ಬೆಂಗಳೂರು: ದೇಶದ 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಯುವಜನತೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಸ್ವರಾಜ್ಯ ಸಂಗ್ರಾಮದ ಅರಿವು, ಮಹತ್ವ ಮೂಡಿಸುವುದು ಸೇರಿದಂತೆ ಇತ್ಯಾದಿ ಮೌಲ್ಯಗಳನ್ನು ಪೋಷಿಸುವ 15 ದಿನಗಳ ರಾಷ್ಟ್ರಮಟ್ಟದ ಯುವ ಅಭಿಯಾನವನ್ನು ಆಗಸ್ಟ್ 1 ರಿಂದ 15ರವರೆಗೆ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಶೈಕ್ಷಣಿಕ ಸಂಸ್ಥೆ “ದಿಶಾ ಭಾರತ್” ಆಯೋಜಿಸಿರುವ 15 ದಿನಗಳ ರಾಷ್ಟ್ರಮಟ್ಟದ ‘My Bharat- ನನ್ನ ಭಾರತ ಯುವ ಅಭಿಯಾನ’ದ ಮೂರನೇ ಆವೃತ್ತಿ ಇದಾಗಿದ್ದು, ಕಳೆದರಡು ವರ್ಷಗಳಲ್ಲಿ 12 ಲಕ್ಷಕ್ಕೂ ಹೆಚ್ಚು ಯುವಜನತೆ ಪಾಲ್ಗೊಂಡಿದ್ದರು. 15 ದಿನಗಳ ಕಾಲ ನಡೆಯುವ ಈ ಯುವ ಅಭಿಯಾನದಲ್ಲಿ 20 ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಹೆಚ್ಚಿನ ಕಾರ್ಯಕ್ರಮಗಳು ದಿಶಾ ಭಾರತ್ ಫೇಸ್‌ಬುಕ್ ಪೇಜ್ www.facebook.com/DishaBharat ಮೂಲಕ ಪ್ರಸಾರವಾಗಲಿದೆ.
ಅಭಿಯಾನದಲ್ಲಿ 20 ರೀತಿಯ ಕಾರ್ಯಕ್ರಮಗಳು:
ವಿದ್ಯಾರ್ಥಿಗಳಿಂದ ದೇಶಭಕ್ತಿ ಕಾರ್ಯಕ್ರಮ:
- ಪ್ರತಿನಿತ್ಯ ಸಂಜೆ 4ರಿಂದ ವಿವಿಧ ರಾಜ್ಯದ ಕಾಲೇಜುಗಳ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಕಥಾಮಾಲಿಕೆ, ರಾಷ್ಟ್ರೀಯ ವಿಚಾರಗಳ ಕುರಿತು ಭಾಷಣ, ದೇಶಭಕ್ತಿಗೀತೆಗಳ ಗಾಯನ, ಸಾಮಾಜಿಕ ವಿಷಯಗಳ ಕುರಿತು ವಿಶ್ಲೇಷಣೆ, ರಾಷ್ಟ್ರಭಾವಜಾಗರಣದ ನೃತ್ಯಗಳು ಸೇರಿದಂತೆ ವಿವಿಧ ಚಟುವಟಿಕೆ ನಡೆಯಲಿದೆ.
