Site icon Vistara News

Music Program | ಮುಂಬಯಿಯಲ್ಲಿ ಸಪ್ತಕದ ಗಾನಸುಧೆ; ಶಾಸ್ತ್ರೀಯ ಸಂಗೀತಕ್ಕೆ ತಲೆಬಾಗಿದ ಸಂಗೀತ ಪ್ರಿಯರು

ಸಪ್ತಕ ಬೆಂಗಳೂರು

ಬೆಂಗಳೂರು: ಸಪ್ತಕ ಸಂಸ್ಥೆ ಹಾಗೂ ಸಂಗೀತ ಪ್ರೇಮಿ ಮಂಡಳ ಸಹಯೋಗದೊಂದಿಗೆ ಮುಂಬಯಿಯಲ್ಲಿ ಎರಡು ದಿನದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು (Music Program) ಯಶಸ್ವಿಯಾಗಿ ಜರುಗಿದೆ. ಮೊದಲ ದಿನ ಅನಘಾ ಭಟ್ಟರ ಸುಶ್ರಾವ್ಯ, ಶಾಸ್ತ್ರೋಕ್ತ ಗಾಯನ ಕೇಳಿದ ಸಂಗೀತ ಪ್ರಿಯರು ಸಂತಸ ವ್ಯಕ್ತಪಡಿಸಿದರು.

ರಾಗ, ತಿಲವಾಡ ತಾಳ, ಆಲಾಪನೆಯೊಂದಿಗೆ ಆರಂಭವಾದ ಗಾಯನವು ಸಭಿಕರ ಮೆಚ್ಚುಗೆ ಗಳಿಸಿತು. ಅಲ್ಲದೆ ದೃತ ಲಯದಲ್ಲಿ ಹಾಡಿದ ಬೋಲ ತಾನ್‌ಗಳು, ಗ್ವಾಲಿಯರ್ ಘರಾನಾದಲ್ಲಿ ಸ್ವರಗಳ ಏರಿಳಿತವು ಎಲ್ಲರ ತಲೆದೂಗುವಂತೆ ಮಾಡಿತ್ತು. ನಂತರ ಹಾಡಿದ ಗೌಡ ಮಲ್ಹಾರ ರಾಗವಂತೂ ಗುರುಗಳಾದ ಪಂ. ಉಲ್ಲಾಸ ಕಶಾಳಕರ ಅವರ ಗಾಯನವನ್ನು ನೆನಪಿಸಿತು.

ಕೊನೆಯಲ್ಲಿ ಧನಂಜಯ ಹೆಗಡೆ ಅವರ ಸಂಗೀತ ಸಂಯೋಜನೆಯ ಪುರಂದರ ದಾಸರ ಭಜನೆಯಾದ “ಎಂದಿಗಾವುದೋ ನಿನ್ನ ದರುಶನ” ಸಂಗೀತ ಪ್ರಿಯರಿಗೆ ಮುದ ನೀಡಿತು. ಇವರಿಗೆ ಪುಣೆಯ ಅಜಿಂಕ್ಯಾ ಗಲಾಂಡೆ ತಬಲಾ ಹಾಗೂ ಥಾಣೆಯ ಸುಪ್ರಿಯಾ ಜೋಶಿ ಅವರು ಹಾರ್ಮೋನಿಯಂ ಸಾಥ್ ನೀಡಿದರು. ಕಾರ್ಯಕ್ರಮದ ಆಯೋಜನೆಗೆ ಮುಖ್ಯ ಕಾರಣರಾದ ಆಗ್ರಾ ಘರಾಣೆಯ ಹಿರಿಯ ಗಾಯಕರಾದ ಪಂ. ಜಿ. ಜಿ. ಜೋಶಿ ಥಾಣೆ ಅವರು ಸಹ ಭಾಗಿಯಾಗಿ, ಮೆಚ್ಚುಗೆ ವ್ಯಕ್ತಪಡಿಸಿದರು.

