ಚಿತ್ರದುರ್ಗ: ಚಿತ್ರದುರ್ಗ ಮುರುಘಾಮಠ ಶ್ರೀಗಳ (Murugha Seer) ಮೇಲೆ ಪೋಕ್ಸೋ ಪ್ರಕರಣದ ದಾಖಲಾಗಿದ್ದ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರನ್ನು ಮಠದ ಆಡಳಿತಾಧಿಕಾರಿಯನ್ನಾಗಿ ರಾಜ್ಯ ಸರ್ಕಾರ ನೇಮಿಸಿತ್ತು. ಬಳಿಕ ಈ ಆದೇಶವನ್ನು ಹೈಕೋರ್ಟ್ ರದ್ದು ಪಡಿಸಿತ್ತು. ಈಗ ಹೈಕೋರ್ಟ್ ಆದೇಶದಂತೆ ಮುರುಘಾ ಮಠಕ್ಕೆ ನೂತನ ಆಡಳಿತಾಧಿಕಾರಿ ನೇಮಕವಾಗಿದ್ದು, ಜಿಲ್ಲಾ ನ್ಯಾಯಾಧೀಶೆ ಪ್ರೇಮಾವತಿ ಎಂ. ಮನಗೂಳಿ ಅವರು ಚಾರ್ಜ್ ಪಡೆದುಕೊಂಡಿದ್ದಾರೆ.
ಹೈಕೋರ್ಟ್ ಈಗ ತಾತ್ಕಾಲಿಕ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ಹೈಕೋರ್ಟ್ ಆದೇಶದಂತೆ ಜಿಲ್ಲಾ ನ್ಯಾಯಾಧೀಶೆ ಪ್ರೇಮಾವತಿ ಎಂ. ಮನಗೂಳಿ ಅವರು ಅಧಿಕಾರವನ್ನು ಸ್ವೀಕರಿಸಿದ್ದಾರೆ.
ಇದನ್ನೂ ಓದಿ: Rain News : ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ; ಇಂದು ಶಾಲಾ-ಕಾಲೇಜುಗಳಿಗೆ ರಜೆ, 20 ಜಿಲ್ಲೆಗಳಿಗೆ ಅಲರ್ಟ್
ಮುರುಘಾ ಮಠ ಹಾಗೂ ಎಸ್‌ಜೆಎಇಂ ಆಡಳಿತಾಧಿಕಾರಿಯಾಗಿ ಜಿಲ್ಲಾ ನ್ಯಾಯಾಧೀಶೆ ಪ್ರೇಮಾವತಿ ಎಂ, ಮನಗೂಳಿ ಅವರು ಕಾರ್ಯನಿರ್ವಹಣೆ ಮಾಡಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನ್ಯಾ. ಪ್ರೇಮಾವತಿ, “ನನಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಅದರಂತೆ ಜಾರ್ಜ್ ತೆಗೆದುಕೊಂಡಿದ್ದೇನೆ. ಮುಂದಿನ ಆದೇಶದವರೆಗೆ ಮಠ ಹಾಗೂ ವಿದ್ಯಾಪೀಠದ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಚಿತ್ರದುರ್ಗದ ಮುರುಘಾ ಮಠದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಆಡಳಿತಾಧಿಕಾರಿ ನೇಮಕ ರದ್ದು ಮಾಡಿ ಆದೇಶಿಸಿದ್ದ ಹೈಕೋರ್ಟ್
ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ (ಎಸ್‌ಜೆಎಂ) ಪೀಠಾಧಿಪತಿ ಬಂಧನವಾಗಿದ್ದ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರನ್ನು ಮಠದ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಈ ಆದೇಶ ಪ್ರಶ್ನಿಸಿ ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷ, ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಮೇ 22ರಂದು ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಮನವಿಯನ್ನು ಪುರಸ್ಕರಿಸಿತ್ತು. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ನ್ಯಾಯಪೀಠವು ರಾಜ್ಯ ಸರ್ಕಾರದ ಆದೇಶವನ್ನು ರದ್ದು ಪಡಿಸಿತ್ತು.
