Site icon Vistara News

Namma Metro Pillar | ಮೆಟ್ರೋ ಪಿಲ್ಲರ್‌ ಕುಸಿತ: ಮೂವರು ಎಂಜಿನಿಯರ್‌ಗಳ ಅಮಾನತು; ಮೂರೇ ದಿನದಲ್ಲಿ ವರದಿ ಸಲ್ಲಿಸಲು ಎನ್‌ಸಿಸಿ ಕಂಪನಿಗೆ ನೋಟಿಸ್‌

ಬೆಂಗಳೂರು: ಇಲ್ಲಿನ ನಾಗವಾರ ಸಮೀಪ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ (Namma Metro Pillar) ಕುಸಿತವಾಗಿ ತಾಯಿ-ಮಗು ದುರ್ಮರಣ ಹೊಂದಿದ್ದು, ಈ ಘಟನೆಗೆ ಎಂಜಿನಿಯರ್‌ಗಳ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಬಿಎಂಆರ್‌ಸಿಎಲ್‌ ನಿಗಮವು ಮೂವರು ಎಂಜಿನಿಯರ್‌ಗಳನ್ನು ಅಮಾನತು ಮಾಡಿದೆ. ಮೆಟ್ರೋ ಡೆಪ್ಯುಟಿ ಚೀಫ್ ಎಂಜಿನಿಯರ್‌, ಎಕ್ಸಿಕ್ಯೂಟಿವ್ ಎಂಜಿನಿಯರ್, ಸೆಕ್ಷನ್ ಎಂಜಿನಿಯರ್‌ ಅವರನ್ನು ವಜಾ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ಎಂಡಿ ಅಂಜುಂ ಫರ್ವೇಜ್ ಮಾಹಿತಿ ನೀಡಿದ್ದಾರೆ.

ಐಐಎಸ್‌ಸಿಯಿಂದ ತನಿಖೆ
ಘಟನೆಗೆ ನಿಜವಾದ ಕಾರಣ ಏನು ಎಂಬುದರ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮೂಲಕ ತನಿಖೆ ನಡೆಸಿ ವರದಿ ಸಲ್ಲಿಸಲು ಬಿಎಂಆರ್‌ಸಿಎಲ್‌ ಮನವಿ ಮಾಡಿದೆ. ಈ ಸಂಬಂಧ ಐಐಎಸ್‌ಸಿ ಸಂಸ್ಥೆಯು ತನಿಖೆಗೆ ಒಪ್ಪಿಗೆ ಸೂಚಿಸಿದ್ದು, ಬುಧವಾರ ಸಂಜೆಯೇ ಪರಿಶೀಲನೆ ನಡೆಸಲು ಮುಂದಾಗಲಿದ್ದಾರೆ. ಜತೆಗೆ ಮೆಟ್ರೋ ನಿಗಮದ ಹಿರಿಯ ಅಧಿಕಾರಿಗಳು ಘಟನೆಯ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲಿದ್ದಾರೆ. ವರದಿ ಬಂದ ಬಳಿಕ ಯಾವ ಕಾರಣ ಹೀಗಾಯಿತು? ಯಾರು ಇದರ ಸಂಪೂರ್ಣ ಜವಾಬ್ದಾರಿ ಹೊರಬೇಕೆಂದು ತಿಳಿಯಲಿದೆ. ನಂತರ ಸೂಕ್ತ ಕ್ರಮಕೈಗೊಳ್ಳುವುದಾಗಿ ಅಂಜುಂ ಫರ್ವೇಜ್‌ ತಿಳಿಸಿದ್ದಾರೆ.

