ಗದಗ: ಮುಂಡರಗಿ ತಾಲೂಕನ್ನು ಬರ ಪೀಡಿತ ಪಟ್ಟಿಗೆ ಸೇರಿಸಲು ಒತ್ತಾಯಿಸಿ ಸೆ.25ರಂದು ಮುಂಡರಗಿ ಬಂದ್‌ಗೆ (Mundargi Bandh) ಕರೆ ನೀಡಲಾಗಿದೆ. ಗದಗ ಜಿಲ್ಲೆಯ ಏಳು ತಾಲೂಕಿನ ಪೈಕಿ, ಆರು ತಾಲೂಕು ಬರ ಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಆದರೆ ಮುಂಡರಗಿ ತಾಲೂಕನ್ನು ಕೈ ಬಿಟ್ಟಿದ್ದಕ್ಕೆ ಅನ್ನದಾತರು ಆಕ್ರೋಶವನ್ನು ಹೊರಹಾಕಿದ್ದಾರೆ.
ಮುಂಡರಗಿ ಪಟ್ಟಣದಲ್ಲಿ ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಒಬ್ಬ ಡಿವೈಎಸ್ಪಿ, ಇಬ್ಬರು ಸಿಪಿಐ, ನಾಲ್ಕು ಜನ ಪಿಎಸ್ಐ, 10 ಜನ ಎಎಸ್ಐ, 50 ಸಿಬ್ಬಂದಿ ಸೇರಿದಂತೆ ಎರಡು ಡಿಆರ್ ತುಕಡಿ ನಿಯೋಜನೆ ಮಾಡಲಾಗಿದೆ.
ವಿವಿಧ ರೈತಪರ, ಕನ್ನಡಪರ ಸಂಘ-ಸಂಸ್ಥೆಗಳು,ಕಾರ್ಮಿಕರ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕೋಟೆ ಭಾಗದ ಆಂಜನೇಯ ಸ್ವಾಮಿ ದೇವಸ್ಥಾನದಿಂದ ತಹಶೀಲ್ದಾರ ಕಚೇರಿವರೆಗೆ ಜಾಥಾ ನಡೆಸಿ ತಹಶೀಲ್ದಾರ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ನಾಡೋಜ ಅನ್ನದಾನೀಶ್ವರ ಶ್ರೀ ರ‍್ಯಾಲಿಗೆ ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ: Cauvery water dispute : ಮಳೆ ಬಾರದೇ ಇದ್ದರೆ ಸರ್ಕಾರದಿಂದ ಮೋಡ ಬಿತ್ತನೆ!
ಬಸ್ ಸಂಚಾರ ಬಂದ್; ಶಾಲಾ-ಕಾಲೇಜುಗಳಿಗೆ ರಜೆ
ಮುಂಡರಗಿ ಬಂದ್ ಹಿನ್ನೆಲೆಯಲ್ಲಿ ಬಸ್‌ಗಳಿಲ್ಲದೇ ನಿಲ್ದಾಣಗಳು ಬಿಕೋ ಎನ್ನುತ್ತಿವೆ. ಬಸ್‌ಗಳ ಸಂಚಾರವಿಲ್ಲದ ಗ್ರಾಮೀಣ ಪ್ರದೇಶದ ಜನರ ಪರದಾಡುತ್ತಿದ್ದಾರೆ. ಖಾಸಗಿ ವಾಹನಗಳ ಮೂಲಕ ಪ್ರಯಾಣವನ್ನು ಬೆಳಸುತ್ತಿದ್ದಾರೆ.
ಬಸ್ ಸಂಪರ್ಕ ಸಂಪೂರ್ಣ ಬಂದ್ ಆದ ಹಿನ್ನೆಲೆ ವಿದ್ಯಾರ್ಥಿಗಳು ಪರದಾಡಿದರು. ಶಾಲಾ ಕಾಲೇಜುಗಳಿಗೆ ರಜೆ ನೀಡಿದ ಹಿನ್ನೆಲೆ ವಿದ್ಯಾರ್ಥಿಗಳು ಮರಳಿ ಮನೆಯತ್ತ ತೆರಳಲು ಸಂಕಷ್ಟ ಅನುಭವಿಸಿದರು. ಬಸ್ ಸೌಲಭ್ಯ ಇಲ್ಲದ ಹಿನ್ನೆಲೆ ಖಾಸಗಿ ವಾಹನಗಳಲ್ಲಿ ತೆರಳಿದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