ಬೆಂಗಳೂರು: ಖಾಸಗಿ ವಲಯಗಳಲ್ಲೂ ಕನ್ನಡಿಗರಿಗೆ ಕೆಲಸದ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕನ್ನಡಿಗರ ಬಹುದಿನದ ಬೇಡಿಕೆಗೆ ಸ್ಪಂದಿಸಿದ್ದು, ಕನ್ನಡಿಗರಿಗೇ ಹೆಚ್ಚಿನ ಉದ್ಯೋಗ ದಕ್ಕಿಸಲು “ಕರ್ನಾಟಕ ಉದ್ಯೋಗ ನೀತಿ 2022-25”ಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿರುವ ಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಸ್ವಾಗತಿಸುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ.
ನಮ್ಮ ನಾಡಿನಲ್ಲಿ ನಮ್ಮವರೇ ನಿರುದ್ಯೋಗದ ಪಿಡುಗಿನಲ್ಲಿ ಸಿಲುಕಿಕೊಂಡಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕನ್ನಡಿಗರಿಗೆ ಅವಕಾಶ ನೀಡಬೇಕು ಎನ್ನುವ ಕುರಿತು ಬಹುಸಮಯದಿಂದ ಕನ್ನಡ ಸಾಹಿತ್ಯ ಪರಿಷತ್ ಒತ್ತಾಯಿಸುತ್ತಲೇ ಬಂದಿತ್ತು. ಕಾಲಕಾಲಕ್ಕೆ ಕನ್ನಡಿಗರ ಅಭ್ಯುದಯಕ್ಕೆ ಧ್ವನಿಮಾಡುತ್ತಿದ್ದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಾಕಷ್ಟು ಚಿಂತನ-ಮಂಥನ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ. ಇದರೊಂದಿಗೆ ಸರ್ಕಾರಕ್ಕೆ ಕನ್ನಡಿಗರಿಗೆ ಕೆಲಸದ ಅವಶ್ಯಕತೆ ಕುರಿತು ಮನದಟ್ಟು ಮಾಡುವ ಹಿನ್ನೆಲೆಯಲ್ಲಿಯೂ ಪರಿಷತ್ತು ತೊಡಗಿಸಿಕೊಂಡಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ | ಕನ್ನಡ ಸಾಹಿತ್ಯ ಪರಿಷತ್ತಿಗೆ ಎಂಟು ಆಧಾರಸ್ತಂಭ: ಡಾ. ಮಹೇಶ ಜೋಶಿ
ಸದ್ಯ ರಾಜ್ಯ ಸರ್ಕಾರ ಕಳೆದ ಸಂಪುಟ ಸಭೆಯಲ್ಲಿ ರಾಜ್ಯ ಉದ್ಯೋಗ ನೀತಿ 2022-25ಕ್ಕೆ ಒಪ್ಪಿಗೆ ನೀಡಿರುವುದು ಕನ್ನಡಿಗರ ಪಾಲಿಗೆ ಆಶಾಕಿರಣ ಸಿಕ್ಕಂತಾಗಿದೆ. ಎಲ್ಲ ಉದ್ಯಮಗಳಲ್ಲಿ ಬಂಡವಾಳ ಹೂಡಿಕೆ ಮಾಡಿ ಉದ್ಯಮಗಳನ್ನು ವಿಸ್ತರಿಸುವ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಶೇ. 2.5ರಿಂದ ಶೆ.3ರಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ. ಬಂಡವಾಳದ ಹೂಡಿಕೆಯನ್ನು ಆಧರಿಸಿ ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳು ಎಂದು ವರ್ಗೀಕರಿಸಲಾಗಿದೆ. ಇವುಗಳಲ್ಲಿ ಶೇ. 3 ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಅಥವಾ ಸ್ಥಳೀಯರಿಗೆ ಕೆಲಸ ನೀಡಬೇಕು ಎನ್ನುವುದನ್ನು ಕಡ್ಡಾಯ ಮಾಡಲಾಗಿದೆ. ಆ ಪೈಕಿ ಕನ್ನಡಿಗರಿಗೆ ಪ್ರಾಧಾನ್ಯ ನೀಡಬೇಕು ಎನ್ನುವ ಸರ್ಕಾರದ ನಿರ್ಧಾರ ಅಭಿನಂದನೀಯ. ಇನ್ನೂ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಸಲು ಕೈಗಾರಿಕೆಗಳಿಗೆ ಹೆಚ್ಚುವರಿ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಹೆಸರು ಅಭಿನಂದನೀಯ
ಮೈಸೂರು ವಿಮಾನ ನಿಲ್ದಾಣಕ್ಕೆ ಕನ್ನಡ ನಾಡಿನ ಜನಾನುರಾಗಿ ದೊರೆ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಹೆಸರಿಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿರುವ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಹಾಗೂ ಕನ್ನಡ ನಾಡಿಗೆ ಅಪಾರ ಕೊಡುಗೆ ನೀಡಿದ ಮಹಾ ಚೇತನ ಒಡೆಯರ್ ಅವರಂತಹ ಮಹಾನುಭಾವರ ಹೆಸರು ಮೈಸೂರು ವಿಮಾನ ನಿಲ್ದಾಣಕ್ಕೆ ಶೋಭೆ ತರುವ ಸಂಗತಿಯಾಗಿದೆ ಎಂದು ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಇದನ್ನೂ ಓದಿ | ಸಮಾಜದಲ್ಲಿ ಕುಟುಂಬವೇ ಮಾದರಿ ಸಂಸ್ಥೆ ಕಸಾಪ ಅಧ್ಯಕ್ಷ ಮಹೇಶ್ ಜೋಷಿ ಅಭಿಮತ