Site icon Vistara News

Namma Metro Pillar | ಮೆಟ್ರೋ ಪಿಲ್ಲರ್‌ಗೆ ಬಲಿಯಾದ ತಾಯಿ-ಮಗುವಿನ ಅಂತ್ಯಕ್ರಿಯೆ; ಮುಗಿಲು ಮುಟ್ಟಿದ ಬಂಧುಗಳ ಆಕ್ರಂದನ

ದಾವಣಗೆರೆ: ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ (Namma Metro Pillar) ಕುಸಿತದಿಂದಾಗಿ ಕಣ್ಣು ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ಸುಂದರವಾಗಿದ್ದ ಕುಟುಂಬಕ್ಕೆ ಕಗ್ಗತ್ತಲು ಆವರಿಸಿದೆ. ಮನೆಗೆ ಮಹಾಲಕ್ಷ್ಮಿಯಾಗಿದ್ದ ಸೊಸೆಯನ್ನು ಹಾಗೂ ಮುದ್ದಾದ ಮೊಮ್ಮಗನನ್ನು ಕಳೆದುಕೊಂಡ ಆ ಮನೆಯವರು ತಾಯಿ, ಮಗುವಿನ ಅಂತ್ಯ ಸಂಸ್ಕಾರವನ್ನು ಕಣ್ಣೀರು, ಆಕ್ರಂದನಗಳ ನಡುವೆ ನೆರವೇರಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಬೆಂಗಳೂರಿನ ಎಚ್‌ಬಿಆರ್‌ ಲೇಔಟ್‌ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ ಒಂದು ಮರದ ಮೇಲೆ ಉರುಳಿ, ಮರದ ಗೆಲ್ಲು ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್‌ ಮೇಲೆ ಬಿದ್ದಿತ್ತು. ಇದರಿಂದ ಬೈಕ್‌ನಲ್ಲಿ ಸಾಗುತ್ತಿದ್ದ ಲೋಹಿತ್‌ ಅವರ ಪತ್ನಿ ತೇಜಸ್ವಿನಿ ಹಾಗೂ ಪುಟ್ಟ ಮಗು ವಿಹಾನ್‌ ಮೃತಪಟ್ಟಿದ್ದರು. ಲೋಹಿತ್‌ ಮತ್ತು ಇನ್ನೊಂದು ಮಗು ಪವಾಡ ಸದೃಶವಾಗಿ ಬದುಕುಳಿದಿತ್ತು. ಲೋಹಿತ್‌ ಅವರು ಮೂಲತಃ ಗದಗದವರಾದರೆ, ತೇಜಸ್ವಿನಿ ದಾವಣಗೆರೆಯವರು.

ರಾತ್ರಿಯೇ ಮರಣೋತ್ತರ ಪರೀಕ್ಷೆ ನಡೆದ ಬಳಿಕ ತೇಜಸ್ವಿನಿ ಹಾಗೂ ಮಗುವಿನ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿತ್ತು. ರಾತ್ರಿಯೇ ದಾವಣಗೆರೆಯ ತೇಜಸ್ವಿನಿ ಅವರ ತಾಯಿ ಮನೆಗೆ ಕರೆದೊಯ್ಯಲಾಗಿತ್ತು. ಬುಧವಾರ ದಾವಣಗೆರೆಯ ಬಸವೇಶ್ವರ ನಗರದಲ್ಲಿರುವ ನಿವಾಸದಲ್ಲಿ ಭಾವಸಾರ ಕ್ಷೇತ್ರೀಯ ಸಮಾಜದ ನಿಯಮದಂತೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

