹಾಗೂ 108 ಚಾಲಕ ಹನುಮಂತಪ್ಪ ಆಂಬ್ಯುಲೆನ್ಸ್ ಮೂಲಕ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಹೀಗಾಗಿ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ವೈ.ಎನ್.ಹೊಸಕೋಟೆ ಸರ್ಕಾರಿ ಆಸ್ಪತ್ರೆ 24×7 ಕಾರ್ಯ ನಿರ್ವಹಿಸುವ ವಿಭಾಗಕ್ಕೆ ಸೇರಿದ ಆಸ್ಪತ್ರೆಯಾಗಿದೆ. ಆದರೆ. ರಾತ್ರಿ ಪಾಳಿಯಲ್ಲಿ ವೈದ್ಯರು ಏಕೆ ಕರ್ತವ್ಯದಲ್ಲಿ ಇರಲಿಲ್ಲ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ. ರಾತ್ರಿ ವೇಳೆ ತುರ್ತು ಚಿಕಿತ್ಸೆ ಅಗತ್ಯವಿದ್ದಾಗ ವೈದ್ಯರಿಲ್ಲದೆ ಪ್ರಾಣಹಾನಿ ನಡೆದರೆ ಯಾರು ಜವಾಬ್ದಾರಿ ವಹಿಸುತ್ತಾರೆ? ಹೀಗಾಗಿ ತಪ್ಪಿತಸ್ಥ ವೈದ್ಯರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.