| ಮಹಲಿಂಗೇಶ್ ಹಿರೇಮಠ, ಗದಗ
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರಜಾಪ್ರಭುತ್ವದ ದೇಗುಲವಾದ ನೂತನ ಸಂಸತ್ ಭವನ ಇತ್ತೀಚೆಗೆ ಉದ್ಘಾಟನೆಗೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಭವನವನ್ನು (New Parliament Building) ಲೋಕಾರ್ಪಣೆಗೊಳಿಸಿದರು. ಹಲವು ವಿಶೇಷತೆಗಳನ್ನು ಒಳಗೊಂಡಿರುವ ಸಂಸತ್ ಭವನವು ರಾಜದಂಡ (ಸೆಂಗೋಲ್) ಸ್ಥಾಪನೆಯಿಂದ ಹಿಡಿದು ಬಸವಣ್ಣನ ವಚನದವರೆಗೂ ಕರ್ನಾಟಕದ ಐತಿಹ್ಯವನ್ನು ಮೆರೆಯುವಂತೆ ಮಾಡಿದೆ. ಅದರಲ್ಲೂ ಕರ್ನಾಟಕದ ಪುರೋಹಿತರಿಂದಲೇ ನೂತನ ಭವನದ ಪೂಜಾ ಕೈಂಕರ್ಯ ನೆರವೇರಿದ್ದು ಮತ್ತೊಂದು ವಿಶೇಷ. ಇದರ ಜತೆಗೆ ಇನ್ನೂ ಒಂದು ವಿಶೇಷ ನಮ್ಮೆಲ್ಲರ ಗಮನ ಸೆಳೆಯುತ್ತಿದೆ.
ಸಂಸತ್ ಭವನದ ಸಂಪೂರ್ಣ ಒಳಾಂಗಣ ವಿನ್ಯಾಸವನ್ನು ಅತ್ಯಾಕರ್ಷಕವಾಗಿ, ವಿಭಿನ್ನ, ವೈಭವಪೂರಿತವಾಗಿ ಕಾಣುವಂತೆ ಮಾಡಿದ್ದು ಮುಂಬೈನ ನಾರ್ಶಿ & ಅಸೋಸಿಯೇಟ್ಸ್ ಕಂಪನಿ. ಈ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದವರು ಕನ್ನಡದ ಹುಡುಗ ಅನಿಲ್ ಅಂಗಡಿ (ತಿಗರಿ).
ಹೌದು, ಇಡೀ ಸಂಸತ್ ಭವನ ಕಟ್ಟಡದ ನಿರ್ಮಾಣ ಜವಾಬ್ದಾರಿಯನ್ನು ಟಾಟಾ ಕಂಪನಿಗೆ ವಹಿಸಿಕೊಡಲಾಗಿತ್ತು. ಒಳಾಂಗಣ ವಿನ್ಯಾಸ (ಇಂಟೀರಿಯರ್ ಡಿಸೈನ್) ಕೆಲಸವನ್ನು ನಾರ್ಶಿ & ಅಸೋಸಿಯೇಟ್ಸ್ ಕಂಪನಿ ನಿರ್ವಹಿಸಿದೆ. ಇದರಲ್ಲಿ ಪ್ಲ್ಯಾನಿಂಗ್ ಹೆಡ್ ಆಗಿ ಒಳಾಂಗಣ ವಿನ್ಯಾಸದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದವರಲ್ಲಿ ಅನಿಲ್ ಕೂಡ ಒಬ್ಬರು. ಇವರು ಉತ್ತರ ಕರ್ನಾಟಕದ ಗದಗ ಜಿಲ್ಲೆ ಮುಂಡರಗಿ ಪಟ್ಟಣದವರಾಗಿದ್ದು, ಇವರ ಅಜ್ಜ ಗುಂಡಪ್ಪ ಅಂಗಡಿ ವ್ಯಾಪಾರಸ್ಥರ ಸಾಲಿನಲ್ಲಿ ಅತ್ಯಂತ ಚಿರಪರಿತರು. ಬಹಳಷ್ಟು ಹಿಂದುಳಿದ ಪ್ರದೇಶವಾದ ತಾಲೂಕಿನಿಂದ ದೆಹಲಿಯ ಸಂಸತ್ ಭವನದವರೆಗೂ ತನ್ನ ಕೆಲಸದ ಮೂಲಕ ವಿಸ್ತಾರವಾಗಿ ಬೆಳೆದಿದ್ದು, ಕುಟುಂಬಸ್ಥರಲ್ಲಿ ಹಾಗೂ ಪಟ್ಟಣದ ಜನತೆಯಲ್ಲಿ ಸಂತಸ ಅಭಿಮಾನ ಮೂಡುವಂತೆ ಮಾಡಿದೆ.
