Site icon Vistara News

ನಗರಸಭೆ ಆಯುಕ್ತರ ಮೇಲೆ ಹಲ್ಲೆ ಮಾಡಿದವರ ಬಂಧಿಸದಿದ್ದರೆ ಮುಸ್ಲಿಮರಿಗೆ ಹಳ್ಳಿಯಲ್ಲೂ ವ್ಯಾಪಾರಕ್ಕೆ ಅವಕಾಶವಿಲ್ಲ; ಪ್ರತಿಭಟನಾಕಾರರ ಎಚ್ಚರಿಕೆ

ಸಾಗರ ನಗರಸಭೆ ಪ್ರತಿಭಟನೆ ಮುಸ್ಲಿಂ ವ್ಯಾಪಾರ

ಸಾಗರ: ಇಲ್ಲಿನ ಬೀದಿಬದಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಯೊಬ್ಬನ ಮೇಲೆ ಬುಧವಾರ (ನ.೩೦) ದೌರ್ಜನ್ಯ ನಡೆಸಿ ಅಂಗಡಿ ತೆರವು ಮಾಡಿಸಲಾಗಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್‌ ಪ್ರತಿಭಟನೆ ಆರಂಭಿಸಿತ್ತು. ಈ ವೇಳೆ ಗಲಾಟೆಯು ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು, ಕೋಮು ಬಣ್ಣಕ್ಕೆ ತಿರುಗುವ ಲಕ್ಷಣ ಗೋಚರಿಸಿದೆ. ನಗರಸಭೆ ಆಯುಕ್ತರ ಮೇಲೆ ಪ್ರತಿಭಟನಾಕಾರರ ಗುಂಪು ಹಲ್ಲೆ ನಡೆಸಿದೆ ಎಂದು ಒಂದು ಸಮುದಾಯದವರು ಪ್ರತಿಭಟನೆ ನಡೆಸಿದ್ದು, ತಪ್ಪಿತಸ್ಥರ ಬಂಧನಕ್ಕೆ ಆಗ್ರಹಪಡಿಸಿತ್ತು. ಪೊಲೀಸರ ಮಧ್ಯಪ್ರವೇಶದಿಂದ ಸದ್ಯಕ್ಕೆ ಪರಿಸ್ಥಿತಿ ಶಾಂತಗೊಂಡಿದೆ.

ಕಾಂಗ್ರೆಸ್‌ ಜತೆ ಹೋರಾಟದಲ್ಲಿ ಭಾಗಿಯಾಗಿದ್ದ ಮುಸ್ಲಿಂ ಸಮುದಾಯದವರು ಸೇರಿ ಇತರರು ಹೋರಾಟದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಗರಸಭೆ ಆಯುಕ್ತರ ಕಚೇರಿಗೆ ಪ್ರತಿಭಟನಾನಿರತರ ಗುಂಪು ನುಗ್ಗಿದೆ. ಅದೇ ವೇಳೆ ಇನ್ನೊಂದು ಗುಂಪು ಆಯುಕ್ತರ ಪರವಾಗಿ ನಿಂತಿದೆ. ಈ ನಡುವೆ ಎರಡು ಗುಂಪುಗಳ ಮಧ್ಯೆ ನಡೆದ ಗಲಾಟೆಯಲ್ಲಿ ಆಯುಕ್ತರ ಮೇಲೆ ಹಲ್ಲೆ ನಡೆದಿದೆ. ಇದನ್ನು ಖಂಡಿಸಿ ಈಡಿಗ ಸಮುದಾಯದವರು ನಗರಸಭೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಆಯುಕ್ತರ ಸಹೋದರ ಗಣಪತಿ ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಇದು ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲು ಕಾರಣವಾಗಿತ್ತು.

ಏನಿದು ಪ್ರಕರಣ?
ಬೀದಿ ಬದಿಯ ಹಣ್ಣು ವ್ಯಾಪಾರಿ ಮೇಲೆ ದೌರ್ಜನ್ಯ ನಡೆಸಿ, ಅಂಗಡಿ ತೆರವುಗೊಳಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಬುಧವಾರ ಪ್ರತಿಭಟನೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ನಗರಸಭೆ ಆಯುಕ್ತರ ಕೊಠಡಿಯಲ್ಲಿ ಎರಡು ಗುಂಪಿನ ನಡುವೆ ಜಟಾಪಟಿಯೂ ನಡೆದಿತ್ತು. ನಗರಸಭೆ ಪ್ರಭಾರ ಆಯುಕ್ತ ನಾಗಪ್ಪ ಅವರ ಮೇಲೆ ಇದೇ ವೇಳೆ ಹಲ್ಲೆ ನಡೆದಿದೆ. ಇದಕ್ಕೆ ಪ್ರತಿಯಾಗಿ ಈಡಿಗ ಸಮುದಾಯದ ಜನ ಪ್ರತಿಭಟನೆ ನಡೆಸುವಾಗ ಆಯುಕ್ತರ ಸಹೋದರ ಗಣಪತಿ ಹೃದಯಾಘಾತದಿಂದ ನಿಧನರಾಗಿದ್ದರು. ಇದು ಪ್ರಕರಣ ಜಟಿಲಗೊಳ್ಳಲು ಕಾರಣವಾಗಿದೆ.