ನೇಮಕ ಅಧಿಕಾರ ಸರ್ಕಾರಕ್ಕೆ ಇಲ್ಲ
ವಾದ-ಪ್ರತಿವಾದ ಆಲಿಸಿದ ಕೋರ್ಟ್ ಈ ಆದೇಶವನ್ನು ನೀಡಿದ್ದು, ಮಠದ ಆಡಳಿತಾಧಿಕಾರಿಯಾಗಿ ನೇಮಕ ಮಾಡುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಮಠ ಮತ್ತು ಶೈಕ್ಷಣಿಕ ಆಡಳಿತ ನಿರ್ವಹಣೆಗೆ ಯೋಜನೆ ರೂಪಿಸಲು ಮಠದ ಭಕ್ತಾದಿಗಳು ಮತ್ತು ವೀರಶೈವ ಲಿಂಗಾಯತ ಸಮುದಾಯದ ಪ್ರಮುಖ ಮುಖಂಡರು ನಿರ್ಧರಿಸಬಹುದು ಎಂದೂ ಹೇಳಿತ್ತು.
ನಾಲ್ಕು ವಾರದವರೆಗೆ ಮುಂದುವರಿಯಬಹುದು
ಇಂತಹ ಸಮಸ್ಯೆಗಳು ಉದ್ಭವಿಸಿದಾಗ ನಾಲ್ಕು ವಾರದವರೆಗೆ ಸರ್ಕಾರ ನೇಮಿಸಿದ ಆಡಳಿತಾಧಿಕಾರಿ ಮುಂದುವರಿಯಬಹುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿತ್ತು.
ಇದನ್ನೂ ಓದಿ: Violence against women : ಸಾಗರದ ಕಾಸ್ಪಾಡಿಯಲ್ಲಿ ಸಿನಿಮಾ ನಟಿ ಮೇಲೆ ದಾಳಿ; ಮಾರಣಾಂತಿಕ ಹಲ್ಲೆ
ಸರ್ಕಾರದ ಆದೇಶದಲ್ಲೇನಿತ್ತು?
2022ರ ಡಿಸೆಂಬರ್ 13ರಂದು ಮುರುಘಾ ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿರುವುದರಿಂದ ಸದರಿ ಸಂಸ್ಥೆಯ ನಿರ್ವಹಣೆಯಲ್ಲಿ ಈ ಸಂಸ್ಥೆಯ ದಿನನಿತ್ಯದ ಕಾರ್ಯಚಟುವಟಿಕೆಗೆ ಹಾಗೂ ಮೇಲುಸ್ತುವಾರಿ ನಡೆಸಲು ಸಾರ್ವಜನಿಕ ಹಿತದೃಷ್ಟಿಯಿಂದ ಮಠದ ಚರಾ-ಸ್ಥಿರ ಆಸ್ತಿಗಳನ್ನು ಸಂರಕ್ಷಿಸುವ ಹಿತದೃಷ್ಟಿಯಿಂದ ಹಾಗೂ ಸಂಸ್ಥೆಯ ಹಣ ದುರುಪಯೋಗ ಆಗದಂತೆ ಲೆಕ್ಕಪತ್ರಗಳನ್ನು ನಿರ್ವಹಿಸುವ ಹಾಗೂ ಒಟ್ಟಾರೆ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಡೆಸುವ ಹಿತದೃಷ್ಟಿಯಿಂದ ಪಿ.ಎಸ್.ವಸ್ತ್ರದ್ ಅವರನ್ನು ಮುಂದಿನ ಆದೇಶದವರೆಗೆ ಸದರಿ ಟ್ರಸ್ಟ್ ಮತ್ತು ಶಿಕ್ಷಣ ಸಂಸ್ಥೆಗೆ ಆಡಳತಾಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ಸರ್ಕಾರ ಆದೇಶವನ್ನು ಹೊರಡಿಸಿತ್ತು. ಬಳಿಕ ಹೈಕೋರ್ಟ್ ಈ ಆದೇಶವನ್ನು ರದ್ದುಪಡಿಸಿತ್ತು. ಅಲ್ಲದೆ, ತಾತ್ಕಾಲಿಕ ಆಡಳಿತಾಧಿಕಾರಿಯನ್ನಾಗಿ ಜಿಲ್ಲಾ ನ್ಯಾಯಾಧೀಶರ ನೇಮಕಕ್ಕೆ ಆದೇಶವನ್ನು ಹೊರಡಿಸಿತ್ತು. ಈಗ ಹೈಕೋರ್ಟ್ ಆದೇಶದಂತೆ ಜಿಲ್ಲಾ ನ್ಯಾಯಾಧೀಶೆ ಪ್ರೇಮಾವತಿ ಎಂ. ಮನಗೂಳಿ ಅವರು ಅಧಿಕಾರವನ್ನು ಸ್ವೀಕರಿಸಿದ್ದಾರೆ.