Site icon Vistara News

ಭ್ರಷ್ಟಾಚಾರದ ಪರ ಕಾಂಗ್ರೆಸ್‌ ಹೋರಾಟ: ಬಿಜೆಪಿ ನಾಯಕರ ಗೇಲಿ

ಪ್ರತಾಪ ಸಿಂಹ

ಸೋಮವಾರಪೇಟೆ: ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ಇದ್ದಾಗ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಎಸ್ಐಟಿ ವಿಚಾರಣೆಗೆ ಒಳಪಡಿಸಿತ್ತು. ಮೋದಿಯವರು ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿ ಹೋಗಿರಲಿಲ್ಲವೇ? ಅಮಿತ್ ಶಾ ಅವರನ್ನು ಜೈಲಿಗೆ ಕಳುಹಿಸಲು ಯತ್ನಿಸಿದ ಸಂದರ್ಭದಲ್ಲೂ ಬಿಜೆಪಿ ಏನೂ ಮಾತನಾಡಿರಲಿಲ್ಲ. ಈಗ ಕಾಂಗ್ರೆಸ್‌ ನಾಯಕರು ಯಾವ ನೈತಿಕತೆಯ ಮೇಲೆ ಮಾತನಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್‌ ಸಿಂಹ ಕಿಡಿ ಕಾರಿದರು.

ರಾಹುಲ್ ಗಾಂಧಿಯವರ ಇ.ಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್‌ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಸೋಮವಾರಪೇಟೆಯಲ್ಲಿ ಮಂಗಳವಾರ ಮಾತನಾಡಿದ ಅವರು ʼʼಭ್ರಷ್ಟಾಚಾರವನ್ನು ಪ್ರಶ್ನೆ ಮಾಡೋದೆ ತಪ್ಪಾ? ಭ್ರಷ್ಟಾಚಾರ ಪ್ರಜಾಪ್ರಭುತ್ವದ ಭಾಗ ಎನ್ನುವುದಾದರೆ ಅದು ಪ್ರಜಾಪ್ರಭುತ್ವದ ಹರಣ ಅಲ್ಲವೆʼʼ ಎಂದು ಕಾಂಗ್ರೆಸ್‌ ನಾಯಕರನ್ನು ಪ್ರತಾಪ ಸಿಂಹ ಪ್ರಶ್ನಿಸಿದರು.

ʼʼಕಾಂಗ್ರೆಸ್ ಪಕ್ಷವನ್ನು ಜನ ನಿರ್ಲಕ್ಷ್ಯ ಮಾಡಿದ್ದಾರೆ. ಉಳಿದಿರೋದು ಒಂದೇ ಒಂದು ಕಡೆ ಅದು ರಾಜಸ್ಥಾನ. ಮುಂದಿನ ಚುನಾವಣೆಯಲ್ಲೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಅನ್ನು ಜನ ಆಚೆಗಟ್ಟುತ್ತಾರೆ. ಆ ಮೂಲಕ ದೇಶಾದ್ಯಂತ ಯಾವ ರಾಜ್ಯದಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದಿಲ್ಲʼʼ ಎಂದು ಹೇಳಿದರು.

ಭ್ರಷ್ಟಾಚಾರದ ಪರ ಕಾಂಗ್ರೆಸ್‌ ಪ್ರತಿಭಟನೆ: ಸೋಮಶೇಖರ್

ʼʼನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಇ.ಡಿ ನೋಟಿಸ್ ನೀಡಿದೆ. ಇದನ್ನು ಖಂಡಿಸಿ ಕಾಂಗ್ರೆಸ್‌ ನಡೆಸುತ್ತಿರುವ ಪ್ರತಿಭಟನೆ ಭ್ರಷ್ಟಾಚಾರದ ಪರವಾಗಿದೆʼʼ ಎಂದು ಸಚಿವ ಎಸ್. ಟಿ. ಸೋಮಶೇಖರ್‌ ಟೀಕಿಸಿದರು.

ʼʼಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಯ ತನಿಖೆಗೆ ಒಳಪಡುವವರು ತಾವು ಕಾನೂನುಬದ್ಧವಾಗಿದ್ದರೆ ಹೆದರುವ ಅವಶ್ಯಕತೆ ಇಲ್ಲ. ಇ.ಡಿ, ಐಟಿ ನೋಟಿಸ್‌ ಕೊಡುವುದು, ತನಿಖೆ ನಡೆಸುವುದು ಹೊಸದೇನಲ್ಲ. ಮುಂಚಿನಿಂದಲೂ ಇದೆ. ಯಾರು ಅಕ್ರಮ ಎಸಗಿರುತ್ತಾರೋ ಅವರು ಭಯಪಡುತ್ತಾರೆ. ಕಾನೂನುಬದ್ಧವಾಗಿದ್ದರೆ ಇ.ಡಿ ಏನೂ ಮಾಡುವುದಕ್ಕೆ ಆಗುವುದಿಲ್ಲʼʼ ಎಂದು ಸೋಮಶೇಖರ್‌ ಹೇಳಿದರು.