ಎನ್‌ಸಿಸಿ ಕಂಪನಿಗೆ ಕಾದಿದ್ಯಾ ಕಂಟಕ?
ಮೆಟ್ರೋ ಕಾಮಗಾರಿಗಾಗಿ ಗುತ್ತಿಗೆ ಪಡೆದಿರುವ ಎನ್‌ಸಿಸಿ ಕಂಪನಿಗೆ ಬೆಂಗಳೂರು ಮೆಟ್ರೋ ನಿಗಮ ನೋಟಿಸ್‌ ಜಾರಿ ಮಾಡಿದೆ. ಮೆಟ್ರೋ ಪಿಲ್ಲರ್ ಕುಸಿತಕ್ಕೆ ಕಾರಣವೇನು ಎಂಬುದೂ ಸೇರಿದಂತೆ ಅವಘಡದ ಸಂಪೂರ್ಣ ವರದಿ ಕೇಳಿದೆ. ಮೂರು ದಿನಗಳ ಒಳಗೆ ಸಂಪೂರ್ಣ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಎನ್‌ಸಿಸಿ ಕಂಪನಿಯ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ.

ಗುತ್ತಿಗೆ ಆಧಾರದ ಅಧಿಕಾರಿ ಮಾತ್ರ ವಜಾ?
ಮೆಟ್ರೋ ಪಿಲ್ಲರ್‌ ಕುಸಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಎಂಆರ್‌ಸಿಎಲ್‌ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಿದ್ದಯಾ ಎಂಬ ಪ್ರಶ್ನೆ ಕಾಡುತ್ತಿದೆ. ಕೇವಲ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿದ್ದವರನ್ನು ಮಾತ್ರ ವಜಾ ಮಾಡಲಾಗಿದೆ. ಡೆಪ್ಯೂಟಿ ಚೀಫ್ ಇಂಜಿನಿಯರ್‌ಗಿಂತ ಕೆಳಹಂತದ ಅಧಿಕಾರಿ ವೆಂಕಟೇಶ್ ಮಾತ್ರ ತಲೆದಂಡವಾಗಿದೆ ಎಕ್ಸಿಕ್ಯುಟಿವ್ ಎಂಜಿನಿಯರ್ ಹೆಗ್ಗಾರೆಡ್ಡಿ ಹಾಗೂ ಚೀಫ್ ಎಂಜಿನಿಯರ್ ರಂಗನಾಥ್, ಸೈಟ್ ಎಂಜಿನಿಯರ್ ವಿಶಾಲ್ ಕುಮಾರ್‌ ನಿಗಮ ಶ್ರೀರಕ್ಷೆ ನೀಡುತ್ತಿರುವ ಆರೋಪ ಕೇಳಿ ಬಂದಿದೆ.

ಕೇಂದ್ರದ ಅಂಗಳಕ್ಕೆ ತಲುಪಿದ ಮೆಟ್ರೋ ಪಿಲ್ಲರ್‌ ಕುಸಿತ
ಮೆಟ್ರೋ ಕಾಮಗಾರಿ ವೇಳೆ ಪಿಲ್ಲರ್‌ ಕುಸಿದು ತಾಯಿ-ಮಗು ಸಾವು ಪ್ರಕರಣವು ಕೇಂದ್ರದ ಅಂಗಳಕ್ಕೆ ತಲುಪಿದೆ. ಪ್ರಕರಣ ಸಂಬಂಧ ಕೇಂದ್ರ ನಗರಾಭಿವೃದ್ಧಿ ಇಲಾಖೆ ವರದಿ ಕೇಳಿದೆ. ಮೆಟ್ರೋ ನಿಗಮ ಎಂಡಿ ಅಂಜುಂ ಫರ್ವೇಜ್‌ಗೆ ಕರೆ ಮೂಲಕ ವರದಿ ಕೇಳಿದ್ದು, ಎರಡು ದಿನಗಳಲ್ಲಿ ವರದಿ ನೀಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ | Santro Ravi case | ಸ್ಯಾಂಟ್ರೋ ರವಿ ಮೊದಲ ಪತ್ನಿ ಮನೆಗೆ ಲಗ್ಗೆ ಇಟ್ಟ 30 ಪೊಲೀಸರ ವಿಶೇಷ ತಂಡ: ಡೈರಿ, ಗ್ಯಾಸ್‌ ಬಿಲ್‌ ವಶಕ್ಕೆ!

Exit mobile version