- ತಜ್ಞರಿಂದ ಉಪನ್ಯಾಸ ಸರಣಿ: ಭಾರತದ ಸ್ವಾತಂತ್ರ್ಯ ಸಂಗ್ರಾಮ, ಸ್ವಾತಂತ್ರೋತ್ತರ ಭಾರತ, ಭವಿಷ್ಯದ ಭಾರತ-ಇತ್ಯಾದಿ ವಿವಿಧ ವಿಷಯಗಳ ಕುರಿತು ಆಗಸ್ಟ್ 1 ರಿಂದ 15ರ ತನಕ ಪ್ರತಿನಿತ್ಯ ಸಂಜೆ 7ಕ್ಕೆ ಆನ್‌ಲೈನ್ ಉಪನ್ಯಾಸ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ವಿಷಯತಜ್ಞರು ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
- ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ: ‘ಸ್ವರಾಜ್ಯ ಸಂಗ್ರಾಮ ಮತ್ತು ರಾಷ್ಟ್ರ ಭಾವ ಜಾಗರಣ’ “Swarajya Movement and Rise of Nationalism” ಎಂಬ ವಿಷಯದ ಕುರಿತು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
- ಭಗತ್ ಸಿಂಗ್ ಕುರಿತ ನಾಟಕ: ಅಪ್ರತಿಮ ಕ್ರಾಂತಿಕಾರಿ ಭಗತ್‌ಸಿಂಗ್ ಅವರ ಜೀವನ ಆಧಾರಿತ ‘ಭಗತ್‌ಸಿಂಗ್’ ಕಿರುನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ. ವಿವಿಧ ಕಾಲೇಜುಗಳಲ್ಲಿ, ಆಯ್ದ ಸಂಘ ಸಂಸ್ಥೆಗಳಲ್ಲಿ, ಸಾಂಸ್ಕೃತಿಕ ವೇದಿಕೆಗಳಲ್ಲಿ ಈ ನಾಟಕ ಪ್ರದರ್ಶನಗೊಳ್ಳಲಿದೆ.
- ವಾಕಥಾನ್: ಯುವಕರಲ್ಲಿ ಪ್ರೇರಣೆ, ಕ್ರಾಂತಿಕಾರಿಗಳ ಕುರಿತು ಆದರ್ಶ, ದೇಶದ ಬಗ್ಗೆ ಸ್ವಾಭಿಮಾನ ಮೂಡಿಸುವ ಉತ್ಸಾಹದಾಯಕ ಕಾಲ್ನಡಿಗೆ ಕಾರ್ಯಕ್ರಮ ‘ಸ್ವರಾಜ್ಯ ವಾಕಥಾನ್’ ಅನೇಕ ಕಡೆಗಳಲ್ಲಿ ನಡೆಯಲಿದೆ.
- ಯುವಸಂವಾದ: ಭಾರತದ ಪ್ರಾಚೀನ ಹಿರಿಮೆ ಗರಿಮೆಗಳು, ವರ್ತಮಾನದ ತಲ್ಲಣಗಳು ಹಾಗೂ ಭವಿಷ್ಯದ ಭಾರತ ಎಂಬ ಮೂರು ವಿಷಯಗಳ ಕುರಿತು ಯುವಚಿಂತಕರಿಂದ ಸಂವಾದ ಕಾಠ್ಯಕ್ರಮಗಳು ಮೂಡಿಬರಲಿದೆ.
- ನನ್ನ ರಾಜ್ಯ – ನಮ್ಮ ಸ್ವಾತಂತ್ರ್ಯ ಹೋರಾಟಗಾರರು: ಭಾರತದ ಎಲ್ಲ ರಾಜ್ಯಗಳ ವಿಶೇಷತೆಗಳನ್ನು ಬಿಂಬಿಸುವ ಹಾಗೂ ಆಯಾ ರಾಜ್ಯಗಳ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಮಾಹಿತಿ ನೀಡುವ ‘ನನ್ನ ರಾಜ್ಯ – ನಮ್ಮ ಸ್ವಾತಂತ್ರ್ಯ ಹೋರಾಟಗಾರರು’ ಎಂಬ ವಿಡಿಯೋ ಆಧಾರಿತ ವಿಶಿಷ್ಟ ಕಾರ್ಯಕ್ರಮವು ಪ್ರತಿನಿತ್ಯ ಪ್ರಸಾರಗೊಳ್ಳಲಿದೆ.
- ಸ್ವರಾಜ್ಯ- 75 ವಿಶೇಷ ಸಂಚಿಕೆ: ಯುವ ಬರಹಗಾರರಿಂದ ಆಹ್ವಾನಿತ ಬರಹಗಳ ಸಂಗ್ರಹದ ಸಂಚಿಕೆ ‘ಮೈ ಭಾರತ್: ಸ್ವರಾಜ್ಯ -75’ ಪ್ರಕಟವಾಗಲಿದೆ.
