ಕೋಲಾರ: ಕೋಲಾರದ ಕಾಂಗ್ರೆಸ್ ಮುಖಂಡ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತ ಶ್ರೀನಿವಾಸ್ ಕೊಲೆ ಪ್ರಕರಣ (Murder Case) ಸಂಬಂಧ ಮಂಗಳವಾರ ಶ್ರೀನಿವಾಸಪುರ ಬಂದ್‌ಗೆ (Srinivaspura Bandh) ಕರೆ ನೀಡಲಾಗಿದೆ. ಈ ನಡುವೆ ಕುಟುಂಬಸ್ಥರು ಶ್ರೀನಿವಾಸ್ ಅವರ ಕೊಲೆ ಕೇಸ್‌ಗೆ ಟ್ವಿಸ್ಟ್ ಕೊಟ್ಟಿದ್ದಾರೆ.
ಕಳೆದ 23ರಂದು ನಡು ರಸ್ತೆಯಲ್ಲೇ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಎಂಬಾತನನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದರು. ಸದ್ಯ ಕೊಲೆ ಪ್ರಕರಣವು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಶ್ರೀನಿವಾಸ್ ಕೊಲೆಗೆ ದಲಿತ ಮುಖಂಡನೇ ನೇರ ಕಾರಣವೆಂದು ಮೃತ ಶ್ರೀನಿವಾಸರ ಅಣ್ಣನ ಮಗ ರಾಜೇಶ್ ನೇರ ಆರೋಪ ಮಾಡಿದ್ದಾರೆ.
ಶ್ರೀನಿವಾಸಪುರದ ಚಲ್ದಿಗಾನಹಳ್ಳಿ ದಲಿತ ಯುವಕನ ಸಾವಿಗೆ ಶ್ರೀನಿವಾಸ್ ಅವರೇ ಕಾರಣ ಎಂದು ದಲಿತ ಮುಖಂಡ ಸಂದೇಶ್ ಎಂಬಾತ ಸಭೆಯೊಂದರಲ್ಲಿ ನೇರವಾಗಿ ಆರೋಪ ಮಾಡಿದ್ದರು. ಕೊಲೆ ಆರೋಪಿ ವೇಣುಗೋಪಾಲ್ ಹಾಗೂ ಅವರ ಪತ್ನಿಯನ್ನು ಸಂದೇಶ್ ತಾಲೂಕು ಅಧ್ಯಕ್ಷರಾಗಿ ನೇಮಕ ಮಾಡಿದ್ದ. ಹಲವಾರು ಬಾರಿ ಶ್ರೀನಿವಾಸ್ ಅವರ ವಿರುದ್ಧವಾಗಿ ಸಭೆ ನಡೆಸಿದ್ದ. ಕೊಲೆ ಆರೋಪಿಗಳಿಗೂ ಸಂದೇಶ್‌ಗೂ ಒಡನಾಟವಿತ್ತು ಎಂದು ಆರೋಪಿಸಿದ್ದಾರೆ. ಸಭೆಗಳಲ್ಲಿ ಸಂದೇಶ್, ಶ್ರೀನಿವಾಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ವಿಡಿಯೊ ವೈರಲ್ ಆಗಿದೆ.
ಇದನ್ನೂ ಓದಿ: Murder Case: ಕೋಲಾರ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಕೊಲೆ ಆರೋಪಿಗಳಿಗೆ ಗುಂಡೇಟು
ಅಂಗಡಿ ಮುಂಗಟ್ಟುಗಳು ಬಂದ್
ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಶ್ರೀನಿವಾಸ್ ಅಲಿಯಾಸ್ ಸೀನಪ್ಪ ಕೊಲೆ ಪ್ರಕರಣ ಸಂಬಂಧ ಅ.31ರಂದು ಶ್ರೀನಿವಾಸಪುರ ತಾಲೂಕು ಬಂದ್‌ಗೆ ಕರೆ ನೀಡಲಾಗಿದೆ. ಕೊಲೆ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.