ಇದನ್ನೂ ಓದಿ | New Parliament Building: ಸಂಸತ್ ಭವನದಲ್ಲಿ ಕನ್ನಡ ಕಂಪು; ಬಸವಣ್ಣನ ವಚನದ ಇಂಪು, ಇಲ್ಲಿದೆ ವಿಡಿಯೊ
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಅನಿಲ್, ಪ್ರೌಢ ಶಿಕ್ಷಣಕ್ಕಾಗಿ ದಾವಣಗೆರೆ ತೆರಳಿ ಅಲ್ಲಿಂದ ಗದಗಿನ ಜೆ.ಟಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಡಿಪ್ಲೊಮಾ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದು, ಬೆಂಗಳೂರಿನ ನಾಗಾರ್ಜುನ ಕಾಲೇಜಿನಲ್ಲಿ ಬಿಇ ಸಿವಿಲ್ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದರು. ನಂತರ ಪುಣೆಯ ನಿಕ್ಮಾರ್ ಇನ್ಸ್‌ಟಿಟ್ಯೂಟ್‌ನಲ್ಲಿ ಪ್ಲ್ಯಾನಿಂಗ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಎಂಬ ವಿಷಯದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.
ಪ್ಲ್ಯಾನಿಂಗ್ ಮುಖ್ಯಸ್ಥ
ಟಾಟಾ ಪ್ರಾಜೆಕ್ಟ್‌ನಲ್ಲಿ ನಿರ್ಮಾಣವಾದ ನೂತನ ಸಂಸತ್ ಭವನದ ಒಳಾಂಗಣ ವಿನ್ಯಾಸದ ಜವಾಬ್ದಾರಿ ತೆಗೆದುಕೊಂಡಿದ್ದ ಮುಂಬೈನ ನಾರ್ಸಿ & ಅಸೋಸಿಯೆಟ್ಸ್ ಅಡಿಯಲ್ಲಿ ಪ್ಲ್ಯಾನಿಂಗ್ ಮುಖ್ಯಸ್ಥರಾಗಿ ಅನಿಲ್ ಸೇವೆ ಸಲ್ಲಿಸಿದ್ದಾರೆ. ಒಂದೂವರೆ ವರ್ಷದಲ್ಲಿ ಪೂರ್ಣಗೊಂಡ ನೂತನ ಸಂಸತ್ ಭವನದಲ್ಲಿ ಇಂಟೀರಿಯರ್ ಡಿಸೈನ್ ಮಾಡಿದ ಕೆಲಸ ಇವರಿಗೆ ಸಾಕಷ್ಟು ಅನುಭವ ಹಾಗೂ ಹೆಮ್ಮೆ ತಂದುಕೊಟ್ಟಿದೆ. ಸಂಸತ್‌ನ ಒಳಾಂಗಣ ವಿನ್ಯಾಸ ಸಂಪೂರ್ಣ ನಾಗ್ಪುರ ಸಾಗವಾನಿ ಕಟ್ಟಿಗೆಯಿಂದ ವಿನ್ಯಾಸಗೊಳಿಸಲಾಗಿದ್ದು, ನವಿಲಿನ ಗರಿಯ ರೀತಿಯಲ್ಲಿ ಮಾಡಿದ್ದು ನಿಜಕ್ಕೂ ಒಂದು ಹೊಸ ಅನುಭವ ನೀಡುತ್ತದೆ. ಬೇರೆ ಕಡೆಗಳಲ್ಲಿ ಮಾಡಿದ ಕೆಲಸಕ್ಕೂ, ಭವನದಲ್ಲಿ ಮಾಡಿದ ಕೆಲಸ ಸಾಕಷ್ಟು ಖುಷಿ ತರುತ್ತದೆ. ನಾಲ್ಕೈದು ವರ್ಷ ಮಾಡಬೇಕಾದ ಕೆಲಸವನ್ನು ಕೇವಲ ಒಂದೂವರೆ ವರ್ಷದಲ್ಲಿ ಹಗಲು, ರಾತ್ರಿ ಎನ್ನದೇ ಪೂರ್ಣಗೊಳಿಸಿದ್ದು ನಿಜಕ್ಕೂ ಚಾಲೆಂಜಿಂಗ್ ಆಗಿತ್ತು ಎಂದು ಅನಿಲ್ ಹೇಳುತ್ತಾರೆ.
ಇದನ್ನೂ ಓದಿ | Loksabha 2024: Vistara Survey: ಮೋದಿ ಸರ್ಕಾರಕ್ಕೆ ಕನ್ನಡಿಗರು ಎಷ್ಟು ಅಂಕ ಕೊಟ್ಟರು?: ಇಲ್ಲಿದೆ ಮೋದಿ ಮಾರ್ಕ್ಸ್ ಕಾರ್ಡ್
ಸದ್ಯ ತಮ್ಮೂರಿನ ಹುಡುಗ ನೂತನ ಸಂಸತ್ ಭವನ ನಿರ್ಮಾಣದಲ್ಲಿ ಕೆಲಸ ಮಾಡಿದ್ದು ಮುಂಡರಗಿ ಪಟ್ಟಣದ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಅನೇಕರು ತಮ್ಮ ತಮ್ಮ ವಾಟ್ಸ್‌ಆ್ಯಪ್ ಸ್ಟೇಟಸ್‌ಗಳಲ್ಲಿ ಅನಿಲ್ ರಾಜದಂಡದ (ಸೆಂಗೋಲ್) ಜತೆಗೆ ನಿಂತಿರುವ ಫೋಟೊ ಹಾಕುವುದರ ಮೂಲಕ ತಮ್ಮ ಸಂತೋಷ ಹಾಗೂ ಅಭಿನಂದನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.