ಕರ್ನಾಟಕ ವಿಧಾಸಭಾ ಚುನಾವಣೆ (Karnataka Assembly Election)ಯಲ್ಲಿ ಕ್ಷೇತ್ರಗಳ ಗೆಲುವಲ್ಲಿ ನೂರಂಕಿಯನ್ನೂ ದಾಟಲಿಲ್ಲ ಬಿಜೆಪಿ. ಹೀಗೆ ಬಿಜೆಪಿಗೆ ಭಾರಿ ಹಿನ್ನಡೆಯಾದ ಬೆನ್ನಲ್ಲೇ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸೋಲಿನ ನೈತಿಕ ಹೊಣೆ ಹೊರಲು ಸಿದ್ಧರಾಗಿರು ಕಟೀಲ್ ಅವರು ಸೋಮವಾರ (ಮೇ 15) ಅಧ್ಯಕ್ಷ ಸ್ಥಾನ ತೊರೆಯಲಿದ್ದಾರೆ ಎನ್ನಲಾಗಿದೆ. ತಾವು ರಾಜೀನಾಮೆ ಕೊಡುತ್ತಿರುವುದಾಗಿ ಈಗಾಗಲೇ ನಳೀನ್ ಕುಮಾರ್ ಕಟೀಲ್ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ರಾಜ್ಯಾದ್ಯಂತ ಬಿಜೆಪಿ ನೆಲಕಚ್ಚಿದ್ದರೂ ಕರಾವಳಿಯಲ್ಲಿ ಈ ಪಕ್ಷವೇ ಪ್ರಾಬಲ್ಯ ಸಾಧಿಸಿದೆ. ಆದರೆ ನಳಿನ್ ಕುಮಾರ್ ಕಟೀಲ್ ಅವರ ತವರು ಪುತ್ತೂರಲ್ಲಿ ಬಿಜೆಪಿ ಮುಗ್ಗರಿಸಿದೆ. ಬರಿ ಸೋತಿದ್ದಲ್ಲ, ಮೂರನೇ ಸ್ಥಾನಕ್ಕೆ ಕುಸಿದಿದೆ. ಇದು ನಳಿನ್ ಕುಮಾರ್ ಅವರಿಗೆ ಇನ್ನಷ್ಟು ಮುಜುಗರ ಉಂಟು ಮಾಡಿರುವ ಸಂಗತಿ ಎನ್ನಬಹುದು.
ಬಿಜೆಪಿಗೆ ಹಿನ್ನಡೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಬಸವರಾಜ ಬೊಮ್ಮಾಯಿ ‘ಈ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಜನರ ಆದೇಶಕ್ಕೆ ತಲೆಬಾಗುತ್ತೇನೆ’ ಎಂದಿದ್ದರು. ಇದೀಗ ನಳಿನ್ ಕುಮಾರ್ ಕಟೀಲ್ ಕೂಡ ಇದನ್ನೇ ಹೇಳಿದ್ದಾರೆ. ಇಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಸೋಲು-ಗೆಲುವಿನ ಪರಾಮರ್ಶೆ ನಡೆದಿದೆ. ಸಭೆಯಲ್ಲಿ ಮಾಜಿ ಸಚಿವರಾದ ಅಶ್ವಥ್ ನಾರಾಯಣ್, ಮುನಿರತ್ನ, ಬೈರತಿ ಬಸವರಾಜ್, ಶಾಸಕರಾದ ಶಾಸಕರಾದ ರವಿ ಸುಬ್ರಹ್ಮಣ್ಯ, ಸಿ.ಕೆ ರಾಮಮೂರ್ತಿ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: Karnataka Elections : ಪಕ್ಷ ಬಿಟ್ಟ ಶೆಟ್ಟರ್ ಏನೇನೋ ಮಾತನಾಡುವುದು ಸರಿಯಲ್ಲ ಎಂದ ನಳಿನ್ ಕುಮಾರ್ ಕಟೀಲ್