Site icon Vistara News

Amrit Mahotsav | ವಿವೇಕಾನಂದ, ಅರವಿಂದರ ವಿಚಾರಧಾರೆಗಳಲ್ಲಿ ಸಾಮ್ಯತೆ ಇತ್ತು: ಸಂಸದ ತೇಜಸ್ವಿ ಸೂರ್ಯ

ತೇಜಸ್ವಿ ಸೂರ್ಯ

ಬೆಂಗಳೂರು: ದೇಶ ಸ್ವಾತಂತ್ರ್ಯ ಪಡೆಯುವಲ್ಲಿ ವಿವೇಕಾನಂದರು ಹಾಗೂ ಮಹರ್ಷಿ ಅರವಿಂದರ ಕೊಡುಗೆ ಅಪಾರ. ಭಾರತೀಯತೆಯನ್ನು ಆಧ್ಯಾತ್ಮಿಕ ಆಧಾರದ ಮೇಲೆ ಅವರು ನಿರ್ಮಾಣ ಮಾಡಿದ್ದರು. ಅವರಿಬ್ಬರ ವಿಚಾರಧಾರೆಗಳಲ್ಲಿ ಸಾಮ್ಯತೆ ಇತ್ತು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

75ನೇ ಸ್ವಾತಂತ್ರ್ಯ ಮಹೋತ್ಸವ ಹಿನ್ನೆಲೆಯಲ್ಲಿ ನಗರದ ಎಫ್‌ಕೆಸಿಸಿ ಸಭಾಂಗಣದಲ್ಲಿ ದಿಶಾ ಭಾರತ್ ಸಂಸ್ಥೆ ಏರ್ಪಡಿಸಿದ್ದ ಸ್ವರಾಜ್ಯ ಉತ್ಸವ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮಸ್ಸು, ದಾಸ್ಯದಿಂದಲೇ ಇದ್ದ ಭಾರತವನ್ನು “ಏಳಿ… ಎದ್ದೇಳಿ…ʼʼ ಎಂದು ಹುರಿದುಂಬಿಸಿ, ಆ ಮನಃಸ್ಥಿತಿಯಿಂದ ಹೊರತಂದವರು ಸ್ವಾಮಿ ವಿವೇಕಾನಂದರು ಎಂದರು.

ಇದನ್ನೂ ಓದಿ | Amrit Mahotsav | ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೈದರಾಬಾದ್‌ನ ರಂಗರಾವ್, ಪಗಾಯ್ ಮಿಂಚಿನ ಸಂಚಾರ

1893ರಲ್ಲಿ ಭಾರತದ ಇತಿಹಾಸದಲ್ಲಿ ಹೊಸ ಪರ್ವ ಆರಂಭವಾಯಿತು. ಅದಕ್ಕೆ ಕಾರಣರಾದವರು ವಿವೇಕಾನಂದರು ಹಾಗೂ ಅರವಿಂದರು. 1893ರಲ್ಲಿ ತಾಯ್ನಾಡಿಗೆ ಏನಾದರೂ ಮಾಡಬೇಕೆಂಬ ಧ್ಯೇಯದೊಂದಿಗೆ ಅರವಿಂದರು ಇಂಗ್ಲೆಂಡ್‌ನಿಂದ ಭಾರತಕ್ಕೆ ಬರುತ್ತಾರೆ. ಅದೇ ವರ್ಷ ವಿವೇಕಾನಂದರು ಭಾರತೀಯತೆಯ ವಿಚಾರಧಾರೆಗಳನ್ನು ತೆಗೆದುಕೊಂಡು ಅಮೆರಿಕಕ್ಕೆ ತೆರಳುತ್ತಾರೆ ಎಂದರು.