ʼʼಅಕ್ರಮ ಮಾಡಿದವರಿಗೆ ಭಯ ಇರುತ್ತದೆ. ಸರಿಯಿದ್ದರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿ ಯಾರಿಗೂ ತೊಂದರೆ ಆಗಲ್ಲ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಈ ವಿಷಯದಲ್ಲಿ ಕಾಂಗ್ರೆಸ್ ಯಾಕೆ ಪ್ರತಿಭಟನೆ ಮಾಡುತ್ತಿದೆಯೋ ಗೊತ್ತಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರನ್ನು ಮೆಚ್ಚಿಸಲು ಪ್ರತಿಭಟನೆ ಮಾಡುತ್ತಿದ್ದಾರೆ. ನಿಮ್ಮ ಪರವಾಗಿ ನಾವಿದ್ದೇವೆ ಎಂದು ತೋರಿಸಲು ಇವರು ಪ್ರತಿಭಟನೆ ಮಾಡುತ್ತಿರುವಂತಿದೆʼʼ ಸೋಮಶೇಖರ್‌ ವ್ಯಂಗ್ಯವಾಡಿದರು.

ಪ್ರಜಾಪ್ರಭುತ್ವ ದೇಶದಲ್ಲಿ ಇದ್ದೇವೆ ಎನ್ನುವುದನ್ನು ತಿಳಿದುಕೊಳ್ಳಲಿ: ತೇಜಸ್ವಿ ಸೂರ್ಯ

ʼʼದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಾಂಗ್ರೆಸ್ ಈಗ ಭ್ರಷ್ಟಾಚಾರ ಪ್ರಕರಣದ ಪರ ಹೋರಾಟ ಮಾಡುತ್ತಿದೆ. ಇದು ದೇಶದ ದುರಂತʼʼ ಎಂದು ಸಂಸದ ತೇಜಸ್ವಿ ಸೂರ್ಯ ಟೀಕಿಸಿದರು.

ದಾವಣಗೆರೆ ತಾಲೂಕಿನ ಹಳೇ ಬಿಸಲೇರಿ ಗ್ರಾಮದಲ್ಲಿ ಶಾಲೆ ಉದ್ಘಾಟನೆ ನಂತರ ಮಾತನಾಡಿದ ಅವರು ʼʼಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ವಿರುದ್ಧ ಕೇಸ್ ದಾಖಲಿಸಿ ಹತ್ತು ಗಂಟೆಗಳ ವಿಚಾರಣೆ ಮಾಡಲಾಗಿತ್ತು. ಇದನ್ನು ಅವರು ಸಹಿಸಿಕೊಂಡು ಸುಪ್ರೀಂ ಕೋರ್ಟ್ವರೆಗೆ ಹೋರಾಟ ಮಾಡಿದ್ದಾರೆ. ಈಗ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಬಂದರೆ ಕಾಂಗ್ರೆಸ್ ಇಂತಹ ಪ್ರಕರಣವನ್ನು ಬೆಂಬಲಿಸಿ ಬೀದಿಗಳಿದು ಹೋರಾಟ ಮಾಡುತ್ತಿದೆ. ಗಾಂಧಿ ಕುಟುಂಬ ಇನ್ನಾದರೂ ಪ್ರಜಾಪ್ರಭುತ್ವ ದೇಶದಲ್ಲಿ ಇದ್ದೇವೆ ಎಂಬುದನ್ನ ನೆನಪಿನಲ್ಲಿ ಇಟ್ಟುಕೊಳ್ಳಲಿʼʼ ಕಿಡಿ ಕಾರಿದರು.

ಇದನ್ನೂ ಓದಿ | ʼಪ್ರತಾಪ್‌ ಸಿಂಹಗೆ ಮಾಹಿತಿ ಇರಲಿಲ್ಲ ಅದಕ್ಕೆ ಹೇಳಿದೆʼ: ಮೈಸೂರಲ್ಲಿ ಮತ್ತೆ ಶಾಸಕ VS ಸಂಸದ

Exit mobile version