ಬೆಂಗಳೂರು: ಒಂದು ಕಡೆ ಕರಾವಳಿ ಭಾಷೆ ಮಾತನಾಡಿಕೊಂಡು ಓಡಾಡುವ ಜನ, ಮತ್ತೊಂದು ಕಡೆ ರುಚಿ ರುಚಿಯಾದ ಕರಾವಳಿಯ (Namma Karavali Utsav) ಫಿಶ್ ಫ್ರೈ, ಕೋಳಿ ಸುಖದ ಘಮ.., ರಂಗೋಲಿ ಬಿಡಿಸುವ ಹೆಣ್ಮಕ್ಕಳು ಒಂದೆಡೆಯಾದರೆ, ಹಗ್ಗ ಹಿಡಿದು ತಮ್ಮ ಶಕ್ತಿ ತೋರಿಸುವ ಗಂಡ್ಮಕ್ಕಳು ಮತ್ತೊಂದೆಡೆ. ಇವೆಲ್ಲಾ ಕಂಡು ಬಂದಿದ್ದು, ಬೇರೆಲ್ಲೂ ಅಲ್ಲ ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಬಿಬಿಎಂಪಿ ಗ್ರೌಂಡ್‌ನಲ್ಲಿ.
ಹೌದು… ಇತ್ತೀಚಿನ ದಿನಗಳಲ್ಲಿ ಕರಾವಳಿಯ ಚಾಪು ಇಡೀ ವಿಶ್ವದಲ್ಲೆಡೆ ಪಸರಿಸುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗಷ್ಟೇ ನಡೆದ ಕುಂದಾಪ್ರ ಹಬ್ಬ ಹಾಗೂ ಬೆಂಗಳೂರು ಕಂಬಳೋತ್ಸವ. ಇದೀಗಾ ಅದರ ಬೆನ್ನೆಲ್ಲೇ ಕರಾವಳಿ ಮಂದಿಯೆಲ್ಲಾ ಸೇರಿ ಇಂದು ಜೆ.ಪಿ.ನಗರದ ಬಿಬಿಎಂಪಿ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ನಮ್ಮ ಕರಾವಳಿ ಉತ್ಸವವನ್ನು ಕರಾವಳಿ ಒಕ್ಕೂಟದವರೆಲ್ಲಾ ಸೇರಿ ಅದ್ಧೂರಿಯಾಗಿ ಆಯೋಜಿಸಿದ್ದರು.
ಕರಾವಳಿಗರ ಒಕ್ಕೂಟ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ ಡಾ.ಹರೀಶ್ ಕುಮಾರ್ ಅವರು, ಆರೋಗ್ಯ, ಶಿಕ್ಷಣ ಹಾಗೂ ಮಹಿಳಾ ಸಬಲೀಕರಣದಲ್ಲಿ ಕರಾವಳಿ ಭಾಗದವರು ಮುಂದೆ, ಇದರ ಹಿಂದೆ ಹಿರಿಯರ ಮಾರ್ಗದರ್ಶನ, ಪರಂಪರೆ, ಸಂಸತಿ ಪ್ರಮುಖ ಕಾರಣ ಎಂದು ಹೇಳಿದರು.
ಇದನ್ನೂ ಓದಿ | Raja Marga Column : ಯುವಜನತೆ ಹಾದಿ ತಪ್ಪುತ್ತಿದೆ ಅನ್ನೋದು ಸುಳ್ಳು, ಅವರ ರೂಟ್ ಸರಿ ಇದೆ!
ಕರಾವಳಿ ಭಾಗದಲ್ಲಿ ಮಹಿಳೆಯರು ತಮ್ಮ ದಿನನಿತ್ಯದ ಕೆಲಸದೊಂದಿಗೆ ಸಾರ್ವಜನಿಕ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಇದರಿಂದ ಆ ಭಾಗದಲ್ಲಿ ಮಹಿಳಾ ಸಬಲೀಕರಣವಾದಷ್ಟು ಬೇರೆ ಯಾವುದೇ ಕಡೆಗಳಲ್ಲಿ ಆಗಲಿಲ್ಲ ಎಂದು ಪ್ರಶಂಸಿಸಿದರು.
