ದಾವಣಗೆರೆ: ಅಗಲಿದ ಮಗಳ ನೆನಪುಗಳು ತಮ್ಮ ಜತೆ ಶಾಶ್ವತವಾಗಿ ಇರಬೇಕು ಎಂಬ ಉದ್ದೇಶದಿಂದ ಪುತ್ರಿಯ ಮೇಣದ ಪ್ರತಿಮೆಯನ್ನು ತಾಯಿ ಮಾಡಿಸಿರುವುದು ನಗರದಲ್ಲಿ ಕಂಡುಬಂದಿದೆ. ಸಾಯುವ ಮುನ್ನ ನನ್ನ ನೆನಪಿಗಾಗಿ ಮೇಣದ ಪ್ರತಿಮೆ, ಸಮಾಧಿ ಮಾಡಿಸು ಎಂದು ಪುತ್ರಿ ಹೇಳಿದ್ದರಿಂದ ಆಕೆಯ ಆಸೆ ಈಡೇರಿಸಲು ನಿವೃತ್ತ ಶಿಕ್ಷಕಿ, ಮಗಳ ಮೇಣದ ಪ್ರತಿಮೆಯನ್ನು ಮಾಡಿಸಿ, ಮನೆಯಲ್ಲಿಟ್ಟುಕೊಂಡಿದ್ದಾರೆ.
ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಗ್ಯಾರಹಳ್ಳಿಯ ಕಮಲಮ್ಮ ಅವರೇ ತಮ್ಮ ಪುತ್ರಿಯ ಮೇಣದ ಪ್ರತಿಮೆ ನಿರ್ಮಿಸಿರುವುದು. ಮುಖ್ಯ ಶಿಕ್ಷಕಿಯಾಗಿ ನಿವೃತ್ತಿಯಾಗಿರುವ ಕಮಲಮ್ಮ ಅವರ ಪುತ್ರಿ ಹೆಸರು ಕಾವ್ಯಾ. ಮಗಳು ಎರಡು ವಾರದ ಮಗುವಾಗಿದ್ದಾಗ ಪತಿಯನ್ನು ಕಳೆದುಕೊಂಡ ಕಮಲಮ್ಮಗೆ ಮಗಳೇ ಜಗತ್ತು. ಆದರೆ ದುರದೃಷ್ಟವಶಾತ್ 26 ವರ್ಷದಲ್ಲಿ ಮಗಳಿಗೆ ಕ್ಯಾನ್ಸರ್ ಕಾಣಿಸಿಕೊಂಡಿತು. 4 ವರ್ಷ ಕ್ಯಾನ್ಸರ್‌ನಿಂದ ಬಳಲಿ ಆಕೆ 2022ರಲ್ಲಿ ನಿಧನರಾದಳು.
ಸಾವಿಗಿಂತ ಮೊದಲು “ನನ್ನ ದೇಹವನ್ನು ಊರಿಗೆ ಕೊಂಡೊಯ್ಯಬೇಡ, ಆಸ್ಪತ್ರೆಗೆ ದಾನ ಮಾಡು ಎಂದು ಕಾವ್ಯಾ ತಿಳಿಸಿದ್ದರು. ಆದರೆ ಕ್ಯಾನ್ಸರ್ ರೋಗ ಇದ್ದ ಹಿನ್ನೆಲೆಯಲ್ಲಿ ವೈದ್ಯರು ತಿರಸ್ಕರಿಸಿದ್ದರು. ನಂತರ ಸಾಮಾಜಿಕ ಸೇವೆಯ ಮೂಲಕ ಮಗಳ ಆಸೆಯನ್ನು ಈಡೇರಿಸಲು ನಿವೃತ್ತ ಶಿಕ್ಷಕಿ ಶ್ರಮಿಸುತ್ತಿದ್ದಾರೆ.
