ಆನೇಕಲ್: ಹೆಬ್ಬಗೋಡಿ ಮೆಟ್ರೋ ನಿಲ್ದಾಣಕ್ಕೆ (hebbagodi metro station) ಬಯೋಕಾನ್ ಹೆಸರು ಸೇರ್ಪಡೆ (biocon hebbagodi metro station) ಮಾಡುತ್ತಿರವುದಕ್ಕೆ ವಿರೋಧಗಳು (Namma Metro) ಶುರುವಾಗಿದೆ. ಹೆಸರು ಬದಲಾಯಿಸುವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ. ಹೆಬ್ಬಗೋಡಿ ಹೆಸರನ್ನು ಮಾರಾಟ ಮಾಡಲು ಹೊರಟಿರುವ ಬಿಎಂಆರ್‌ಸಿಎಲ್ (BMRCL) ವಿರುದ್ಧ ತಿರುಗಿ ಬಿದ್ದಿದ್ದಾರೆ.
ಸೋಮವಾರ (ಜ.8) ಹೆಬ್ಬಗೋಡಿಯ ನೂರಾರು ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಹೆಬ್ಬಗೋಡಿ ಹೆಸರಿನ ಮುಂದೆ ಬಯೋಕಾನ್ ಹೆಸರಿಡುವುದು ಸರಿಯಲ್ಲ. ಇದರಿಂದ ನಮ್ಮ ಭಾವನೆಗೆ ಧಕ್ಕೆ ಉಂಟಾಗಿದೆ. ಹೆಬ್ಬಗೋಡಿ ಮೆಟ್ರೋ ನಿಲ್ದಾಣ ಎಂದು ಹೆಸರಿಡಬೇಕು ಎಂದು ಆಗ್ರಹಿಸಿದ್ದಾರೆ. ಹೆಬ್ಬಗೋಡಿ ವೃತ್ತದಿಂದ ಹೊಸೂರು ಮುಖ್ಯರಸ್ತೆವರೆಗೆ ನೂರಾರು ಮಂದಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬಯೋಕಾನ್‌ನೊಂದಿಗೆ ಒಡಂಬಡಿಕೆ
ಹೊಸೂರು ರಸ್ತೆಯಲ್ಲಿ ಉದ್ದೇಶಿತ ಹೆಬ್ಬಗೋಡಿ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ 65 ಕೋಟಿ ರೂ.ಗಳ ದೇಣಿಗೆ ನೀಡಲು ಬಿಎಂಆರ್‌ಸಿಎಲ್‌ನೊಂದಿಗೆ ಬಯೋಕಾನ್ ಫೌಂಡೇಶನ್ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದೆ. ಹೀಗಾಗಿ ಹೆಬ್ಬಗೋಡಿ ಮೆಟ್ರೋ ನಿಲ್ದಾಣವನ್ನು ಬಯೋಕಾನ್ ಹೆಬ್ಬಗೋಡಿ ಮೆಟ್ರೋ ನಿಲ್ದಾಣ ಎಂದು ಹೆಸರಿಸಲು ಬಿಎಂಆರ್‌ಸಿಎಲ್ ಸರ್ಕಾರಕ್ಕೆ ಪ್ರಸ್ತಾಪವನ್ನು ಇಟ್ಟಿತ್ತು. ಹೀಗಾಗಿ ಇದಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾಗಿದೆ.
ಅಂದಹಾಗೇ, ಹೆಬ್ಬಗೋಡಿ ಮೆಟ್ರೋ ನಿಲ್ದಾಣವು ಬೆಂಗಳೂರು ಮೆಟ್ರೋ ರೈಲು ಯೋಜನೆಯ 2ನೇ ಹಂತದ ಅಡಿಯಲ್ಲಿ 5,744 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೆ (ರೀಚ್ 5) 18.82 ಕಿ.ಮೀ ಹೊಸ ಮಾರ್ಗದ ಭಾಗವಾಗಿದೆ. ಈ ಮೆಟ್ರೋ ಸಂಪರ್ಕವು ಬೆಂಗಳೂರಿನ ಎಲ್ಲಾ ಭಾಗಗಳ ನಿವಾಸಿಗಳಿಗೆ ಅನುಕೂಲವಾಗಲಿದೆ. ಹೊಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ.