ದಲಿತ ಪರ ಸಂಘಟನೆಗಳು ಹಾಗೂ ಪ್ರಗತಿ ಪರ ಸಂಘಟನೆ ಬಂದ್‌ಗೆ ಕರೆನೀಡಿವೆ. ಬಸ್, ಆಟೋ ಸಂಚಾರ ಸ್ತಬ್ಧವಾಗಿದೆ. ಹೋಟೆಲ್, ಅಂಗಡಿ ಮುಂಗ್ಗಟ್ಟುಗಳು ಬಂದ್ ಆಗಿವೆ. ಇನ್ನು ಶ್ರೀನಿವಾಸಪುರ ಪಟ್ಟಣದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಶ್ರೀನಿವಾಸಪುರ ಬಂದ್ ಹಿನ್ನೆಲೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಬೈಕ್ ಮೂಲಕ ರ‍್ಯಾಲಿ ನಡೆಸಲಾಗುತ್ತಿದೆ. ಕೊಲೆಯಾದ ಶ್ರೀನಿವಾಸ್ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಮೆರವಣಿಗೆ ನಡೆಸಲಿದ್ದಾರೆ. ಸಂಘಟನೆಗಳು ಕರೆ ಕೊಟ್ಟಿರುವ ಬಂದ್‌ಗೆ ಬೆಂಬಲಿಸಲು ಹಳ್ಳಿಗಳಿಂದ ಜನರು ಬರುತ್ತಿದ್ದಾರೆ.
ಇದನ್ನೂ ಓದಿ: Murder Case : ಜಾತಿ ಕಲಹ; ಕಾಂಗ್ರೆಸ್ ಮುಖಂಡನ ಕಗ್ಗೊಲೆ!
ಏನಿದು ಕೊಲೆ ಪ್ರಕರಣ?
ಗೃಹ ಸಚಿವ ಜಿ. ಪರಮೇಶ್ವರ್ ಮತ್ತು ಮಾಜಿ ಸ್ಟೀಕರ್ ರಮೇಶ್ ಕುಮಾರ್ ಬೆಂಬಲಿಗನನ್ನು ಹಾಡಹಗಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Murder Case) ಮಾಡಿದ್ದರು. ಶ್ರೀನಿವಾಸಪುರ ತಾಲೂಕಿನ ಕಾಂಗ್ರೆಸ್ ಮುಖಂಡ ಕೌನ್ಸಿಲರ್ ಸೀನಪ್ಪ ಅಲಿಯಾಸ್ ಶ್ರೀನಿವಾಸ್ ದಾರುಣವಾಗಿ ಮೃತಪಟ್ಟಿದ್ದರು.
ಕಳೆದ ಅಕ್ಟೋಬರ್ 23ರಂದು ಮುಳಬಾಗಿಲು ರಸ್ತೆಯ ನಿರ್ಮಾಣ ಹಂತದ ರೆಸ್ಟೋರೆಂಟ್ ಬಳಿ ಆರು ಮಂದಿ ಅಪರಿಚಿತರು ದಾಳಿ ಮಾಡಿ ಹಲ್ಲೆ ನಡೆಸಿ ಪರಾರಿ ಆಗಿದ್ದರು. ತೀವ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶ್ರೀನಿವಾಸ್ ಅವರನ್ನು ಕೂಡಲೇ ಆರ್‌ಜೆ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಶ್ರೀನಿವಾಸ್ ಮೃತಪಟ್ಟಿದ್ದರು.
ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮರುದಿನವೇ ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದರು. ಆರೋಪಿಗಳನ್ನು ಬಂಧಿಸಿ ಕರೆತರುತ್ತಿದ್ದ ವೇಳೆ ಲಕ್ಷ್ಮೀಸಾಗರ ಅರಣ್ಯ ಪ್ರದೇಶದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಆರೋಪಿಗಳ ಕಾಲಿಗೆ ಗುಂಡು ಹಾರಿಸಲಾಯಿತು. ಹಲ್ಲೆ ವೇಳೆ ಇನ್‌ಸ್ಪೆಕ್ಟರ್ ವೆಂಕಟೇಶ್, ಪೊಲೀಸ್ ಸಿಬ್ಬಂದಿ ಮಂಜುನಾಥ್ ಮತ್ತು ನಾಗೇಶ್ ಅವರಿಗೂ ಗಾಯವಾಗಿತ್ತು.
ಪ್ರಮುಖ ಆರೋಪಿ ವೇಣುಗೋಪಾಲ್ ಹಾಗೂ ಮನೀಂದ್ರ ಕಾಲಿಗೆ ಗುಂಡೇಟು ಬಿದ್ದಿತ್ತು. ಮತ್ತೊಬ್ಬ ಆರೋಪಿ ಸಂತೋಷ್‌ಗೂ ಗಾಯವಾಗಿತ್ತು. ಶ್ರೀನಿವಾಸ್ ಕೊಲೆ ಪ್ರಕರಣದ ಆರೋಪಿಗಳಲ್ಲಿ ಆರು ಜನರ ಪೈಕಿ ಇದುವರೆಗೆ ಮೂವರ ಬಂಧನವಾಗಿದೆ. ಸುಪಾರಿ ಪಡೆದು ಕೊಲೆಗೆ ಯತ್ನಿಸಿರುವ ಆರೋಪವಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