ಮಗಳ ಆಸೆಯಂತೆ ಮೇಣದ ಪ್ರತಿಮೆ
ಎಂಜಿನಿಯರಿಂಗ್ ಓದಿದ್ದ ಕಾವ್ಯಾ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಮದುವೆ ಮಾಡಿಕೊಳ್ಳುವಷ್ಟರಲ್ಲಿ ಕ್ಯಾನ್ಸರ್ ಮಹಾಮಾರಿ ಆವರಿಸಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕಾವ್ಯಾ, ತನ್ನ ಪ್ರತಿಮೆ ನಿರ್ಮಿಸಿ, ಸಮಾಧಿಯ ಪಕ್ಕದಲ್ಲಿ ಉದ್ಯಾನ ನಿರ್ಮಿಸಬೇಕು ಎಂದು ಹೇಳಿದ್ದಳಂತೆ. ಹೀಗಾಗಿ ಮಗಳ ಅಸೆಯಂತೆ ಬೆಂಗಳೂರಿನ ಶಿಲ್ಪಿಯಿಂದ 3.30 ಲಕ್ಷ ರೂ. ವೆಚ್ಚದಲ್ಲಿ ಸಿಲಿಕಾನ್ ಪ್ರತಿಮೆ ನಿರ್ಮಿಸಿ ದಾವಣಗೆರೆಯ ನಿವಾಸದಲ್ಲಿ ಇಟ್ಟಿದ್ದಾರೆ. ಹಾಗೆಯೇ ಗೋಪನಾಳ್‌ನಲ್ಲಿ ಸಮಾಧಿ ನಿರ್ಮಿಸಿ ಸುತ್ತಲು ಉದ್ಯಾನ ನಿರ್ಮಿಸಿದ್ದಾರೆ.
ಇದನ್ನೂ ಓದಿ | Tumkur News: ರೈತರ ಮಕ್ಕಳಿಗೆ ಹೆಣ್ಣು ಕೊಡಿಸಿ: ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ ರೈತ!
ಈ ಹಿಂದೆ ಕೊಪ್ಪಳದಲ್ಲಿ ಉದ್ಯಮಿ ಶ್ರೀನಿವಾಸ ಗುಪ್ತಾ ಅವರು ಮೃತ ಪತ್ನಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿಸಿದ್ದದ್ದು ಗಮನ ಸೆಳೆದಿತ್ತು. ನೂತನ ಮನೆ ಗೃಹಪ್ರವೇಶದ ವೇಳೆ ಪತ್ನಿ ಕೆ.ವಿ.ಎನ್. ಮಾದವಿ ಅವರ ಮೂರ್ತಿಯನ್ನು ಮಾಡಿಸಿದ್ದರು. ಹೊಸ ಮನೆ ನಿರ್ಮಾಣ ಪತ್ನಿ ಆಸೆಯಾಗಿತ್ತು. ಆದರೆ, ಅದನ್ನು ನೋಡಲು ಅವರೇ ಇಲ್ಲದ ಕಾರಣ ಪತ್ನಿಯ ಮೂರ್ತಿಯನ್ನು ಮಾಡಿಸಿದ್ದರು.
ಅದೇ ರೀತಿ ನಂಜನಗೂಡಿನಲ್ಲಿ ಯತೀಶ್ ಎಂಬಾತ ತಮ್ಮ ತಂದೆಯ ಪ್ರತಿಮೆಯನ್ನು ಮಾಡಿಸಿ ಅದರ ಮುಂದೆ ವಿವಾಹವಾಗಿದ್ದರು. ತಂದೆ ಪ್ರತಿಮೆ ಪಕ್ಕದಲ್ಲಿ ತಾಯಿಯನ್ನು ಕೂರಿಸಿ ಯತೀಶ್ ಮದುವೆ ಶಾಸ್ತ್ರ ಮುಗಿಸಿದ್ದರು. ಇದೀಗ ಮಗಳ ನೆನಪಿಗಾಗಿ ತಾಯಿ ಪ್ರತಿಮೆ ಮಾಡಿಸಿರುವುದು ಕಂಡುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