Site icon Vistara News

Nalin Kumar kateel : ಪುತ್ತಿಲ ಬಗ್ಗೆ ನಾನು ಮಾತಾಡಲ್ಲ, ರಾಷ್ಟ್ರೀಯ ನಾಯಕರು ಮಾತಾಡ್ತಾರೆ ಎಂದ ಕಟೀಲ್

Nalin kumar Kateel Arun kumar puthila

ಮಂಗಳೂರು:‌ ಭಾರತೀಯ ಜನತಾ ಪಕ್ಷದಿಂದ (BJP Karnataka) ಗೆದ್ದಿರುವ ಎಲ್ಲ 66 ಮಂದಿ ಶಾಸಕರೂ ಪ್ರತಿಪಕ್ಷ ನಾಯಕರಾಗಲು (Leader of Opposition) ಅರ್ಹರಾಗಿದ್ದಾರೆ. ಹೀಗಾಗಿ ನಾಯಕನ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin kumar Kateel).

ಪುತ್ತೂರಿನಲ್ಲಿ ಮಾತನಾಡಿದ ಅವರು, ನಮ್ಮ ರಾಷ್ಟ್ರೀಯ ನಾಯಕರು ಎಲ್ಲವನ್ನು ಗಮನಿಸಿಕೊಂಡು ವಿಪಕ್ಷ ನಾಯಕನ ಆಯ್ಕೆ ಮಾಡುತ್ತಾರೆ ಎಂದರು. ಬಿಜೆಪಿಯಲ್ಲಿ ಪ್ರತಿಪಕ್ಷ ನಾಯಕನಾಗಲು ಅರ್ಹತೆ ಇರುವವರು ಇಲ್ಲವೇ, ಯಾಕಿಷ್ಟು ಗೊಂದಲ ಎಂಬ ಪ್ರಶ್ನೆಗೆ ಉತ್ತರಿಸಿದ ನಳಿನ್‌ ಕುಮಾರ್‌ ಅವರು, ಎಲ್ಲ ಶಾಸಕರೂ ಸಮರ್ಥರೇ ಎಂದು ವಾದಿಸಿದರು.

ಅರುಣ್‌ ಪುತ್ತಿಲ ಬಗ್ಗೆ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದೇನು?

ಬಿಜೆಪಿಯ ಟಿಕೆಟ್‌ ಹಂಚಿಕೆಯಲ್ಲಾಗಲೀ, ಅಭ್ಯರ್ಥಿ ಆಯ್ಕೆಯಲ್ಲಾಗಲೀ ಯಾವುದೇ ಗೊಂದಲಗಳು ಆಗಿಲ್ಲ. ಪುತ್ತೂರು ಸೇರಿ ಎಲ್ಲರೂ ಗೊಂದಲಗಳು ನಡೆದಿಲ್ಲ ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು. ಕೆಲವು ಕಡೆ ಪಕ್ಷೇತರ ಅಭ್ಯರ್ಥಿಗಳು ನಿಂತ ಕಾರಣ ವ್ಯತ್ಯಾಸಗಳಾಗಿವೆ ಎಂದು ಪುತ್ತೂರಿನಲ್ಲಿ ಅರುಣ್‌ ಕುಮಾರ್‌ ಪುತ್ತಿಲ (Arun Kumar puthila) ಸ್ಪರ್ಧೆಯನ್ನು ನೇರವಾಗಿ ಹೇಳದೆ ವಿವರಿಸಿದರು.

ʻʻಯಾರು ಯಾರು ಪಕ್ಷಕ್ಕೆ ಬರಬೇಕೋ ಪಕ್ಷದಲ್ಲಿ ಇರಬೇಕೋ ಅವರ ಜತೆ ನಾವು ಮಾತನಾಡುತ್ತೇವೆ. ಗೊಂದಲಗಳಿದ್ದರೆ ಅದನ್ನು ಸರಿ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆʼʼ ಎಂದು ಹೇಳಿದ ನಳಿನ್‌ ಕುಮಾರ್‌ ಕಟೀಲ್‌, ಅರುಣ್‌ ಕುಮಾರ್‌ ಪುತ್ತಿಲ ಅವರ ಬಗ್ಗೆ ವೈಯಕ್ತಿಕವಾಗಿ ಚರ್ಚೆ ಮಾಡಲ್ಲ ಎಂದರು.

ʻʻನಾವು ರಾಷ್ಟ್ರೀಯ ಪಕ್ಷವಾಗಿ ಅಭ್ಯರ್ಥಿಗಳನ್ನು ಹಾಕ್ತೇವೆ, ಪ್ರಜಾಪ್ರಭುತ್ವದಲ್ಲಿ ಯಾರೂ ಸ್ಪರ್ಧೆ ಮಾಡಬಹುದು. ಅರುಣ್‌ ಪುತ್ತಿಲ ಅವರ ವಿಚಾರದಲ್ಲಿ ಈಗಾಗಲೇ ರಾಷ್ಟ್ರೀಯ ನಾಯಕರ ಜೊತೆ ಈ ಬಗ್ಗೆ ಚರ್ಚೆಗಳು ಆಗಿವೆ. ಆ ವಿವರಗಳನ್ನು ಪರಿಗಣಿಸಿ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡ್ತಾರೆʼʼ ಎಂದರು ನಳಿನ್‌ ಕುಮಾರ್‌ ಕಟೀಲ್‌.

