ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಧರ್ಮ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಆರೋಪಿಸಿದ್ದಾರೆ. ಗುರುವಾರ ನಡೆದ ರಾಜ್ಯ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ಹಲವಾರು ನಿರ್ಧಾರಗಳನ್ನು ಪ್ರಶ್ನಿಸಿ ಅವರು ಈ ಮಾತನ್ನ ಹೇಳಿದ್ದಾರೆ. ಕಾಂಗ್ರೆಸ್ ಬಹುಸಂಖ್ಯಾತ ಹಿಂದೂಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಅವರು ಪತ್ರಿಕಾ ಪ್ರಕಟಣೆ ಹೊರಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇಡಿಕೆ ಇರದ ಹೊರತಾಗಿಯೂ ಪಠ್ಯ ಪುಸ್ತಕವನ್ನು ಪರಿಷ್ಕರಣೆ ಮಾಡಲು ಸಂಪುಟ ನಿರ್ಧರಿಸಿದೆ. ಸ್ವಾತಂತ್ರ್ಯ ವೀರ ಸಾವರ್ಕರ್ ಪಠ್ಯಕ್ಕೆ ಕತ್ತರಿ ಹಾಕಲು ಮುಂದಾಗಿರುವುದು ದೇಶದ್ರೋಹ ಎಂಬುದಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯಿದೆಯನ್ನು ರದ್ದು ಮಾಡಿರುವ ಕ್ರಮವನ್ನು ಅವರು ಬಲವಾಗಿ ಖಂಡಿಸಿದ್ದಾರೆ.
ಎನ್ ರವಿಕುಮಾರ್ ಅವರು ಆಗ್ರಹಗಳು ಇಂತಿವೆ
- ಅಲ್ಪಸಂಖ್ಯಾತರ ಓಲೈಕೆಗಾಗಿ ಪಠ್ಯಪುಸ್ತಕ ಪರಿಷ್ಕರಣೆ, ಮತಾಂತರ ನಿಷೇಧ ಕಾಯ್ದೆ ವಾpಸ್ ಮುಖಾಂತರ ರಾಜ್ಯ ಕಾಂಗ್ರೆಸ್ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿರುವುದು ಖಂಡನೀಯ.
- ಪಠ್ಯಪುಸ್ತಕ ಪರಿಷ್ಕರಣೆ ವಿಷಯದಲ್ಲಿ ರಾಷ್ಟ್ರೀಯತೆಯ ವಿಚಾರಕ್ಕೆ ಮತ್ತು ಬಹುಸಂಖ್ಯಾತ ಹಿಂದೂಗಳಿಗೆ ಅನ್ಯಾಯ ಮಾಡಲಾಗುತ್ತಿದೆ.
- ಅಲ್ಪಸಂಖ್ಯಾತರು ಪಠ್ಯದಲ್ಲಿ ಬದಲಾವಣೆ ಮಾಡಿ ಎಂದು ಕೇಳಲಿಲ್ಲ. ಆದರೂ ರಾಜ್ಯ ಸರ್ಕಾರ ರಾಷ್ಟ್ರೀಯ ವಿಚಾರಧಾರೆಗಳ ವಿಷಯಗಳನ್ನು ಪಠ್ಯದಿಂದ ಕೈಬಿಡುತ್ತಿರುವುದು ಸರಿಯಲ್ಲ.
- 50 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ದೇಶಕ್ಕಾಗಿ ಅನುಭವಿಸಿದ, ಅಪ್ರತಿಮ ದೇಶಭಕ್ತ, ಸಾವಿರಾರು ಜನರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವಂತೆ ಪ್ರೇರೆಪಿಸಿದ, ಮಹಾನ ಚಿಂತಕ ವೀರ ಸಾವರ್ಕರ ಅವರ ಕುರಿತ ಪಠ್ಯವನ್ನು ಕೈ ಬಿಡುವುದು ದೇಶದ್ರೋಹ. ಯಾಕೆ ಸಾವರ್ಕರ ಅವರ ತ್ಯಾಗದ ಬಗ್ಗೆ ಮಕ್ಕಳು ತಿಳಿದುಕೊಳ್ಳಬಾರದಾ?
- ಮಾಜಿ ಪ್ರಧಾನಿ ನೆಹರು, ಇಂದಿರಾಗಾಂಧಿ ಅವರ ಬಗ್ಗೆ ಮಾತ್ರ ಮಕ್ಕಳಿಗೆ ಗೊತ್ತಾಗಬೇಕೆ? ಯಾಕೆ ವೀರ ಸಾವರ್ಕರ್, ಆರ್.ಎಸ್.ಎಸ್ ನಿರ್ಮಾತೃ ಡಾ. ಕೇಶವ ಬಲಿರಾಂ ಹೆಡಗೆವಾರ. ಅವರ ಬಗ್ಗೆ ಮಕ್ಕಳು ತಿಳಿದುಕೊಳ್ಳಬಾರದಾ?
ಯಾಕೆ ಈ ತುಷ್ಟೀಕರಣ ರಾಜಕಾರಣ? ಈಗ ಪಠ್ಯ ಬದಲಾವಣೆ ಮಾಡುತ್ತಿರುವುದು ಸರಿಯಲ್ಲ, ಯಥಾಸ್ಥಿತಿ ಮುಂದುವರಿ ಸಬೇಕೆಂದು ನಾನು ಆಗ್ರಹಿಸುತ್ತೇನೆ. - ಆಸೆ, ಆಮಿಷಗಳಿಗೆ, ಅಧಿಕಾರಕ್ಕಾಗಿ ಸಾವಿರಾರು ಜನರು ಮರುಳಾಗಿ ಮತಾಂತರವಾಗುತ್ತಿದ್ದರು, ರಾಜಾರೋಷವಾಗಿ ಮತಾಂತರವಾಗುವುದು ಸರಿಯಲ್ಲ. ಕಾನೂನು ಪ್ರಕಾರ ಮತಾಂತರವಾಗಲೆಂದು ನಮ್ಮ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದು. ಆದರೆ ಈಗ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುತ್ತಿರುವುದು ಸರಿಯಲ್ಲ ಇದು ಖಂಡನೀಯ. ಈ ನಿರ್ಧಾರಗಳಿಂದ ಸರ್ಕಾರ ಹಿಂದೆ ಸರಿಯಬೇಕೆಂದು ನಾನು ಆಗ್ರಹಿಸುತ್ತೇನೆ.