ವಿಜಯನಗರ: ʻʻಅಂಜನಾದ್ರಿಯಲ್ಲಿ ಡ್ರಗ್ ಮಾಫಿಯಾ, ಸೆಕ್ಸ್ ಮಾಫಿಯಾ ನಡೆಯುತ್ತಿದೆ. ಕೆಲವರು ಅಕ್ರಮವಾಗಿ ರೆಸಾರ್ಟ್ ನಿರ್ಮಿಸಿಕೊಂಡು ಈ ದಂಧೆ ನಡೆಸುತ್ತಿದ್ದಾರೆ. ಆನೆಗೊಂದಿ ಭಾಗದಲ್ಲಿ ಇದು ಯಥೇಚ್ಛವಾಗಿ ನಡೆಯುತ್ತಿದೆ. ಇವುಗಳನ್ನು ತ್ವರಿತವಾಗಿ ತೆರವು ಮಾಡಬೇಕು. ಇಲ್ಲವಾದರೆ ಶ್ರೀರಾಮ ಸೇನೆ ದೊಡ್ಡ ಮಟ್ಟದ ಹೋರಾಟ ನಡೆಸಲಿದೆʼʼ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮಂಗಳವಾರ ಅಂಜನಾದ್ರಿಯಲ್ಲಿ ನಡೆದ ಹನುಮ ಮಾಲೆ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರು ಮಾತನಾಡಿದರು.
ಅಂಜನಾದ್ರಿಯಲ್ಲಿ ಮುಸ್ಲಿಂ ಸೇರಿದಂತೆ ಅನ್ಯ ಧರ್ಮೀಯರಿಂದ ವ್ಯಾಪಾರ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಧಾರ್ಮಿಕ – ದತ್ತಿ ಇಲಾಖೆ ನಿಯಮ ಪ್ರಕಾರ ಇದಕ್ಕೆ ಅವಕಾಶವಿಲ್ಲ. ಗೋಹಂತಕರಿಗೆ, ನಾಸ್ತಿಕರಿಗೆ ಅಂಜನಾದ್ರಿಗೆ ಬಂದು ವ್ಯಾಪಾರ ಮಾಡಲು ಯಾಕೆ ಅವಕಾಶ ಕೊಡಬೇಕು ಎಂದು ಪ್ರಮೋದ್ ಮುತಾಲಿಕ್ ಪ್ರಶ್ನಿಸಿದರು.
ಅಂಜನಾದ್ರಿ ಉತ್ಸಾಹ ಚುನಾವಣೆಗೆ ಸೀಮಿತವಾಗದಿರಲಿ
ಅಂಜನಾದ್ರಿ ಹನುಮಧಾರಿಗಳ ಯಾತ್ರೆ ಅತ್ಯಂತ ಯಶಸ್ವಿಯಾಗಿದೆ. ರಾಜ್ಯದ ಮೂಲೆ ಮೂಲೆಯಿಂದ ಲಕ್ಷಾಂತರ ಜನ ಬಂದಿದ್ದರು. ಈ ಬಾರಿ ರಾಜಕಾರಣಿಗಳು ಕೂಡಾ ಬಂದಿದ್ದಾರೆ. ಅವರೆಲ್ಲ ಚುನಾವಣೆ ಇರುವುದರಿಂದ ಬಂದಿದ್ದಾರೆ. ರಾಜಕೀಯ ವ್ಯಕ್ತಿಗಳ ಉತ್ಸಾಹ ಹೀಗೇ ಇರಲಿ. ಹಿಂದೂ ಸಮುದಾಯವನ್ನು ಬೆಂಬಲಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ಮುತಾಲಿಕ್ ಹೇಳಿದರು.
ಅಯೋಧ್ಯೆಯಿಂದ ಅಂಜನಾದ್ರಿಗೆ ರೈಲು ಓಡಲಿ
ʻʻಸರಕಾರ ಅಂಜನಾದ್ರಿ ಅಭಿವೃದ್ಧಿಗೆ 120 ಕೋಟಿ ರೂ. ಅನುದಾನ ಘೋಷಣೆ ಮಾಡಿದೆ. ಆದರೆ, ಇದು ಕೇವಲ ಎಲೆಕ್ಷನ್ ಘೋಷಣೆ ಆಗಬಾರದು. ತ್ವರಿತವಾಗಿ ಹನುಮ ಜನ್ಮ ಭೂಮಿ ಅಭಿವೃದ್ಧಿ ಕೆಲಸ ಮಾಡಬೇಕು. ರಾಮನ ಜನ್ಮಭೂಮಿ ಅಯೋಧ್ಯೆ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ಧಿ ಮಾಡ್ತೇವೆ ಎಂದಿದ್ದಾರೆ. ಇದನ್ನು ಪಾಲಿಸಬೇಕು. ರಾಮ ಜನ್ಮಭೂಮಿ ಅಯೋಧ್ಯೆಯಿಂದ ಹನುಮ ಜನ್ಮಭೂಮಿ ಅಂಜನಾದ್ರಿಗೆ ನೇರ ರೈಲು ಮಾರ್ಗ ಆಗಬೇಕು. ಈ ಬಗ್ಗೆ ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡುತ್ತೇನೆʼʼ ಎಂದರು ಮುತಾಲಿಕ್.
