ಬೆಂಗಳೂರು: ಪಂಡಿತ್ ಭೀಮಸೇನ್ ಜೋಶಿ ಸಂಗೀತೋತ್ಸವವನ್ನು (Music Event ) ಸೆಪ್ಟೆಂಬರ್ 16-17ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಪ್ರಸಿದ್ಧ ಕಲಾ ಸಂಸ್ಥೆಗಳಾದ ಬಿಐಎಎಫ್ ಹಾಗೂ ಎಐಎಂ ವತಿಯಿಂದ ಅಂತಾರಾಷ್ಟ್ರೀಯ ಕಲಾ ಮಹೋತ್ಸವದ ಅಂಗವಾಗಿ ಏರ್ಪಡಿಸಿರುವ ಈ ಕಾರ್ಯಕ್ರಮಕ್ಕೆ ಪ್ರಖ್ಯಾತ ಕಲಾ ಸಂಸ್ಥೆಯಾದ ಸಪ್ತಕ ಸಹಯೋಗ ಇದೆ.
ಸೆಪ್ಟೆಂಬರ್ 16-17ರಂದು ಸಂಜೆ 6.30ಕ್ಕೆ ಮಲ್ಲೇಶ್ವರದಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಭಾರತ ರತ್ನ ಪಂ. ಭೀಮಸೇನ್ ಜೋಶಿ ಜನ್ಮ ಶತಮಾನೋತ್ಸವದ ಅಂಗವಾಗಿ ವಿಶೇಷ ನಾದಾರಾಧನೆ ನಡೆಯಲಿದೆ.
ಸಂಗೀತೋತ್ಸವಕ್ಕೆ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಚಾಲನೆ ನೀಡಲಿದ್ದಾರೆ. ಸೆಪ್ಟೆಂಬರ್ 16ರ ಶುಕ್ರವಾರ ಸಂಜೆ ಪ್ರಾರಂಭದಲ್ಲಿ ಖ್ಯಾತ ಕಲಾವಿದರಾದ ಪಂ.ರೋಣು ಮಜುಮದಾರ ಅವರ ಕೊಳಲು ವಾದನದ ಜತೆಗೆ ಡಾ. ಸ್ವೀಕಾರ ಕಟ್ಟಿ ಅವರ ಸಿತಾರ್ ಹಾಗೂ ಹೃಷಿಕೇಶ ಮಜುಮದಾರ ಅವರ ಕೊಳಲು ವಾದನ ಜುಗಲ್ ಬಂದಿ ಕಾರ್ಯಕ್ರಮ ಇರಲಿದ್ದು, ರಾಜೇಂದ್ರ ನಾಕೊಡ್ ತಬಲಾ ಸಾಥ್ ನೀಡಲಿದ್ದಾರೆ.
ನಂತರ ಸುಪ್ರಸಿದ್ಧ ಕಲಾವಿದರಾದ ಪಂ. ಪರಮೇಶ್ವರ ಹೆಗಡೆ ಗಾಯನ ಕಛೇರಿಗೆ ಗುರುಮೂರ್ತಿ ವೈದ್ಯ ಅವರು ತಬಲಾ ಹಾಗೂ ಮಧುಸೂದನ ಭಟ್ಟ ಅವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
ಸೆಪ್ಟೆಂಬರ್ 17ರ ಶನಿವಾರ ಸಂಜೆ 6.30 ಎಸ್‌ಪಿಸಿಎ ಸಂಸ್ಥೆಯ ಯುವ ಕಲಾವಿದರಿಂದ ಲಯ ವೈಭವ ಕಾರ್ಯಕ್ರಮ ಇರಲಿದೆ. ಜತೆಗೆ 7ರಿಂದ ಮುಂಬಯಿನ ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯ ಗಾಯಕಿ ಡಾ. ಅಶ್ವಿನಿ ಭಿಡೆ ದೇಶಪಾಂಡೆ ಗಾಯನ ಕಾರ್ಯಕ್ರಮ ನಡೆಯಲಿದೆ. ಇವರಿಗೆ ಪಂ. ರವೀಂದ್ರ ಯಾವಗಲ ಅವರ ತಬಲಾ ಹಾಗೂ ಪಂ.ವ್ಯಾಸಮೂರ್ತಿ ಕಟ್ಟಿ ಅವರ ಹಾರ್ಮೋನಿಯಂ ಸಾಥ್ ಇದೆ.
ಸಂಗೀತೋತ್ಸವಕ್ಕೆ ಪ್ರವೇಶ ಉಚಿತವಾಗಿದ್ದು, ಮೊದಲು ಬಂದವರಿಗೆ ಮೊದಲ ಪ್ರಾಶಸ್ತ್ಯ ಇರಲಿದೆ. ಭಾರತ ರತ್ನ ಪಂ. ಭೀಮಸೇನ್ ಜೋಶಿ ಅವರ ನೆನಪಿಗೆ ಈ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಜಿ.ಎಸ್. ಹೆಗಡೆ, ಸಪ್ತಕ, ಮೊಬೈಲ್ ಸಂಖ್ಯೆ- 7019434992 ಅಥವಾ 9535511888 ಸಂಪರ್ಕಿಸಿ.