Site icon Vistara News

Ironman Relay Challenge | ಐರನ್‌ಮ್ಯಾನ್‌ ರಿಲೇ ಚಾಲೆಂಜ್‌ ಪೂರ್ಣಗೊಳಿಸಿ ದಾಖಲೆ ಬರೆದ ಸಂಸದ ತೇಜಸ್ವಿ ಸೂರ್ಯ

Ironman challenge

ಬೆಂಗಳೂರು : ಗೋವಾದಲ್ಲಿ ನಡೆದ ಐರನ್‌ಮ್ಯಾನ್‌ ರಿಲೇ ಚಾಲೆಂಜ್‌ನಲ್ಲಿ ನ್ಯೂ ಇಂಡಿಯಾ ತಂಡದ ಪರವಾಗಿ ಪಾಲ್ಗೊಂಡಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ದಾಖಲೆ ಬರೆದಿದ್ದಾರೆ. ಕಷ್ಟಕರವಾದ ಈ ಮ್ಯಾರಾಥಾನ್‌ ಪೂರ್ಣಗೊಳಿಸಿದ ದೇಶದ ಮೊದಲ ಲೋಕಸಭಾ ಸದಸ್ಯ ಎಂಬ ಖ್ಯಾತಿ ತಮ್ಮದಾಗಿಸಿಕೊಂಡಿದ್ದಾರೆ. ತೇಜಸ್ವಿ ಸೂರ್ಯ ಅವರ ಜತೆ ಐಆರ್‌ಎಎಸ್‌ ಅಧಿಕಾರಿ ಶ್ರೇಯಸ್‌ ಗೋಪಾಲ್‌ ಹೊಸೂರ್‌ ಹಾಗೂ ಯುವ ಉದ್ಯಮಿ ಅನಿಕೇತ್‌ ಜೈನ್ ಅವರು ಪಾಲ್ಗೊಂಡಿದ್ದಾರೆ.

ಇದೊಂದು ಅಂತಾರಾಷ್ಟ್ರೀಯ ಮಟ್ಟದ ರಿಲೇ ಚಾಲೆಂಜ್‌ ಆಗಿದ್ದು, ಐರನ್‌ಮೆನ್‌ ೭೦.೩ ಎಂದು ಕರೆಯಲಾಗುತ್ತದೆ. ೧.೯ ಕಿಲೋ ಮೀಟರ್‌ ಈಜು, ೯೦ ಕಿಲೋ ಮೀಟರ್‌ ಸೈಕ್ಲಿಂಗ್‌ ಹಾಗೂ 21.1 ಕಿಲೋ ಮೀಟರ್‌ ಓಟ ಇದರಲ್ಲಿ ಸೇರಿಕೊಂಡಿದೆ. ಅಂತೆಯೇ ರೈಲ್ವೆ ಇಲಾಖೆಯಲ್ಲಿ ಹಿರಿಯ ಹಣಕಾಸು ಅಧಿಕಾರಿಯಾಗಿರುವ ಶ್ರೇಯಸ್‌ ಗೋಪಾಲ್‌ ಹೊಸೂರು ಅವರು ೧.೯ ಕಿಲೋ ಮೀಟರ್‌ ಈಜು ಪೂರ್ಣಗೊಳಿಸಿದ್ದು, ತೇಜಸ್ವಿ ಸೂರ್ಯ ಅವರು ೯೦ ಕಿಲೋ ಮೀಟರ್‌ ಸೈಕ್ಲಿಂಗ್‌ ಮಾಡಿದ್ದಾರೆ. ಅನಿಕೇತ್‌ ಅವರು ೨೧.೧ ಕಿಲೋ ಮೀಟರ್‌ ಓಟ ಮುಗಿಸಿದ್ದಾರೆ. ಒಟ್ಟಾರೆಯಾಗಿ ಮೂರು ಸ್ಪರ್ಧಿಗಳು ಸುಮಾರು ೭ ಗಂಟೆಯ ಅವಧಿಯಲ್ಲಿ ಈ ಕಠಿಣ ಸವಾಲನ್ನು ಮೀರಿದ್ದಾರೆ.

ತೇಜಸ್ವಿ ಅವರ ಯೋಜನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಫಿಟ್‌ ಇಂಡಿಯಾ ಅಭಿಯಾನಕ್ಕೆ ಪೂರಕವಾಗಿ ಈ ರಿಲೇಯಲ್ಲಿ ಪಾಲ್ಗೊಳ್ಳಲು ತೇಜಸ್ವಿ ಸೂರ್ಯ ಅವರು ನಿರ್ಧರಿಸಿದ್ದರು. ಅಂತೆಯೇ ಫಿಟ್ನೆಸ್ ಬಗ್ಗೆ ಸಾಕಷ್ಟು ಕಾಳಜಿ ಹೊಂದಿರುವ ತೇಜಸ್ವಿ ಅವರು ಸತತವಾಗಿ ಅಭ್ಯಾಸವೂ ನಡೆಸಿದ್ದು. ಶ್ರೇಯಸ್‌ ಹೊಸೂರು ಹಾಗೂ ಅನಿಕೇತ್‌ ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಸಿದ್ಧತೆ ನಡೆಸಿದ್ದರು.