ಲಿವಿಂಗ್ ಟುಗೆದರ್ ಬ್ಯಾನ್ ಮಾಡ್ಬೇಕು
ದೆಹಲಿಯಲ್ಲಿ ನಡೆದ ಶ್ರದ್ಧಾ ಕೊಲೆ ಪ್ರಕರಣವನ್ನು ಉಲ್ಲೇಖಿಸಿದ ಪ್ರಮೋದ್ ಮುತಾಲಿಕ್, ʻʻಶ್ರದ್ಧಾ ಕೊಲೆ ಕೇಸ್ ಇಡೀ ಮಾನವ ಕುಲ ತಲೆ ತಗ್ಗಿಸುವ ವಿಚಾರ. ಇದಕ್ಕೆ ಕಾರಣವಾಗಿದ್ದು ಲಿವಿಂಗ್ ಟುಗೆದರ್. ಸರಕಾರ ಲಿವಿಂಗ್ ಟುಗೆದರನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಬೇಕುʼʼ ಎಂದು ಆಗ್ರಹಿಸಿದರು.
ʻʻನಮ್ಮ ದೇಶದಲ್ಲಿ ಮದುವೆ ಅನ್ನೋದು ವ್ಯವಹಾರ ಅಲ್ಲ. ಅತ್ಯಂತ ಶ್ರೇಷ್ಠವಾದದ್ದು, ಪವಿತ್ರವಾದದ್ದು, ಸುಸಂಸ್ಕೃತ ಸಂಬಂಧ. ಅದನ್ನು ಪಾಶ್ಚಾತ್ಯ ಸಂಸ್ಕೃತಿಯಾದ ಲಿವಿಂಗ್ ಟುಗೆದರ್ ಹಾಳು ಮಾಡುತ್ತಿದೆ. ಕೇಂದ್ರ ಸರ್ಕಾರ ಕಾನೂನಿನ ಮೂಲಕ ಇದನ್ನು ನಿಷೇಧಿಸಲು ಕ್ರಮ ಕೈಗೊಳ್ಳಬೇಕುʼʼ ಎಂದು ಒತ್ತಾಯಿಸಿದರು.
ಲವ್ ಜಿಹಾದ್ ವಿರುದ್ಧವೂ ಕಾನೂನು ಬೇಕು
ಹೆಣ್ಣು ಮಕ್ಕಳನ್ನು ಮರುಳುಗೊಳಿಸಿ ಅವರನ್ನು ಮದುವೆಯಾಗಿ ಮತಾಂತರ ಮಾಡುವ, ಭಯೋತ್ಪಾದನೆಯಲ್ಲಿ ತೊಡಗಿಸುವ ಲವ್ ಜಿಹಾದ್ ಕಾರ್ಯಾಚರಣೆ ವಿರುದ್ಧವೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾನೂನು ತರಬೇಕು ಎಂದು ಅವರು ಒತ್ತಾಯಿಸಿದರು. ಉತ್ತರ ಪ್ರದೇಶ, ಆಸ್ಸಾಂನಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಮಾಡಿದ್ದಾರೆ. ಅದು ರಾಜ್ಯದಲ್ಲೂ ಜಾರಿ ಆಗಬೇಕು ಎಂದು ಮುತಾಲಿಕ್ ಆಗ್ರಹಿಸಿದರು.
ಹಿಂದು ಹೋರಾಟಗಾರರಿಗೆ ೨೫ ಟಿಕೆಟ್ ಕೊಡಬೇಕು
ಮುಂದಿನ ಚುನಾವಣೆಯಲ್ಲಿ 25 ಮಂದಿ ಹಿಂದು ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂದು ಮುತಾಲಿಕ್ ಬಿಜೆಪಿಯನ್ನು ಆಗ್ರಹಿಸಿದರು.
ನಾಲ್ಕೈದು ಕ್ಷೇತ್ರದಲ್ಲಿ ಹುಡುಕಾಟ
ಪ್ರಾಮಾಣಿಕ ಹಿಂದು ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದೇನೆ. ಮಹಿಳಾ, ಎಸ್.ಸಿ ಎಸ್.ಟಿ ಮೀಸಲಾತಿ ರೀತಿಯಲ್ಲೇ ಹಿಂದುಗಳಿಗೂ ಮೀಸಲಾತಿ ಕೊಡಬೇಕು ಎಂದರು. ʻʻನಾನು ಈ ಬಾರಿ ಎಲೆಕ್ಷನ್ ನಲ್ಲಿ ಸ್ಪರ್ಧೆ ಮಾಡ್ತೇನೆ. ನಾಲ್ಕೈದು ಕ್ಷೇತ್ರದಲ್ಲಿ ಸರ್ಚ್ ಮಾಡುತ್ತಿದ್ದೇನೆ. ಒಂದರಲ್ಲಿ ನಿಲ್ಲುತ್ತೇನೆʼʼ ಎಂದು ಹೇಳಿದರು.
ಶ್ರೀರಾಮ ಸೇನೆಯಿಂದ ಇಬ್ಬರು ಮೂವರು ಸ್ವಾಮೀಜಿಗಳು ಸ್ಪರ್ಧೆ ಮಾಡ್ತಾರೆ. ಜೇವರ್ಗಿ ತಾಲೂಕಿನ ಕರುಣೇಶ್ವರ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಧಾರವಾಡದ ಪರಮಾತ್ಮ ಸ್ವಾಮೀಜಿ ಕಣಕ್ಕಿಳಿಯಲಿದ್ದಾರೆ. ಮೂರನೆಯ ಸ್ವಾಮೀಜಿ ಹೆಸರು ಮುಂದೆ ಬಹಿರಂಗ ಮಾಡುವುದಾಗಿ ತಿಳಿಸಿದರು.
ಇದನ್ನೂ ಓದಿ | Criminal politics | ಬಿಜೆಪಿಗೆ ನಾನು ಕಾಣೊಲ್ಲ, ಅವರಿಗೆ ರೌಡಿಗಳು, ಗೂಂಡಾಗಳು, ದುಡ್ಡಿರೋರೇ ಬೇಕು ಎಂದ ಮುತಾಲಿಕ್