ಜಯದೇವ ಜಂಕ್ಷನ್‌ನಲ್ಲಿ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣ
ಸಿಲಿಕಾನ್ ಸಿಟಿಯ ಅತಿ ದೊಡ್ಡ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆ ಪಡೆದಿರುವ ಜಯದೇವ ಜಂಕ್ಷನ್ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣವು ಈ ವರ್ಷಾಂತ್ಯಕ್ಕೆ ಆರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಬನ್ನೇರುಘಟ್ಟ ರಸ್ತೆಯ ಜಯದೇವ ಜಂಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಬಹುಹಂತದ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣವು, ಹಳದಿ ಮತ್ತು ಗುಲಾಬಿ ಮೆಟ್ರೋ ಮಾರ್ಗಗಳನ್ನು ಸಂಪರ್ಕಿಸುತ್ತದೆ.
ಹಳದಿ ಮಾರ್ಗದ ಆರ್‌ವಿ ರಸ್ತೆ – ಬೊಮ್ಮಸಂದ್ರ ನಿಲ್ದಾಣ ಹಾಗೂ ಗುಲಾಬಿ ಮಾರ್ಗದ ಕಾಳೇನ ಅಗ್ರಹಾರ – ನಾಗವಾರ ನಿಲ್ದಾಣದ ಭಾಗವಾಗಿ ಜಯದೇವ ಮೆಟ್ರೋ ನಿಲ್ದಾಣವನ್ನು ನಿರ್ಮಿಸಲಾಗುತ್ತಿದ್ದು, ಇದು ಜನದಟ್ಟಣೆ ಸಮಯದಲ್ಲಿ 25 ಸಾವಿರ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. 19,826 ಚದರ ಕಿ.ಮೀ ವಿಸ್ತೀರ್ಣದ ಈ ನಿಲ್ದಾಣದ ನಿರ್ಮಾಣ ಕಾರ್ಯ ಶೇ.90 ಮುಗಿದಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಯದೇವ ಮೆಟ್ರೋ ನಿಲ್ದಾಣವು ನಮ್ಮ ಮೆಟ್ರೋ 2ನೇ ಹಂತದ ಎರಡು ಮಾರ್ಗಗಳ ಭಾಗವಾಗಿದೆ. ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ನಿಲ್ದಾಣವರೆಗಿನ ಹಳದಿ ಮಾರ್ಗವು ಜಯದೇವ ನಿಲ್ದಾಣ ಸೇರಿ ಒಟ್ಟು 16 ನಿಲ್ದಾಣಗಳನ್ನು ಹೊಂದಿದೆ ಹಳದಿ ಮಾರ್ಗವನ್ನು 2023ರ ವರ್ಷಾಂತ್ಯದ ವೇಳೆಗೆ ಕಾರ್ಯಾರಂಭ ಮಾಡುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿತ್ತು. ಗುಲಾಬಿ ಮಾರ್ಗವು 2025ರ ಮಾರ್ಚ್‌ನಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಹಳದಿ ಮಾರ್ಗವು ನಗರದ ಪ್ರಮುಖ ಐಟಿ ಕಾರಿಡಾರ್ ಆಗಿರುವ ಎಲೆಕ್ಟ್ರಾನಿಕ್ ಸಿಟಿಯನ್ನು ಸಂಪರ್ಕಿಸುತ್ತದೆ. ಇನ್ನು ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣವು ಮೂರನೇ ಇಂಟರ್‌ಚೇಂಜ್ ನಿಲ್ದಾಣವಾಗಲಿದ್ದು, ಇದು ಹಳದಿ ಮಾರ್ಗ ಮತ್ತು ಹಸಿರು ಮಾರ್ಗವನ್ನು ಸಂಪರ್ಕಿಸುತ್ತದೆ. ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾದ ಮೇಲೆ ಪ್ರತಿ ನಿತ್ಯ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ 2 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