ಬೆಂಗಳೂರು: ಕೆ.ಜೆ ಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ನಾಗವಾರ ಜಂಕ್ಷನ್‌ನಲ್ಲಿ ಮೆಟ್ರೋ ಕಾಮಗಾರಿ (Namma Metro) ನಡೆಯುತ್ತಿದೆ. ಹೀಗಾಗಿ ಸಂಚಾರ ಮಾರ್ಗದಲ್ಲಿ (Metro work) ಬದಲಾವಣೆ ಮಾಡಲಾಗಿದೆ.
ಔಟರ್ ರಿಂಗ್ ರೋಡ್‌ನ ಲಿಂಗರಾಜಪುರ ಹೆಣ್ಣೂರು ಫ್ಲೈಓವರ್ ಕಡೆಯಿಂದ ನಾಗವಾರ ಜಂಕ್ಷನ್ ಕಡೆಗೆ ಬರುವ ವಾಹನ ಸವಾರರು, ನಾಗವಾರ ಮುಖ್ಯ ರಸ್ತೆಯನ್ನು ಬಳಸದೇ ಅಂಬೇಡ್ಕರ್ ಮೈದಾನದ ಬಳಿ ಸರ್ವಿಸ್ ರಸ್ತೆ ಮೂಲಕ ಸಾಗಿ ನಾಗವಾರ ಜಂಕ್ಷನ್ ಹಾಗೂ ಥಣಿಸಂದ್ರ ಕಡೆಗೆ ಸಂಚರಿಸಬಹುದು.
ಇನ್ನು ನಾಗವಾರ ಫ್ಲೈಓವರ್ ಮೂಲಕ ಹೆಬ್ಬಾಳ ಕಡೆಗೆ ಸಂಚರಿಸುವ ಮಾರ್ಗದಲ್ಲಿ ಯಾವುದೇ ಮಾರ್ಗ ಬದಲಾವಣೆ ಮಾಡಿಲ್ಲ. ವಾಹನ ಸವಾರರು ಎಂದಿನಂತೆ ಸಂಚರಿಸಬಹುದು. ನಾಗವಾರ ಜಂಕ್ಷನ್ ಕಡೆಗೆ ತಲುಪಬೇಕಾದ ವಾಹನ ಸವಾರರು ಕಡ್ಡಾಯವಾಗಿ ಎಡಭಾಗದ ಸರ್ವಿಸ್ ರಸ್ತೆಯನ್ನು ಬಳಸಲು ಮನವಿ ಮಾಡಲಾಗಿದೆ.
ಇದನ್ನೂ ಓದಿ: Job alert: ರಕ್ಷಣಾ ಇಲಾಖೆಯಲ್ಲಿ 400 ಹುದ್ದೆಗಳಿವೆ; ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಿ
ಸುರಂಗ ಕೊರೆದು ಕೆ.ಜಿ. ಹಳ್ಳಿಯಲ್ಲಿ ಹೊರಬಂದ ತುಂಗಾ ಯಂತ್ರ
ಮೆಟ್ರೋ ರೀಚ್ 6ರ ಕಾಮಗಾರಿಯು ತ್ವರಿತವಾಗಿ ಸಾಗಿದ್ದು, ಕಾಡುಗೊಂಡನಹಳ್ಳಿ ನಿಲ್ದಾಣದಿಂದ ಹೊರಬಂದಿದೆ. ಸುರಂಗ ಕೊರೆಯುವ ಯಂತ್ರ ತುಂಗಾ (ಟಿಬಿಎಂ) ವೆಂಕಟೇಶಪುರ ನಿಲ್ದಾಣ ಮತ್ತು ಶಾದಿ ಮಹಲ್ ಶಾಫ್ಟ್ ನಡುವೆ 1064 ಮೀಟರ್ ಸುರಂಗದ ಕಾಮಗಾರಿ ಪೂರ್ಣಗೊಳಿಸಿದೆ.
ಕಳೆದ 2022ರ ಅಕ್ಟೋಬರ್ 31 ರಂದು ವೆಂಕಟೇಶಪುರ ನಿಲ್ದಾಣದಿಂದ ಸುರಂಗ ಮಾರ್ಗದ ಕಾಮಗಾರಿಯನ್ನು ಪ್ರಾರಂಬಿಸಿತ್ತು. 2023ರ ಡಿ. 6ರಂದು ಅರೇಬಿಕ್ ಕಾಲೇಜು ಬಳಿಯ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ನಿಲ್ದಾಣದಲ್ಲಿ 1184.4 ಮೀ ಕಾಮಗಾರಿ ಪೂರ್ಣಗೊಳಿಸಿ ಹೊರಬಂದಿದೆ. ಈ ಮೂಲಕ ಒಟ್ಟು 20,992 ಮೀಟರ್‌ಗಳಲ್ಲಿ 18, 832.30 ಮೀ ಅಂದರೆ ಶೇ. 89.70ರಷ್ಟು ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ರೀಚ್ 6ರ ಸುರಂಗ ಮಾರ್ಗಕ್ಕಾಗಿ ನಿಯೋಜಿಸಲಾದ 9 ಟಿಬಿಎಂಗಳಲ್ಲಿ 7 ಟಿಬಿಎಂಗಳು ಸುರಂಗ ಮಾರ್ಗದ ಕಾಮಗಾರಿಗಳನ್ನು ಪೂರ್ಣಗೊಳಿಸಿದೆ.
