ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನವನ್ನು ಸಾರ್ವಜನಿಕ ಕಾರ್ಯಕ್ರಮಗಳ ಬಳಕೆಗೆ ಮುಕ್ತ ಮಾಡಲು ಹಿಂದೂ ಸಂಘಟನೆಗಳು ಒತ್ತಾಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನಚರಣೆಯಂದು ಧ್ವಜಾರೋಹಣೆ ಮಾಡಲು ಮುಸ್ಲಿಂ ವಕ್ಫ್ ಬೋರ್ಡ್ ಚಿಂತನೆ ನಡೆಸಿದೆ.
ವಕ್ಫ್ ಬೋರ್ಡ್ ಅಧ್ಯಕ್ಷ ಷಫಿ ಸ ಅದಿ ಮಾತನಾಡಿ, ಈಗಾಗಲೆ ನಮ್ಮ ಎಲ್ಲ ವಕ್ಫ್ ಸಂಸ್ಥೆಗಳಲ್ಲಿ ಸ್ವಾತಂತ್ರೋತ್ಸವ, ಗಣರಾಜ್ಯತ್ಸವ ನಡೆಯುತ್ತಿದೆ. ಸ್ವಾತಂತ್ರೋತ್ಸವ ಧ್ವಜಾರೋಹಣ ನಮಗೇನೂ ಹೊಸದಲ್ಲ. ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಜತೆಗೆ ಮಾತನಾಡಿ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ನಡೆಸಲು ಕಾನೂನು ತೊಡಕು ಇದೆಯೇ ಎಂದು ಚರ್ಚಿಸುತ್ತೇನೆ. ಬಳಿಕ ಎಲ್ಲರೂ ಸೇರಿ ರಾಷ್ಟ್ರೀಯ ಹಬ್ಬ ಆಚರಿಸೋಣ ಎಂದು ತಿಳಿಸಿದ್ದಾರೆ.
ಸನಾತನ ಧರ್ಮ ಸಂಸ್ಥೆಯ ಮೋಹನ್‌ಗೌಡ ಮಾತನಾಡಿ, ವಕ್ಫ್ ಬೋರ್ಡ್ ಮೂಲಕವೇ ಧ್ವಜ ಹಾರಿಸುವುದಾದರೆ ಸ್ವಾಗತ ಮಾಡುತ್ತೇವೆ. ಅದು ಬಿಬಿಎಂಪಿ ಆಸ್ತಿ ಆಗಿರುವುದರಿಂದ ನಾವೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ. ಹಾಗೆಯೇ ಬಿಬಿಎಂಪಿ ಸ್ವತ್ತು ಆಗಿರುವುದರಿಂದ ಅಲ್ಲಿ ಯೋಗ ದಿನಾಚರಣೆಗೂ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮೈದಾನದಲ್ಲಿ ಮುಸ್ಲಿಮರು ಮಾತ್ರ ಹಬ್ಬ ಆಚರಣೆ ಮಾಡುತ್ತಾರೆ. ಹೀಗಾಗಿ ಅಂತಾರಾಷ್ಟ್ರೀಯ ಯೋಗದಿನ(ಜೂ.21), ಸ್ವಾತಂತ್ರ್ಯ ದಿನಾಚರಣೆ(ಆ.15), ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ(ಆ.14,15) ಹಾಗೂ ವಿವಿಧ ಹಿಂದೂ ಹಬ್ಬಗಳ ಆಚರಣೆಗೆ ಶ್ರೀರಾಮ ಸೇನೆ, ವಿಶ್ವ ಸನಾತನ ಪರಿಷತ್, ಒಂದೇ ಮಾತರಂ ಸಮಾಜ ಸೇವಾ ಸಂಸ್ಥೆಯಿಂದ ಬಿಬಿಎಂಪಿಗೆ ಮನವಿ ಸಲ್ಲಿಸಲಾಗಿತ್ತು.
ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಇತ್ತೀಚೆಗೆ ಹಿಂದೂಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ | ಈದ್ಗಾ ಮೈದಾನ ವಿವಾದ: ಸ್ವಾತಂತ್ರ್ಯ ದಿನಾಚರಣೆಗೆ ಅವಕಾಶ ಕೋರಿ ಬಿಬಿಎಂಪಿಗೆ ಪತ್ರ