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಹಿಂದೂ ಹೋರಾಟಗಾರ ಅರುಣ್‌ ಕುಮಾರ್‌ ಪುತ್ತಿಲ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿ ಟಿಕೆಟ್‌ ನಿರಾಕರಿಸಿದಾಗ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಪುತ್ತಿಲ ಸ್ಪರ್ಧೆಯಿಂದಾಗಿ ಕಾಂಗ್ರೆಸ್‌ ಗೆಲುವು ಸಾಧಿಸಿ, ಬಿಜೆಪಿ ದೂರದ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಪುತ್ತಿಲ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ನಳಿನ್‌ ಕುಮಾರ್‌ ಕಟೀಲ್‌ ಅವರು ಹಾಲಿ ಲೋಕಸಭಾ ಸದಸ್ಯರಾಗಿದ್ದು, ಅವರನ್ನು ಬಿಟ್ಟು ಪುತ್ತಿಲರಿಗೆ ಟಿಕೆಟ್‌ ನೀಡಬಹುದೇ ಎಂಬ ಚರ್ಚೆ ಜೋರಾಗಿದೆ. ಈ ನಿಟ್ಟಿನಲ್ಲಿ ಕಟೀಲ್‌ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ.

ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಅಶಾಂತಿ

ʻʻರಾಜ್ಯದಲ್ಲಿ ಕಾಂಗ್ರೆಸ್ ಬಂದ ಬಳಿಕ ಶಾಂತಿ ಸುವ್ಯವಸ್ಥೆ ಹಾಳಾಗಿದೆ. ಸರ್ವ ಸಂಗ ಪರಿತ್ಯಾಗಿಗಳಾದ ಮುನಿಗಳು, ಕಾರ್ಯಕರ್ತರ ಜೊತೆ ಉದ್ಯಮಿಗಳ ಹತ್ಯೆಯಾಗಿದೆ. ಕಳೆದ ಒಂದೂವರೆ ತಿಂಗಳಲ್ಲಿ ಹತ್ತಾರು ಹತ್ಯೆಗಳು ರಾಜ್ಯದಲ್ಲಿ ನಡೆದಿದೆ. ಶಾಂತಿ ಸುವ್ಯವಸ್ಥೆ ವಿಚಾರದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆʼʼ ಎಂದು ಹೇಳಿದರು ನಳಿನ್‌ ಕುಮಾರ್‌ ಕಟೀಲ್‌.

ʻʻಮುನಿಗಳ ಹತ್ಯೆ ಮತ್ತು ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿ ಸತ್ಯಶೋಧನೆಗೆ ನಿಯೋಜಿತವಾಗಿದ್ದ ಬಿಜೆಪಿಯ ತನಿಖಾ ತಂಡಗಳು ವರದಿ ಸಲ್ಲಿಸಿವೆʼʼ ಎಂದು ಹೇಳಿದ ನಳಿನ್‌ ಕುಮಾರ್‌ ಕಟೀಲ್‌, ಈ ಹತ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆಪಾದಿಸಿದರು. ಈ ಕೊಲೆಗಳ ವಿಚಾರದಲ್ಲಿ ಪಾರದರ್ಶಕ ತನಿಖೆ ಆಗಲಿ ಎಂದು ಆಗ್ರಹಿಸಿದರು.

ʻʻರಾಜ್ಯದಲ್ಲಿ ರೈತರ ಆತ್ಮಹತ್ಯೆಗಳೂ ಹೆಚ್ಚಾಗುತ್ತಿವೆ. ಬೇರೆ ಹತ್ಯೆಗಳೂ ಹೆಚ್ಚಿವೆ. ರೈತರಿಗೆ ಬೇಕಾದ ಸವಲತ್ತು ಕಲ್ಪಿಸಲು ಸರ್ಕಾರ ವಿಫಲವಾಗಿದೆʼʼ ಎಂದು ದೂರಿದರು.

ಇದನ್ನೂ ಓದಿ : Chakravarti Sulibele: ನಾನು ಎಂಟ್ರಿ ಕೊಟ್ಟ ತಕ್ಷಣ ಬಿಜೆಪಿಯಲ್ಲಿ ತಲ್ಲಣ: ರಾಜಕೀಯ ಸೇರ್ಪಡೆ ಕುರಿತು ಚಕ್ರವರ್ತಿ ಸೂಲಿಬೆಲೆ ಮಾತು

ಕಾಮಗಾರಿ ನಿಲ್ಲಿಸುವ ದ್ವೇಷದ ರಾಜಕಾರಣ ಕಾಂಗ್ರೆಸ್ ಮಾಡ್ತಾ ಇದೆ

ʻʻಸರ್ಕಾರದಲ್ಲಿ ವರ್ಗಾವಣೆ ದಂಧೆ ಜೋರಾಗಿದೆ. ದುಡ್ಡು ಕೊಟ್ಟು ವರ್ಗಾವಣೆ ಮಾಡಿಸಿಕೊಂಡು ಬಂದ ಕಾರಣಕ್ಕೆ ಸರ್ಕಾರದ ಮಾತನ್ನು ಪೊಲೀಸರು ಕೇಳುತ್ತಿಲ್ಲ. ಇವತ್ತು ರೇಟ್ ಫಿಕ್ಸ್ ಮಾಡಿ ವರ್ಗಾವಣೆ ದಂಧೆ ಮಾಡಲು ಹತ್ತಾರು ಕೈಗಳು ಕೆಲಸ ಮಾಡುತ್ತಿವೆʼʼ ಎಂದು ನಳಿನ್‌ ಆಪಾದಿಸಿದರು.

ʻʻಮುಖ್ಯಮಂತ್ರಿ ‌ಮತ್ತು ಉಪ‌ಮುಖ್ಯಮಂತ್ರಿ ಮಧ್ಯೆಯೇ ವರ್ಗಾವಣೆ ಗೊಂದಲ ಇದೆʼʼ ಎಂದು ಅವರು ನುಡಿದರು.

Exit mobile version