ಜಯದೇವ ಜಂಕ್ಷನ್‌ನಲ್ಲಿ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣ
ಸಿಲಿಕಾನ್ ಸಿಟಿಯ ಅತಿ ದೊಡ್ಡ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆ ಪಡೆದಿರುವ ಜಯದೇವ ಜಂಕ್ಷನ್ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣವು ಈ ವರ್ಷಾಂತ್ಯಕ್ಕೆ ಆರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಬನ್ನೇರುಘಟ್ಟ ರಸ್ತೆಯ ಜಯದೇವ ಜಂಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಬಹುಹಂತದ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣವು, ಹಳದಿ ಮತ್ತು ಗುಲಾಬಿ ಮೆಟ್ರೋ ಮಾರ್ಗಗಳನ್ನು ಸಂಪರ್ಕಿಸುತ್ತದೆ.
ಹಳದಿ ಮಾರ್ಗದ ಆರ್‌ವಿ ರಸ್ತೆ – ಬೊಮ್ಮಸಂದ್ರ ನಿಲ್ದಾಣ ಹಾಗೂ ಗುಲಾಬಿ ಮಾರ್ಗದ ಕಾಳೇನ ಅಗ್ರಹಾರ – ನಾಗವಾರ ನಿಲ್ದಾಣದ ಭಾಗವಾಗಿ ಜಯದೇವ ಮೆಟ್ರೋ ನಿಲ್ದಾಣವನ್ನು ನಿರ್ಮಿಸಲಾಗುತ್ತಿದ್ದು, ಇದು ಜನದಟ್ಟಣೆ ಸಮಯದಲ್ಲಿ 25 ಸಾವಿರ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. 19,826 ಚದರ ಕಿ.ಮೀ ವಿಸ್ತೀರ್ಣದ ಈ ನಿಲ್ದಾಣದ ನಿರ್ಮಾಣ ಕಾರ್ಯ ಶೇ.90 ಮುಗಿದಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಬಿಎಂಆರ್‌ಸಿಎಲ್ ಎಂಡಿ ಅಂಜುಂ ಪರ್ವೇಜ್ ಪ್ರತಿಕ್ರಿಯಿಸಿ, ಜಯದೇವ ಮೆಟ್ರೋ ನಿಲ್ದಾಣವು ನಮ್ಮ ಮೆಟ್ರೋ 2ನೇ ಹಂತದ ಎರಡು ಮಾರ್ಗಗಳ ಭಾಗವಾಗಿದೆ. ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ನಿಲ್ದಾಣವರೆಗಿನ ಹಳದಿ ಮಾರ್ಗವು ಜಯದೇವ ನಿಲ್ದಾಣ ಸೇರಿ ಒಟ್ಟು 16 ನಿಲ್ದಾಣಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಹಳದಿ ಮಾರ್ಗವನ್ನು 2023ರ ವರ್ಷಾಂತ್ಯದ ವೇಳೆಗೆ ಕಾರ್ಯಾರಂಭ ಮಾಡುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿತ್ತು. ಗುಲಾಬಿ ಮಾರ್ಗವು 2025ರ ಮಾರ್ಚ್‌ನಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಹಳದಿ ಮಾರ್ಗವು ನಗರದ ಪ್ರಮುಖ ಐಟಿ ಕಾರಿಡಾರ್ ಆಗಿರುವ ಎಲೆಕ್ಟ್ರಾನಿಕ್ ಸಿಟಿಯನ್ನು ಸಂಪರ್ಕಿಸುತ್ತದೆ. ಇನ್ನು ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣವು ಮೂರನೇ ಇಂಟರ್‌ಚೇಂಜ್ ನಿಲ್ದಾಣವಾಗಲಿದ್ದು, ಇದು ಹಳದಿ ಮಾರ್ಗ ಮತ್ತು ಹಸಿರು ಮಾರ್ಗವನ್ನು ಸಂಪರ್ಕಿಸುತ್ತದೆ. ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾದ ಮೇಲೆ ಪ್ರತಿ ನಿತ್ಯ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ 2 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.