ಮೊದಲು ಗ್ಲಾಸ್ ಹೌಸ್ ಬಳಿಯ ರುದ್ರಭೂಮಿಯಲ್ಲಿ ಮಗು ವಿಹಾನ್‌ನ ಅಂತ್ಯಸಂಸ್ಕಾರ ನೆರವೇರಿಸಿ ಬಳಿಕ ಪಿಬಿ ರಸ್ತೆಯಲ್ಲಿರುವ ವೈಕುಂಠ ದಾಮದಲ್ಲಿ ತಾಯಿ ತೇಜಸ್ವಿನಿ ಮೃತದೇಹ ದಹನ ಮಾಡಿದರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ತಾತನ ಹೆಗಲ ಮೇಲೇರಿ ಕುಣಿದು ಕುಪ್ಪಳಿಸುತ್ತಿದ್ದ ಮೊಮ್ಮಗ ಕೈನಲ್ಲಿ ಶವವಾಗಿ ಇರುವುದನ್ನು ಕಂಡು ಲೋಹಿತ್‌ ತಂದೆ ಕಣ್ಣೀರು ಇಟ್ಟರು. ಬಾರದ ಲೋಕಕ್ಕೆ ಹೋದ ಮೊಮ್ಮಗನ ಮೃತದೇಹವನ್ನು ಎದೆಗೆ ಅಪ್ಪಿಕೊಂಡು ಚೀರಾಟ ನಡೆಸಿದರು. ಮನೆಯ ಇಬ್ಬರ ಸದಸ್ಯರನ್ನು ಕಳೆದುಕೊಂಡ ಕುಟುಂಬದಲ್ಲಿ ಕಣ್ಣೀರ ಕೋಡಿ ಆವರಿಸಿತ್ತು.

ಏನಿದು ಘಟನೆ?
ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿರುವ ಮೋಟರೋಲಾದಲ್ಲಿ ಇಂಜಿನಿಯರ್‌ ಆಗಿರುವ ತೇಜಸ್ವಿನಿ ಅವರನ್ನು ಪತಿ ಲೋಹಿತ್‌ ಎಂದಿನಂತೆ ಕಚೇರಿಗೆ ಬಿಟ್ಟು ಇಬ್ಬರು ಮಕ್ಕಳನ್ನು ಬೇಬಿ ಸಿಟ್ಟಿಂಗ್‌ ಬಿಡಲು ತೆರಳುತ್ತಿದ್ದರು. ಆದರೆ ಯಮಸ್ವರೂಪಿಯಾಗಿ ಕಾದು ನಿಂತಿದ್ದ ಮೆಟ್ರೋ ಪಿಲ್ಲರ್‌ಗಳು ಏಕಾಏಕಿ ಮರಕ್ಕೆ ಉರುಳಿ, ಆ ಮರವು ಬೈಕ್‌ನಲ್ಲಿ ಬರುತ್ತಿದ್ದ ತೇಜಸ್ವಿನಿಯ ತಲೆ ಮೇಲೆ ಹಾಗೂ ಎರಡೂವರೆ ವರ್ಷದ ವಿಹಾನ್‌ನ ಬಲಭಾಗದ ಮೇಲೆ ಬಿದ್ದಿತ್ತು. ತೀವ್ರ ರಕ್ತಸ್ರಾವದಿಂದಾಗಿ ಅವರಿಬ್ಬರು ಚಿಕಿತ್ಸೆ ಫಲಿಸದೇ ಮಂಗಳವಾರ ಮೃತಪಟ್ಟಿದ್ದರು.

ಮಾತು ತಪ್ಪಿದ ಬಿಎಂಆರ್‌ಸಿಎಲ್‌
ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಬಿದ್ದು ತಾಯಿ-ಮಗು ಸಾವು ಪ್ರಕರಣದಲ್ಲಿ ಬಿಎಂಆರ್‌ಸಿಎಲ್‌ ಮಾತು ತಪ್ಪಿದ್ದು ಜನಾಕ್ರೋಶಕ್ಕೆ ಕಾರಣವಾಯಿತು. ಮೃತದೇಹ ರವಾನೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಹೇಳಿದ್ದ ಆಡಳಿತ ಮಂಡಳಿ ನಂತರ ತಿರುಗಿಯು ನೋಡಿಲ್ಲ. ರಾತ್ರಿ ಮೃತದೇಹ ತೆಗೆದುಕೊಂಡು ಬಂದ ವಾಹನದ ವೆಚ್ಚವನ್ನು ಮೃತರ ಕುಟುಂಬಸ್ಥರೇ ಭರಿಸಿದ್ದರು. 25,000 ರೂ. ವಾಹನ ಖರ್ಚುನ್ನು ಭರಿಸಿದ್ದಾರೆ. ಮೆಟ್ರೋ ಆಡಳಿತ ಮಂಡಳಿ ದಿವ್ಯ ನಿರ್ಲಕ್ಷ್ಯಕ್ಕೆ ದಾವಣಗೆರೆ ಜನತೆ ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ | Namma Metro Pillar | ನಮ್ಮ ಮೆಟ್ರೋ ಪಿಲ್ಲರ್‌ ಎಷ್ಟು ಸುರಕ್ಷಿತ? ಡಿಸೈನ್ ಹೇಗಿರಬೇಕು?

Exit mobile version