Site icon Vistara News

Samskruta Yuvajanotsava: ಸಂಸ್ಕೃತ ತಳಪಾಯದಿಂದಲೇ ಭಾರತೀಯ ಸಾಹಿತ್ಯ ಸೌಧ ಸುಭದ್ರ: ಎಂ.ಎಸ್. ನರಸಿಂಹಮೂರ್ತಿ

Samskruta Yuvajanotsava

ಬೆಂಗಳೂರು: ಸಂಸ್ಕೃತವು (Samskruta Yuvajanotsava) ಎಲ್ಲ ಭಾಷೆಗಳ ಸಾಹಿತ್ಯಕ್ಕೆ ಅಡಿಪಾಯವಾಗಿದ್ದು, ಅದರಿಂದಲೇ ಭಾರತೀಯ ಸಾಹಿತ್ಯವು ಗಟ್ಟಿಯಾಗಿ ನೆಲೆ ನಿಲ್ಲಲು ಸಾಧ್ಯವಾಗಿದೆ ಎಂದು ಹೆಸರಾಂತ ಹಾಸ್ಯ ಬರಹಗಾರ ಎಂ. ಎಸ್. ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.

ಮಲ್ಲೇಶ್ವರದ ಎಂಇಎಸ್ ಮಹವಿದ್ಯಾಲಯದ ಕಲಾವೇದಿ ವೇದಿಕೆಯಲ್ಲಿ ಮೈತ್ರೀ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನಮ್‌ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಸಂಸ್ಕೃತ ಯುವಜನೋತ್ಸವ’ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಸಂಸ್ಕೃತ ಜನ್ಯ ಪದಗಳನ್ನು ಅನೇಕ ಪ್ರಸಂಗಗಳಲ್ಲಿ ತಪ್ಪಾಗಿ ಬಳಸಲಾಗುತ್ತದೆ. ಇದರಿಂದ ಅಪಾರ್ಥವು ಬರುವ ಸಾಧ್ಯತೆಯೇ ಹೆಚ್ಚು. ಸಂಸ್ಕೃತ ಅಧ್ಯಯನದಿಂದ ಮಾತ್ರವೇ ಭಾಷಾ ಶುದ್ಧತೆಯ ಅರಿವಾಗುತ್ತದೆ. ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವ ಪ್ರತಿಯೊಬ್ಬರೂ ಸಂಸ್ಕೃತವನ್ನು ತಿಳಿದುಕೊಳ್ಳುವುದು ಅವಶ್ಯ ಎಂದು ತಿಳಿಸಿದರು.

ಇದನ್ನೂ ಓದಿ | Ram Navami 2023 : ರಾಮನವಮಿಯಂದು ಶ್ರೀರಾಮನ ಪೂಜೆ ಎಷ್ಟು ಹೊತ್ತಿಗೆ? ಆಚರಣೆ ಹೇಗೆ?

ಖ್ಯಾತ ವ್ಯಕ್ತಿತ್ವ ವಿಕಸನ ತರಬೇತುದಾರ ಸುಬ್ರಹ್ಮಣ್ಯ ಕುಳೇದು ಅವರು ಮಾತನಾಡಿ, ಇಂದು ಆಂಗ್ಲ ಶಿಕ್ಷಣವು ಬದುಕುವ ಕಲೆಯನ್ನು ಕಲಿಸಿಕೊಡುತ್ತಿಲ್ಲ. ಹಾಗಾಗಿ ಈ ನೆಲದಲ್ಲಿ ಹುಟ್ಟಿ, ವಿದ್ಯಾಭ್ಯಾಸವನ್ನು ಕಲಿತು ನೌಕರಿಗಾಗಿ ವಿದೇಶಕ್ಕೆ ತೆರಳುವ ಯುವಕರು ಮಕ್ಕಳ ಲಾಲನೆಯ ಕೆಲಸ ಬಂದಾಗ ತಮ್ಮ ಪೋಷಕರನ್ನು ತಾವಿರುವಲ್ಲಿಗೆ ಕರೆಸಿಕೊಳ್ಳುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮೈತ್ರೀ ಪ್ರತಿಷ್ಠಾನದ ಸಂಸ್ಥಾಪಕ, ಅಂಕಣಕಾರ ಡಾ. ಗಣಪತಿ ಹೆಗಡೆ ಅವರ ‘ಮನಸು ಅರಳಲಿ’ ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ಸಂಸ್ಕೃತ ಕಾರ್ಯಾಗಾರದಲ್ಲಿ ಇಡೀ ದಿನ ಸಂಸ್ಕೃತದಲ್ಲಿ ವಿಜ್ಞಾನ ವಿಷಯದ ಕುರಿತು ಡಾ. ಮುರಳೀಧರ ಶರ್ಮಾ, ಆಯುರ್ವೇದದ ಕುರಿತು ಡಾ. ನಿರಂಜನ ಯಳ್ಳೂರು ಸವಿವರವಾಗಿ ತಿಳಿಸಿಕೊಟ್ಟರು. ಕಲಾವಿದೆ ಭವಾನಿ ಹೆಗಡೆ ಹಾಗೂ ತಂಡದವರು ಪ್ರಸ್ತುತಪಡಿಸಿದ ಸಂಸ್ಕೃತ ಗೀತೆಗಳ ‘ಸಾಮರಸ್ಯಮ್’ ಆರ್ಕೆಸ್ಟ್ರಾ ಪಾಲ್ಗೊಂಡವರ ಮನಸನ್ನು ತಣಿಸಿತು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಐಐಎಸ್‌ಸಿ ನಿವೃತ್ತ ವಿಜ್ಞಾನಿ ಡಾ. ಕೆ. ಜೆ. ರಾವ್ ಮಾತನಾಡಿ, ವಿಷ್ಣು ಸಹಸ್ರನಾಮ, ಭಗವದ್ಗೀತೆಯು ಹೇಳಿಕೊಡುವ ವಿಜ್ಞಾನವನ್ನು ವೈಜ್ಞಾನಿಕವೆನಿಸಿದ ಈ ಯುಗದ ಯಾವ ಜ್ಞಾನಶಾಖೆಯೂ ತಿಳಿಸಿಕೊಡುವುದಿಲ್ಲ. ಇಂದಿನ ವಿಜ್ಞಾನವು ಕಂಡುಕೊಳ್ಳದ ಎಷ್ಟೋ ಸಂಗತಿಗಳನ್ನು ಭಗವಂತನು ಮನುಷ್ಯನ ದೇಹದಲ್ಲಿಯೇ ಇರಿಸಿದ್ದಾನೆ ಎಂದು ವಿವರಿಸಿದರು.

ಚಲನಚಿತ್ರ ನಟ. ನಿರ್ದೇಶಕ ಸುಚೇಂದ್ರ ಪ್ರಸಾದ್ ಅವರು ಮಾತನಾಡಿ, ಕನ್ನಡ ಚಿತ್ರರಂಗದ ಮೇಲೆ ಇತ್ತೀಚಿನ ದಿನಗಳಲ್ಲಿ ಸಂಸ್ಕೃತ ಭಾಷಾ ಪ್ರಭಾವವು ಉಂಟಾಗುತ್ತಿದೆ. ಇತ್ತೀಚೆಗೆ ಅನೇಕರು ತಮ್ಮ ಚಿತ್ರಗಳ ಶೀರ್ಷಿಕೆಗಾಗಿ ಸಂಸ್ಕೃತ ಭಾಷೆಯ ಪದಗಳ ಮೊರೆ ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆಯೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಂಸ್ಕೃತ ಕ್ಷೇತ್ರದಲ್ಲಿ 70ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಿರಿಯ ವಿದ್ವಾಂಸರಾದ ಪ್ರೊ. ಶೇಷಾದ್ರಿ ಅಯ್ಯಂಗಾರ್ ಅವರನ್ನು ಹಾಗೂ ಸಂಸ್ಕೃತ ಕಾರ್ಯಕ್ಷೇತ್ರದಲ್ಲಿ ಪದೋನ್ನತಿ ಹೊಂದಿದ ವಿದ್ವಾನ್ ನಾರಾಯಣ ಅನಂತ ಭಟ್ಟ, ವಿ.ಡಿ. ಭಟ್, ಡಾ. ಕೃಷ್ಣಮೂರ್ತಿ ಮಯ್ಯ ಅವರನ್ನು ಮೈತ್ರೀ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.

ಇದನ್ನೂ ಓದಿ | ದಶಮುಖ ಅಂಕಣ: ʻತಿರುತಿರುಗಿಯು ಹೊಸತಾಗಿರಿ ಎನುತಿದೆ ಋತುಗಾನ…ʼ

ಕಾರ್ಯಾಗಾರದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. 200ಕ್ಕೂ ಹೆಚ್ಚು ಸಂಸ್ಕೃತಾಸಕ್ತರು ಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಮೈತ್ರೀ ಪ್ರತಿಷ್ಠಾನದ ಸಂಸ್ಥಾಪಕ ಡಾ. ಗಣಪತಿ ಹೆಗಡೆ, ವಿಕ್ರಮ ಪ್ರಕಾಶನದ ಹರಿಪ್ರಸಾದ್, ಖ್ಯಾತ ಬರಹಗಾರ ಡಾ. ಗಣಪತಿ ಆರ್ ಭಟ್, ಚಿಂತಕ ಜೋತಿಶ್ವರ ಮತ್ತಿತ್ತರರು ಉಪಸ್ಥಿತರಿದ್ದರು.

Exit mobile version