ಮನೆಯಲ್ಲಿ ತಾಯಿ ವಿದ್ಯಾವಂತೆಯಾದರೆ ಮಕ್ಕಳೆಲ್ಲರು ವಿದ್ಯೆ ಪಡೆಯುತ್ತಾರೆ. ಇವತ್ತಿಗೂ ನಾನಾ ಕಡೆಗಳಿಂದ ಮಂಗಳೂರಿಗೆ ವಿದ್ಯೆ ಅರಸಿ ಬರುತ್ತಾರೆ. ಹೀಗೆ ಆರೋಗ್ಯ, ಶಿಕ್ಷಣ ಹಾಗೂ ಮಹಿಳಾ ಸಬಲೀಕರಣದಲ್ಲಿ ಕರಾವಳಿ ಭಾಗದವರು ಮುಂದೆ ಇದ್ದಾರೆ. ಹಾಗಾಗಿ ಮಂಗಳೂರಿಗರೂ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಇದರ ಹಿಂದೆ ನಮ್ಮ ಹಿರಿಯರ ಮಾರ್ಗದರ್ಶನ, ಪರಂಪರೆ, ಸಂಸತಿ ಪ್ರಮುಖ ಕಾರಣ ಎಂದು ಹೇಳಿದರು.
ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಆಡಳಿತ ನಿರ್ದೇಶಕ ಡಾ.ವೈ.ನವೀನ್ ಭಟ್ ಮಾತನಾಡಿ, ಕರಾವಳಿಯಲ್ಲಿ ಶಿಕ್ಷಣ ಕ್ರಾಂತಿ ಉಂಟಾಯಿತು, ಇದರಿಂದ ಸ್ವ ಉದ್ಯಮ ಸಂಖ್ಯೆ ಹೆಚ್ಚಾಯಿತು. ದೇಶದಾದ್ಯಂತ ಹೋಟೆಲ್ ಉದ್ಯಮ ಸೇರಿದಂತೆ ಹೆಚ್ಚಿನ ಎಲ್ಲಾ ಕ್ಷೇತ್ರಗಳಲ್ಲಿ ಮೇಲು ಸ್ಥಾನದಲ್ಲಿ ಕರಾವಳಿಗರಿದ್ದಾರೆ ಎಂದರು.
ಬಿಎಂಟಿಎ್ ಜಂಟಿ ಆಯುಕ್ತೆ ಗಾಯತ್ರಿ ನಾಯಕ್ ಮಾತನಾಡಿ, ಶಿಕ್ಷಣವು ಕರಾವಳಿಗರನ್ನು ಗುರುತಿಸುವ ಕಾರ್ಯ ಮಾಡಿದೆ, ಶಿಕ್ಷಣವಿಲ್ಲದಿದ್ದರೆ ಕರಾವಳಿಗರಿಗೆ ಏನೂ ಇಲ್ಲ ಎಂಬುದು ಸಾಭಿತಾದ ವಿಚಾರವಾಗಿದೆ. ಪ್ರಸ್ತುತ ಮಹಿಳೆಯರು ಹೆಚ್ಚಿನ ಎಲ್ಲಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ ಎಂದು ಹೇಳಿದರು.
ಮಕ್ಕಳಿಗೆ ಶಿಕ್ಷಣವನ್ನು ನೀಡುವುದರೊಂದಿಗೆ ಉತ್ತಮ ವ್ಯಕ್ತಿತ್ವವನ್ನು ಬೆಳೆಸುವ ರೀತಿಯಲ್ಲಿ ಮಹಿಳೆಯರು ಪಾತ್ರವಹಿಸಬೇಕಾಗುತ್ತದೆ ಎಂದು ಅಭಿಪ್ರಾಯಪ್ಟರು.