ಇದನ್ನೂ ಓದಿ | Muslim college | ವಕ್ಫ್‌ ಅಧ್ಯಕ್ಷರ ಹೇಳಿಕೆ ವೈಯಕ್ತಿಕ, ಮಹಿಳಾ ಕಾಲೇಜಿನ ಪ್ರಸ್ತಾಪವಿಲ್ಲ ಎಂದ ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ

ಗುರುವಾರ ಶವ ಇಟ್ಟು ಪ್ರತಿಭಟನೆ
ನಗರಸಭೆ ಎದುರು ಪ್ರಭಾರ ಆಯುಕ್ತ ಎಚ್.ಕೆ. ನಾಗಪ್ಪ ಸಹೋದರ ಗಣಪತಿ ಶವ ಇಟ್ಟು ಗುರುವಾರ (ಡಿ.೧) ಪತ್ರಿಭಟನೆ ನಡೆಸಲಾಗಿದೆ. ಆಯುಕ್ತರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪ್ರತಿಭಟನಾಕಾರರು‌ ಆಗ್ರಹಿಸಿದರು. ಗಣಪತಿ ಶವ ಸಂಸ್ಕಾರ ಮಾಡಲು ನಿರಾಕರಿಸಿದ ಪ್ರತಿಭಟನಾಕಾರರು, ಆರೋಪಿಗಳನ್ನು ಬಂಧಿಸುವಂತೆ ಪಟ್ಟುಹಿಡಿದರು. ಪೊಲೀಸರು ಆರೋಪಿಗಳನ್ನು ಬಂಧಿಸದೆ ಇದ್ದರೆ ಮುಸ್ಲಿಮರಿಗೆ ಹಳ್ಳಿ ಹಳ್ಳಿಗಳಲ್ಲೂ ವ್ಯಾಪಾರಕ್ಕೆ ಬಿಡುವುದಿಲ್ಲ. ಹಳ್ಳಿಗಳಿಗೆ ಮೀನು ಮಾರಾಟಕ್ಕೆ ಬರುವವರಿಗೂ ತಡೆ ಒಡ್ಡುತೇವೆ ಎಂದರು. ಕೊನೆಗೆ ಪೊಲೀಸರು ಮನವೊಲಿಸುವಲ್ಲಿ ಯಶಸ್ವಿಯಾದ ನಂತರ, ನಗರದಲ್ಲಿ ಶವದ ಮೆರವಣಿಗೆ ನಡೆಸಿ ಅಂತಿಮ ಸಂಸ್ಕಾರ ನಡೆಸಲಾಯಿತು.

ಹಲ್ಲೆಗೆ ಆಕ್ರೋಶ
ಸಾಗರದ ಮಾರಿಕಾಂಬ ದೇವಸ್ಥಾನದಲ್ಲಿ ತಳ್ಳುವ ಗಾಡಿಗಳನ್ನು ಬುಧವಾರ ತೆರವುಗೊಳಿಸಿರುವ ವಿಚಾರ ರಾಜಕೀಯ ಬಣ್ಣಪಡೆದು ನಂತರ ಆಯುಕ್ತರ ಕಚೇರಿ ಒಳಗೆ ನುಗ್ಗಿ ದಾಂಧಲೆ ನಡೆದ ಘಟನೆಯು ನಗರಸಭೆ ಸಿಬ್ಬಂದಿಯ ಆಕ್ರೋಶಕ್ಕೆ ಕಾರಣವಾಗಿತ್ತು. ದಾಂಧಲೆ ನಡೆಸಿದ ಆರೋಪಿಗಳನ್ನು ಬಂಧಿಸುವ ತನಕ ನಗರಸಭೆಯ ಪೌರಕಾರ್ಮಿಕರು ಕಸ ತೆಗೆಯುವುದಿಲ್ಲ ಮತ್ತು ಕುಡಿಯುವ ನೀರು ಬಿಡುವುದಿಲ್ಲವೆಂದು ಹೇಳಿ ಗುರುವಾರ ಬೆಳಗ್ಗೆಯಿಂದಲೇ ಪ್ರತಿಭಟನೆ ನಡೆಸಿದರು. ಆಯುಕ್ತರಿಗೇ ರಕ್ಷಣೆಯಿಲ್ಲದಿದ್ದರೆ ನಮ್ಮ ಗತಿ ಏನು ಎಂದು ಪ್ರಶ್ನಿಸಿದ್ದಾರೆ.

ಬಂಧನವಾಗದಿದ್ದರೆ ಮತ್ತೆ ಪ್ರತಿಭಟನೆ ಎಚ್ಚರಿಕೆ
ಈಗ ನಗರಸಭೆ ಆಯುಕ್ತರ ಮೇಲೆ ಹಲ್ಲೆ ಮಾಡಿದವರನ್ನು ಬಂಧನ ಮಾಡಬೇಕು. ಇಲ್ಲದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಲ್ಲದೆ, ಮುಸ್ಲಿಂ ವ್ಯಾಪಾರಿಗಳ್ಯಾರಿಗೂ ಯಾವ ಪ್ರದೇಶದಲ್ಲಿಯೂ, ತಾಲೂಕಿನ ಯಾವ ಹಳ್ಳಿಯಲ್ಲಿಯೂ ವ್ಯಾಪಾರ ಮಾಡಲು ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನು ಪ್ರತಿಭಟನಾಕಾರರು ರವಾನಿಸಿದ್ದಾರೆ.

ಇದನ್ನೂ ಓದಿ | Muslim college | ವಕ್ಫ್‌ ಬೋರ್ಡ್‌ನಲ್ಲಿ ಚರ್ಚೆ ಆಗಿದೆ, ಕಾಲೇಜು ಮುಸ್ಲಿಂ ಹೆಣ್ಮಕ್ಕಳಿಗೆ ಸೀಮಿತವಲ್ಲ ಎಂದ ವಕ್ಫ್‌ ಅಧ್ಯಕ್ಷ

Exit mobile version