- ಸ್ವರಾಜ್ಯ -75 ಉಪನ್ಯಾಸ: ವಿವಿಧ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯ ಕ್ಯಾಂಪಸ್‌ಗಳಲ್ಲಿ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ‘ಸ್ವರಾಜ್ಯ -75 ವಿಶೇಷ ಉಪನ್ಯಾಸ’ ಕಾರಕ್ರಮಗಳನ್ನು ಆಯೋಜಿಸಲಾಗಿದೆ.
- ‘ನನ್ನ ಭಾರತ’ ಕುರಿತು ಗಣ್ಯರ ಅನಿಸಿಕೆ ವಿಡಿಯೋ: ಭಾರತದ ಹಿರಿಮೆ ಗರಿಮೆಗಳು, ದೇಶದ ಸ್ಥಿತಿ-ಗತಿಗಳು, ಭವಿಷ್ಯದ ಭಾರತದ ಯುವಕರ ಕನಸುಗಳು ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಗಣ್ಯರು, ಶಿಕ್ಷಣ ತಜ್ಞರು ನೀಡಿರುವ ವಿಶೇಷ ವಿಡಿಯೋ ಸಂದೇಶಗಳು ಪ್ರತಿನಿತ್ಯ ದಿಶಾ ಭಾರತ್ ಫೇಸ್‌ಬುಕ್ ಪೇಜ್‌ನಲ್ಲಿ ಪ್ರಸಾರವಾಗುತ್ತದೆ.
- ಸ್ವರಾಜ್ಯ ಸಿನಿಮಾ ಪ್ರದರ್ಶನ: ರಾಷ್ಟ್ರಭಕ್ತಿ, ದೇಶದ ಅಸ್ಮಿತೆ, ಸಾಮಾಜಿಕ ಆಗುಹೋಗುಗಳ ಕುರಿತು ಬೆಳಕು ಚೆಲ್ಲುವ ಆಯ್ದ ಸಿನಿಮಾಗಳ ಪ್ರದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
- ಸ್ವರಾಜ್ಯ ರಥ: ಸ್ವಾತಂತ್ರ್ಯ ಸಂಗ್ರಾಮದ ಅಜ್ಞಾತ ಬಲಿದಾನಿಗಳ, ನೇಪಥ್ಯದಲ್ಲಿ ಉಳಿದ ಹೋರಾಟಗಾರರ ಕುರಿತು ಹಾಗೂ ಕನ್ನಡ ನಾಡಿನಲ್ಲಿ ಸ್ವಾತಂತ್ರ್ಯ ಸಂಗ್ರಾಮ ಎಂಬ ಆಶಯದೊಂದಿಗೆ ‘ಸ್ವರಾಜ್ಯ ರಥ’ವು ರಾಜ್ಯಾದ್ಯಂತ ಸಂಚರಿಸಲಿದೆ.
- ಸ್ವರಾಜ್ಯ ಸೈಕ್ಲಾಥಾನ್: ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಉತ್ಸಾಹ ಪ್ರೇರಣೆ ತುಂಬಲು ‘ಸ್ವರಾಜ್ಯ ಸೈಕ್ಲಾಥಾನ್’ (ಸೈಕಲ್ ಜಾಥಾ) ವನ್ನು ಆಯೋಜಿಸಲಾಗಿದೆ.
- ಸ್ವರಾಜ್ಯ ಬೈಕ್ ಬ್ಯಾಲಿ: ಯುವಕರಲ್ಲಿ ದೇಶಭಕ್ತಿಯನ್ನು ಉದ್ದೀಪಿಸುವ ಹಾಗೂ ಏಕತೆಯನ್ನು ಪೋಷಿಸುವ ಸ್ವರಾಜ್ಯ ಬೈಕ್ ರ‍್ಯಾಲಿ ನಡೆಯಲಿದೆ.
- ಸ್ವರಾಜ್ಯ ಯಾತ್ರಾ: ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿ ಐತಿಹಾಸಿಕ ಮಹತ್ವವಿರುವ ಸ್ಥಳಗಳಿಗೆ ಸಾರ್ವಜನಿಕರು ಭೇಟಿ ನೀಡುವ ವಿಶಿಷ್ಟ ಬಸ್ ಯಾತ್ರೆ ‘ಸ್ವರಾಜ್ಯ ಯಾತ್ರೆ’ ಯನ್ನು ರಾಜ್ಯದ ವಿವಿಧ ಸ್ಥಳಗಳಿಗೆ ಆಯೋಜಿಸಲಾಗಿದೆ.
