ಮಂಗಳೂರು: ಬುರ್ಖಾ ಧರಿಸಿ ಹಿಂದಿ ಐಟಂ ಸಾಂಗ್‌ಗೆ (Item Song) ಹೆಜ್ಜೆ ಹಾಕಿದ್ದ ಘಟನೆಗೆ ಸಂಬಂಧಿಸಿ ಡ್ಯಾನ್ಸ್ ಮಾಡಿದ ನಾಲ್ವರು ವಿದ್ಯಾರ್ಥಿಗಳನ್ನು ಅಮಾನತು ಮಾಡಿ ವಾಮಂಜೂರು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ ಆದೇಶಿಸಿದೆ.
ನಾಲ್ವರು ವಿದ್ಯಾರ್ಥಿಗಳು ಮುಸ್ಲಿಂ ಯುವತಿಯರ ವೇಷವನ್ನು ಹಾಕಿಕೊಂಡು, ಬುರ್ಖಾ ಧರಿಸಿ ಡ್ಯಾನ್ಸ್ ಮಾಡಿದ್ದರು. ಕಾಲೇಜಿನ ಆಡಿಟೋರಿಯಂನ ವೇದಿಕೆಯಲ್ಲಿ ಡ್ಯಾನ್ಸ್ ಮಾಡಿದ್ದು, ಅಕ್ಕಪಕ್ಕ ಹಲವು ವಿದ್ಯಾರ್ಥಿಗಳು ಕುಳಿತು ವೀಕ್ಷಣೆ ಮಾಡಿರುವುದು ಕಂಡುಬಂದಿದೆ. ಅಲ್ಲದೆ, ಇದನ್ನು ಕೆಲವರು ವಿಡಿಯೊ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಆದರೆ, ಈ ಡ್ಯಾನ್ಸ್ ಅನ್ನು ಮುಸ್ಲಿಂ ವಿದ್ಯಾರ್ಥಿಗಳೇ ಮಾಡಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಡ್ಯಾನ್ಸ್ ಮಾಡಿದ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದ್ದು, ವೈರಲ್ ಆಗಿದೆ. ಈ ವೇಳೆ ಇದು ಮುಸ್ಲಿಂ ಸಮುದಾಯದವರ ಆಕ್ರೋಶಕ್ಕೆ ಗುರಿಯಾಗಿದೆ. ಅಲ್ಲದೆ, ಕಾಲೇಜಿನ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಈ ಹಿನ್ನಲೆಯಲ್ಲಿ ಬುರ್ಕಾ ಹಾಕಿಕೊಂಡು ಡ್ಯಾನ್ಸ್ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಾಮಂಜೂರು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಸುಧೀರ್ ಅವರು ನಾಲ್ಕೂ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಮುಂದಿನ ವಿಚಾರಣೆವರೆಗೆ ಈ ಆದೇಶ ಚಾಲ್ತಿಯಲ್ಲಿರಲಿದೆ ಎಂದು ಹೇಳಿದ್ದಾರೆ. ಅಲ್ಲದೆ, ಯಾವುದೇ ಸಮುದಾಯಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವ ಯಾವುದೇ ರೀತಿಯ ಚಟುವಟಿಕೆಯನ್ನು ಬೆಂಬಲಿಸುವುದಿಲ್ಲ ಹಾಗೂ ಆಯೋಜನೆಗೆ ಅವಕಾಶ ಕೊಡುವುದಿಲ್ಲ. ಕ್ಯಾಂಪಸ್‌ನಲ್ಲಿರುವ ಎಲ್ಲ ವಿದ್ಯಾರ್ಥಿಗಳು ನಮ್ಮ ಕಾಲೇಜಿನ ನೀತಿಯನ್ನು ಅಳವಡಿಕೆ ಮಾಡಿಕೊಳ್ಳುವುದು ಕಡ್ಡಾಯ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ | IT raid | ಹಲವು ಉದ್ಯಮಿಗಳ ಮನೆಗೆ ಐಟಿ ದಾಳಿ