ಉತ್ತರಕನ್ನಡ ಕಲಾವಿದರಿಗೆ ಬಹುಪರಾಕ್‌ ಎಂದ ಮುಂಬಯಿಗರು
ಮುಂಬಯಿನ ಠಾಕೂರ್ ವಿಲೇಜ್‌ನಲ್ಲಿರುವ ವಿಲೇಜ್ ಮ್ಯೂಸಿಕ್ ಕ್ಲಬ್ ಇವರ ಸಹಯೋಗದಲ್ಲಿ ನಡೆದ “ಸ್ವರ ಧಾರಾ” ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಕಲಾವಿದರ ತಂಡ ಸಂಗೀತ ಮೋಡಿ ಮಾಡಿತು. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಯುವ ಕಲಾವಿದ, ಪ್ರಸ್ತುತ ಮುಂಬಯಿಯಲ್ಲಿ ಪಂ.ಮಿಲಿಂದ ರಾಯ್ಕರ್ ಬಳಿ ಅಭ್ಯಾಸ ಮಾಡುತ್ತಿರುವ ಕಿಶೋರ ಹೆಗಡೆ ಕೊಂಡದಕುಳಿ ಅವರು ಕೊಳಲು ವಾದನದಲ್ಲಿ ಪುರಿಯಾ ಕಲ್ಯಾಣ ರಾಗವನ್ನು ಸುಮಾರು ಐವತ್ತು ನಿಮಿಷಗಳ ಕಾಲ ಬಹು ಸೊಗಸಾಗಿ ನುಡಿಸಿ, ನಂತರ ಹತ್ತು ನಿಮಿಷಗಳ ಕಾಲ ಧುನ್ ನುಡಿಸಿದರು. ಇವರಿಗೆ ಯುವ ತಬಲಾ ವಾದಕ ಸೋಹಮ್ ಪರಾಲೆ ಸಾಥ್ ನೀಡಿದರು.

ನಂತರ ಆಗ್ರಾ ಘರಾಣೆಯ ಪ್ರಸಿದ್ಧ ಹಿರಿಯ ಗಾಯಕರಾದ ಉಸ್ತಾದ್ ರಾಜಾ ಮಿಯಾ ಖಾನ್ ಅವರು ರಾಗ ಯಮನ್ ಕಲ್ಯಾಣ್‌ದಲ್ಲಿ ತಮ್ಮ ಗಂಭೀರ ಕಂಠದ ಮೂಲಕ ಹಾಡಿ ರಂಜಿಸಿದರು. ಖಾನದಾನೀ ಪರಂಪರೆಯ ಎರಡು ಪಾರಂಪಾರಿಕ ಬಂದಿಶ್‌ಗಳು ಅವರಿಂದ ಅದ್ಭುತವಾಗಿ ಮೂಡಿಬಂತು. ಈ ವೇಳೆ ಸಭಿಕರ ಕರತಾಡನ ಕೇಳಿ ಬಂದವು. ಪಂ. ರಾಜೇಂದ್ರ ಅಂತರ್ಕರ್ ಅವರ ತಬಲಾ ಹಾಗೂ ಪಂ.ಶ್ರೀನಿವಾಸ ಆಚಾರ್ಯ ಅವರ ಹಾರ್ಮೋನಿಯಂ ಸಾಥ್ ಉಸ್ತಾದರ ಗಾಯನ ಕಳೆ ಕಟ್ಟುವಲ್ಲಿ ಯಶಸ್ವಿ ಆಯಿತು.

ದೂರದ ಬೆಂಗಳೂರಿನಿಂದ ಬಂದು ಏರ್ಪಡಿಸಿದ ಎರಡೂ ಕಾರ್ಯಕ್ರಮಗಳೂ ಯಶಸ್ವಿಯಾಗಿ ನಡೆದಿರುವುದಕ್ಕೆ ಸಪ್ತಕ ಸಂಸ್ಥೆಯ ಸಂಚಾಲಕ ಜಿ.ಎಸ್.ಹೆಗಡೆ ಸಂತಸ ವ್ಯಕ್ತಪಡಿಸಿದರು. ಅಲ್ಲದೆ, ಸಭಿಕರ ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದರು.

ಇದನ್ನೂ ಓದಿ | ಅಸ್ಸಾಂ-ಮೇಘಾಲಯ ಗಡಿಯಲ್ಲಿ ಫೈರಿಂಗ್​; ಸ್ಮಗ್ಲಿಂಗ್​ ಟ್ರಕ್​ ಹಿಡಿಯುವ ಕಾರ್ಯಾಚರಣೆಯಲ್ಲಿ 6 ಜನರ ಹತ್ಯೆ

Exit mobile version