- ರಾಜ್ಯಮಟ್ಟದ ‘ಸ್ವರಾಜ್ಯ ವಿಚಾರ ಸಂಕಿರಣ’: ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ, ಶಿಕ್ಷಣ ವಲಯದ ವಿವಿಧ ಶ್ರೇಣಿಯ ಅಧ್ಯಾಪಕರಿಗೆ, ಸ್ನಾತಕೋತ್ತರ ತರಗತಿಗಳ ಆಯ್ದ ವಿದ್ಯಾರ್ಥಿಗಳಿಗೆ ಒಂದು ದಿನದ ‘ಸ್ವರಾಜ್ಯ ವಿಚಾರ ಸಂಕಿರಣ’ವನ್ನು ಆಯೋಜಿಸಲಾಗಿದೆ.
- ರಾಜ್ಯಮಟ್ಟದ ಸ್ವರಾಜ್ಯ ಕ್ವಿಜ್: ಸ್ವರಾಜ್ಯ 75 ರ ಹಿನ್ನೆಲೆಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿಶೇಷ ರಸಪ್ರಶ್ನೆ ಕಾರ್ಯಕ್ರಮ ‘ಸ್ವರಾಜ್ಯ ಕ್ವಿಜ್’ 2022ರ ಆಗಸ್ಟ್ 07ರಂದು ಬೆಂಗಳೂರಿನಲ್ಲಿ ನಡೆಯಲಿದೆ.
- ಸ್ವರಾಜ್ಯ ಪ್ರದರ್ಶಿನಿ: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಅಸಂಖ್ಯ ಅಜ್ಞಾತ ವೀರರ ಜೀವನಗಾಥೆಯ ಮಾಹಿತಿ ನಿರೂಪಕ ‘ಸ್ವರಾಜ್ಯ ಪ್ರದರ್ಶಿನಿ’ ಪ್ರದರ್ಶನಗೊಳ್ಳಲಿದೆ.
- ಸ್ವರಾಜ್ಯ 75 ಸಾಂಸ್ಕೃತಿಕ ಕಾರ್ಯಕ್ರಮ: ಕಾಲೇಜು ಕ್ಯಾಂಪಸ್‌ಗಳಲ್ಲಿ ಸ್ವರಾಜ್ಯ 75 ವಿಷಯದ ಕುರಿತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯಾ ಕಾಲೇಜುಗಳ ವತಿಯಿಂದ ಆಯೋಜಿಸಲಾಗುತ್ತಿದೆ.
- ಸ್ವರಾಜ್ಯ ಉತ್ಸವ: ಯುವಕರಲ್ಲಿ ಉತ್ಸಾಹ ತುಂಬುವ ಸಾರ್ವಜನಿಕ ಕಾರ್ಯಕ್ರಮವಾದ ‘ಸ್ವರಾಜ್ಯ ಉತ್ಸವ್’ ಮೂಲಕ ರಾಷ್ಟ್ರೀಯ ಹಾಗೂ ವೈಚಾರಿಕ ಜಾಗೃತಿಯನ್ನು ಮೂಡಿಸಲಾಗುತ್ತದೆ.
ಸ್ವಾತಂತ್ರ್ಯ ಸಂಗ್ರಾಮದ ಕುರಿತು ಭಾಷಣ ಕಾರ್ಯಕ್ರಮಗಳು ಸೇರಿದಂತೆ ಬಹುಮುಖದ ಚಟುವಟಿಕೆಯೊಂದಿಗೆ ‘ಸ್ವರಾಜ್ಯ ಉತ್ಸವ್’ ಕಾರ್ಯಕ್ರಮಗಳು ತೆರೆದ ಮೈದಾನದಲ್ಲಿ ಹಾಗೂ ಒಳಾಂಗಣ ಸಭಾಂಗಣದಲ್ಲಿ ಸಾರ್ವಜನಿಕರಿಗಾಗಿ ನಡೆಯಲಿದೆ.
ಇದನ್ನೂ ಓದಿ| ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ವಕ್ಫ್‌ಬೋರ್ಡ್‌ನಿಂದ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