ಐರನ್‌ಮೆನ್‌ ರಿಲೇ ಚಾಲೆಂಜ್‌ಗೆ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ ಅವರು ಚಾಲನೆ ಕೊಟ್ಟಿದ್ದರು. ಈ ಕೂಟದಲ್ಲಿ ಸುಮಾರು ೩೦ ದೇಶಗಳ ೧,೫೦೦ ಉತ್ಸಾಹಿಗಳು ಪಾಲ್ಗೊಂಡಿದ್ದರು.

ತಮ್ಮ ಪಾಲ್ಗೊಳ್ಳುವಿಕೆ ಕುರಿತು ಮಾತನಾಡಿದ ತೇಜಸ್ವಿ ಸೂರ್ಯ ಅವರು “ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಕ್ರೀಡೆ ಹಾಗೂ ಫಿಟ್ನೆಸ್‌ಗೆ ಸಾಕಷ್ಟು ಒತ್ತು ಕೊಟ್ಟಿದೆ. ಐರನ್‌ಮ್ಯಾನ್‌ ೭೦.೩ ರಿಲೇ ಚಾಲೆಂಜ್‌ ನಮ್ಮ ದೈಹಿಕ ಸಾಮರ್ಥ್ಯ ಪ್ರದರ್ಶನಕ್ಕೆ ಅತ್ಯುತ್ತಮ ವೇದಿಕೆಯಾಗಿದ್ದು, ನಿರಂತರವಾಗಿ ಉತ್ತಮ ಆರೋಗ್ಯ ಹಾಗೂ ಫಿಟ್ನೆಸ್‌ ಕಾಪಾಡಲು ನೆರವಾಗುತ್ತದೆ. ಈ ಮಾದರಿಯ ಸ್ಪರ್ಧೆಗಳಿಂದ ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಹೆಚ್ಚು ಅವಕಾಶ ಸಿಗುತ್ತದೆ,” ಎಂದು ಹೇಳಿದ್ದಾರೆ.

ಪ್ರೇರಣೆಯಾಗುವ ಉದ್ದೇಶ

ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಐಎಆರ್‌ಎಸ್‌ ಅಧಿಕಾರಿ ಶ್ರೇಯಸ್‌ ಹೊಸೂರು ಅವರು “ವಿಸ್ತಾರ ನ್ಯೂಸ್‌’ ಜತೆ ಮಾತನಾಡಿ “ರಿಲೇಯಲ್ಲಿ ಪಾಲ್ಗೊಳ್ಳುವುದು ತೇಜಸ್ವಿ ಸೂರ್ಯ ಅವರ ಯೋಜನೆಯಾಗಿದೆ. ಅಂತೆಯೇ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಯುವ ಜನರಿಗೆ ಪ್ರೇರಣೆಯಾಗುವುದೇ ನಮ್ಮ ಉದ್ದೇಶ,” ಎಂದು ಹೇಳಿದ್ದಾರೆ.

ಸಾಧಕ ಶ್ರೇಯಸ್‌

ಶ್ರೇಯಸ್‌ ಹೊಸೂರು ಅವರು ಕಳೆದ ಜೂನ್‌ನಲ್ಲಿ ಜರ್ಮನಿಯ ಹಂಬರ್ಗ್‌ನಲ್ಲಿ ನಡೆದ ‘ಐರನ್‌ಮ್ಯಾನ್‌’ ರೇಸ್‌ನಲ್ಲಿ ಪಾಲ್ಗೊಳ್ಳುವ ಮೂಲಕ ಸಾಧನೆ ಮಾಡಿದ್ದರು. ೩೫ ವರ್ಷದ ಅವರು ಈ ಸಾಧನೆ ಮಾಡಿದ ಭಾರತದ ಮೊಟ್ಟ ಮೊದಲ ಐಎಎಸ್‌ ಮಟ್ಟದ ಅಧಿಕಾರಿ ಎಂಬ ಖ್ಯಾತಿ ಗಳಿಸಿದ್ದರು. ಅದು ಕಠಿಣ ಸ್ಪರ್ಧೆಯಾಗಿದ್ದು ೩.೮ ಕಿಲೋ ಮೀಟರ್‌ ಈಜು, ೧೮೦ ಕಿಲೋ ಮೀಟರ್‌ ಸೈಕ್ಲಿಂಗ್ ಹಾಗೂ ವಿಶ್ರಾಂತಿರಹಿತವಾಗಿ ೪೨.೨ ಕಿಲೋ ಮೀಟರ್‌ ಮ್ಯಾರಾಥಾನ್ ಓಟವನ್ನು ಅವರು ಪೂರ್ಣಗೊಳಿಸಿದ್ದರು.

ಇದನ್ನೂ ಓದಿ | ಶೂಟಿಂಗ್‌ ವಿಶ್ವಕಪ್‌ನಲ್ಲೂ ಮಹಿಳೆಯರ ಮೇಲುಗೈ! ಭಾರತಕ್ಕೆ ಚಿನ್ನದ ಪದಕ

Exit mobile version