ವಿವೇಕಾನಂದರು ಇಲ್ಲದಿದ್ದರೆ ನಮ್ಮ ಧರ್ಮವನ್ನು ಉಳಿಸಿಕೊಳ್ಳಲು, ಸ್ವಾತಂತ್ರ್ಯ ಪಡೆಯಲು ಸಾಧ್ಯವಾಗುತ್ತಿರಲಿಲ್ಲವೆಂದು ಚಕ್ರವರ್ತಿ ರಾಜಗೋಪಾಲಚಾರಿ ಅವರು ದೇಶಕ್ಕೆ ವಿವೇಕಾನಂದರ ಕೊಡುಗೆಯನ್ನು ಒಂದೇ ಸಾಲಿನಲ್ಲಿ ಹೇಳಿದ್ದಾರೆ. ಅಂದಿನ ಸಮಯದಲ್ಲಿ ಭಾರತೀಯರಿಗೆ ನಾವು ಭಾರತೀಯರೆಂದು ಧೈರ್ಯದಿಂದ ಹೇಳಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಜನರಿಗೆ ಭಗವದ್ಗೀತೆಯ ಕೃಷ್ಣ ಉವಾಚವನ್ನು ನೆನಪಿಸಿ ಸ್ವಾತಂತ್ರ್ಯ ಪಡೆಯುವ ಅಡಿಪಾಯ ಹಾಕಿಕೊಟ್ಟವರು ವಿವೇಕಾನಂದರು. ವಿವೇಕಾನಂದರು ವಿಚಾರಗಳು ಹಾಗೂ ಬರಹಗಳಿಂದ ಸುಭಾಶ್ ಚಂದ್ರ ಬೋಸ್, ಭಗತ್ ಸಿಂಗ್, ಬಾಗಾ ಜತಿನ್‌ರಂತಹ ಕ್ರಾಂತಿಕಾರಿಗಳು ಬಹಳ ಪ್ರಭಾವಿತರಾಗಿದ್ದರು ಎಂದರು.

ವಿವೇಕಾನಂದರು ಹಾಗೂ ಅರವಿಂದರ ವಿಚಾರಧಾರೆಗಳಲ್ಲಿ ಸಾಮ್ಯತೆ ಇದ್ದವು. ಅರವಿಂದರು ಭಾರತದ ಶಿಕ್ಷಣ ವ್ಯವಸ್ಥೆ, ಜಾತಿ ವ್ಯವಸ್ಥೆ, ಹಿಂದು ಧರ್ಮದ ಕುರಿತು ಹಲವಾರು ಲೇಖನಗಳನ್ನು ಬರೆದಿದ್ದಾರೆ. ಸ್ವಾತಂತ್ರ್ಯ ಯಾರೂ ಪಡೆಯುವುದಲ್ಲ ಅದನ್ನು ಕಿತ್ತುಕೊಳ್ಳಬೇಕು ಎಂಬ ಮನಸ್ಥಿತಿ ಅರವಿಂದರದ್ದಾಗಿತ್ತು. ಭಾರತೀಯತೆಯನ್ನು ಆಧ್ಯಾತ್ಮಿಕ ಆಧಾರದ ಮೇಲೆ ನಿರ್ಮಾಣ ಮಾಡಿದ್ದು ವಿವೇಕಾನಂದರು, ಅರವಿಂದರ ವಿಶೇಷತೆ. ಇವರೀರ್ವರು ಪರಿಜ್ಞಾನ, ಪರಿಕಲ್ಪನೆಯನ್ನು ದೇಶಕ್ಕೆ ತಿಳಿಸಿಕೊಟ್ಟಿದ್ದಾರೆ. ಭಾರತೀಯರಿಗೆ ತಮ್ಮ ಐಡೆಂಟಿಟಿ ಕೊಟ್ಟದ್ದು ಆ ಇಬ್ಬರು ಮಹನೀಯರುಗಳ ಮೊದಲ ಕೊಡುಗೆ ಎಂದರು.

ನಾಳಿನ ಭಾರತ ಹೇಗಿರಬೇಕೆಂಬ ಸ್ಪಷ್ಟ ಪರಿಕಲ್ಪನೆಯ ಕುರಿತು ಅವರಿಬ್ಬರು ಅಂದೇ ಬರೆದಿದ್ದರು, ಅದನ್ನು ಎಲ್ಲರೂ ಓದಬೇಕು. ನಾನು ದೇಶದ ಪ್ರಾಮಾಣಿಕ ಪ್ರಜೆಯಾಗಿ ಈ ಹಂತದಲ್ಲಿ ನಿಂತಿರುವುದಕ್ಕೆ ವಿವೇಕಾನಂದರು ಹಾಗೂ ಮಹರ್ಷಿ ಅರವಿಂದರ ವಿಚಾರಧಾರೆಗಳೇ ಕಾರಣ ಎಂದರು.

ಇದನ್ನೂ ಓದಿ | Terrorist Arrest | ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಉಗ್ರ ಕೃತ್ಯ; ದೆಹಲಿಯಲ್ಲಿ ಐಎಸ್‌ ಭಯೋತ್ಪಾದಕ ಬಂಧನ

Exit mobile version