ಕಾರ್ಯಕ್ರಮದಲ್ಲಿ ಕರಾವಳಿ ಒಕ್ಕೂಟದ ಅಧ್ಯಕ್ಷರಾದ ಸುಬ್ರಾಯ್ ಭಟ್, NHMನ ನವೀನ್ ಭಟ್, ಡೆಪ್ಯೂಟಿ ಪೊಲೀಸ್ ಕಮಿಷನರ್ ಅಬ್ದುಲ್ ಅಹ್ಮದ್, ಉಪ ಪೊಲೀಸ್ ಆಯುಕ್ತ ಅಬ್ದುಲ್ ಅಹದ್, ಒಕ್ಕೂಟದ ಗೌರವ ಅಧ್ಯಕ್ಷ ಡಾ.ಸುರೇಶ್.ಜಿ.ಕೆ ಮುಂತಾದವರಿದ್ದರು.
ಗಮನ ಸೆಳೆದ ಬಗೆಬಗೆಯ ಖಾದ್ಯಗಳು
ಉತ್ಸವದಲ್ಲಿ ಮುಖ್ಯವಾಗಿ ಗಮನ ಸೆಳೆದಿದ್ದು, ಕರಾವಳಿ ಭಾಗದ ರುಚಿಯಾದ ಖಾದ್ಯಗಳು ಕೋರಿ ರೊಟ್ಟಿ, ಕೋಳಿ ಸಾರು, ಫಿಶ್ ಪ್ರೈ, ಕೋಳಿ ಸುಕ್ಕ,ಕೊಟ್ಟೆ ಕಡುಬು, ನೀರ್‌ದೋಸೆ ಹೀಗೆ… ಬಾಯಲ್ಲಿ ನೀರೂರಿಸುವ ಖಾದ್ಯಗಳನ್ನು ಕರಾವಳಿಗರು ಸವಿದು ಬಹಳ ಖುಷಿ ಪಟ್ಟರು.
ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆ, ಮಡಿಕೆ ಹೊಡೆಯುವುದು, ಹಗ್ಗ ಜಗ್ಗಾಟ ಸೇರಿದಂತೆ ಹಲವು ಕ್ರೀಡೆಗಳನ್ನ ಆಡಿ ಎಲ್ಲರೂ ಆಡಿದರೆ, ಮತ್ತೊಂದು ಕಡೆ ಮನು ಹಂದಾಡಿ ಅವರ ಹಾಸ್ಯ ಚಟಾಕಿಯಂತೂ ನೆರೆದಿದ್ದ ಜನರನ್ನು ನಗಿಸಿ ಹೊಟ್ಟೆ ಹುಣಾಗಿಸಿತ್ತು. ಬೆಂಗಳೂರಿನಲ್ಲಿ ಒಂದಿಷ್ಟು ಕರಾವಳಿಗರೆಲ್ಲಾ ಸೇರಿ ಒಂದಿಷ್ಟು ಹರಟೆ ಹೊಡೆದು, ಆಡಿ, ರುಚಿರುಚಿಯಾದ ಊಟ ಸವೆದು ತಮ್ಮ ಊರಿನ ದಿನಗಳನ್ನ ಮೆಲುಕು ಹಾಕಿದರು.
ಇದನ್ನೂ ಓದಿ | ಫೆ.28ರಂದು ಕನ್ನಡದ ನಾಳೆಗಳಿಗಾಗಿ ಮಾತುಕತೆ: ಮಾಲಿಕೆ-೩ ಮತ್ತು ಪುಸ್ತಕ ಬಿಡುಗಡೆ
ಸಮಾರೋಪ ಸಮಾರಂಭದಲ್ಲಿ ಶಾಸಕರಾದ ಗುರುರಾಜ್ ಗಂಟಿಹೊಳೆ, ಸತೀಶ್ ಸೈಲ್,ಎಂ ಕೃಷ್ಣಪ್ಪ, ಒಕ್ಕೂಟದ ಅಧ್ಯಕ್ಷರಾದ ಸುಬ್ರಾಯ ಭಟ್, ಗೌರವ ಅಧ್ಯಕ್ಷರಾದ ಸುರೇಶ್ ಮುಂತಾದವರು ಉಪಸ್ಥಿತರಿದ್ದರು.