ಬೆಂಗಳೂರು: ಹಿಂದಿನ ಐದು ವರ್ಷಗಳಿಂದ ಪ್ರಯಾಣಿಕರು ಬಿಟ್ಟು ಹೋದ ವಸ್ತುಗಳನ್ನು ಮರಳಿ ಪಡೆಯದ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ಹರಾಜು (Namma Metro) ಹಾಕಿದೆ. ಈ ಮೂಲಕ ಲಕ್ಷಾಂತರ ರೂ. ಸಂಗ್ರಹಿಸಿದೆ. ನಮ್ಮ ಮೆಟ್ರೋ ಪ್ರಯಾಣಿಕರು ನಿಲ್ದಾಣ ಹಾಗೂ ರೈಲಿನಲ್ಲಿ ಬಿಟ್ಟು ಹೋದ ವಸ್ತುಗಳನ್ನು ಹರಾಜು (Auction Process) ಹಾಕಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) 7.4 ರೂಪಾಯಿ ಗಳಿಸಿದೆ.
ಮೆಟ್ರೋ ಪ್ರಯಾಣಿಕರು ಬಿಟ್ಟು ಹೋದ ಸುಮಾರು 6,354 ವಸ್ತುಗಳನ್ನು ಮರಳಿ ಪಡೆಯದ ಹಿನ್ನೆಲೆ ಹರಾಜು ಮಾಡಲಾಗಿದೆ. ನೀರಿನ ಬಾಟಲಿ, ಹೆಲ್ಮೆಟ್ಗಳು, ಊಟದ ಬಾಕ್ಸ್ಗಳು, ಬ್ಯಾಗ್, ಛತ್ರಿಯಂತಹ ಇನ್ನಿತರ ವಸ್ತುಗಳನ್ನು ಹರಾಜು ಮಾಡಲಾಗಿದೆ ಎನ್ನಲಾಗಿದೆ. ನೇರಳೆ ಮಾರ್ಗದಲ್ಲಿನ ಒಟ್ಟು 1,402 ವಸ್ತುಗಳು ಮತ್ತು ಹಸಿರು ಮಾರ್ಗದಲ್ಲಿನ 4,952 ವಸ್ತುಗಳನ್ನು ಹರಾಜು ಮಾಡಲಾಗಿದೆ ಎಂದು ನಿಗಮ ತಿಳಿಸಿದೆ.
ಇದನ್ನೂ ಓದಿ: Kadlekai Parishe 2023: ನಾಳೆಯಿಂದ ಕಡಲೆಕಾಯಿ ಪರಿಷೆ; 5 ದಿನ ಈ ಮಾರ್ಗ ಬಂದ್!
ಗ್ಯಾಜೆಟ್ಗಳನ್ನು ಕಳೆದುಕೊಂಡ ಪ್ರಯಾಣಿಕರು!
ಕೆಲ ಪ್ರಯಾಣಿಕರು ತಮ್ಮ ಬಳಿಯಿದ್ದ ಗ್ಯಾಜೆಟ್ಗಳನ್ನು ಬಿಟ್ಟು ಹೋಗಿದ್ದಾರೆ. ಕೆಲವರು ಕಳೆದುಕೊಂಡು ಇರಬಹುದು ಅಥವಾ ಮರೆತು ಬಿಟ್ಟು ಹೋಗಿರಬಹುದು. ಹೀಗೆ ಪತ್ತೆಯಾದ ಗ್ಯಾಜೆಟ್ಗಳನ್ನು ನಿಲ್ದಾಣದ ಸಿಬ್ಬಂದಿಗೆ ನೀಡಲಾಗುತ್ತದೆ. ನಿಲ್ದಾಣದ ಸಿಬ್ಬಂದಿಯನ್ನು ಸಂಪರ್ಕಿಸಿದರೆ ಅದು ಅವರದ್ದೇ ಎಂದು ಪರಿಶೀಲಿಸಿ ಖಚಿತವಾದರೆ ಅವುಗಳನ್ನು ಮಾಲೀಕರಿಗೆ ಹಸ್ತಾಂತರ ಮಾಡಲಾಗುತ್ತದೆ. ಇನ್ನು ಸುರಕ್ಷತೆ ದೃಷ್ಟಿಯಿಂದ ಬಿಎಂಆರ್ಸಿಎಲ್ ಅಧಿಕಾರಿಗಳು ಗ್ಯಾಜೆಟ್ಗಳನ್ನು ಹರಾಜು ಮಾಡಿಲ್ಲ. ಬದಲಿಗೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಚಿನ್ನ-ಬೆಳ್ಳಿಯನ್ನು ಕೇಳಲು ಬರದ ಪ್ರಯಾಣಿಕರು
ಛತ್ರಿ, ಬ್ಯಾಗ್, ಊಟದ ಬಾಕ್ಸ್, ಬಾಟಲಿಗಳಂತಹ ವಸ್ತುಗಳನ್ನು ಸಂಗ್ರಹಿಲು ಆಸಕ್ತಿ ತೋರುವುದಿಲ್ಲ. ಸದ್ಯ ಇಂತಹ ವಸ್ತುಗಳನ್ನು ಬಿಎಂಆರ್ಸಿಎಲ್ ಪ್ರತಿ ಆರು ತಿಂಗಳಿಗೊಮ್ಮೆ ಹರಾಜು ಹಾಕುತ್ತದೆ. ಇನ್ನೂ ಕೆಲವೊಮ್ಮೆ ಪ್ರಯಾಣಿಕರು ಬೆಳ್ಳಿ ಮತ್ತು ಚಿನ್ನದ ವಸ್ತುಗಳನ್ನು ಸಹ ಕೇಳಲು ವಾಪಾಸ್ ಬರದ ನಿದರ್ಶನಗಳಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇನ್ನು ಈ ವಸ್ತುಗಳನ್ನು ಹರಾಜಿಗೂ ಮೊದಲು ಬಿಎಂಆರ್ಸಿಎಲ್ ಹರಾಜಿನ ವಸ್ತುಗಳ ಕುರಿತು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸುತ್ತದೆ. ವಸ್ತು ಕಳೆದುಕೊಂಡವರು ಅಧಿಕಾರಿಗಳನ್ನು ಸಂಪರ್ಕಿಸುವ ಅವಕಾಶವಿದೆ. ಒಂದು ವೇಳೆ ಯಾವುದೇ ಕರೆಗಳು ಬರದೇ ಇದ್ದಾಗ ಹರಾಜು ಮಾಡಲಾಗುತ್ತದೆ.
ಇದನ್ನೂ ಓದಿ: ದೊಡ್ಡ ಗಣಪತಿ ಬೆಣ್ಣೆ ಅಲಂಕಾರಕ್ಕೆ ಡಿಮ್ಯಾಂಡ್ ; ಭಕ್ತರು ಕಾಯಲೇಬೇಕು ಇನ್ನೂ 3 ವರ್ಷ!
ಸುರಂಗ ಕೊರೆದು ಕೆ.ಜಿ. ಹಳ್ಳಿಯಲ್ಲಿ ಹೊರಬಂದ ತುಂಗಾ ಯಂತ್ರ
ಮೆಟ್ರೋ ರೀಚ್ 6ರ ಕಾಮಗಾರಿಯು ತ್ವರಿತವಾಗಿ ಸಾಗಿದ್ದು, ಕಾಡುಗೊಂಡನಹಳ್ಳಿ ನಿಲ್ದಾಣದಿಂದ ಹೊರಬಂದಿದೆ. ಸುರಂಗ ಕೊರೆಯುವ ಯಂತ್ರ ತುಂಗಾ (ಟಿಬಿಎಂ) ವೆಂಕಟೇಶಪುರ ನಿಲ್ದಾಣ ಮತ್ತು ಶಾದಿ ಮಹಲ್ ಶಾಫ್ಟ್ ನಡುವೆ 1064 ಮೀಟರ್ ಸುರಂಗದ ಕಾಮಗಾರಿ ಪೂರ್ಣಗೊಳಿಸಿದೆ.
ಕಳೆದ 2022ರ ಅಕ್ಟೋಬರ್ 31 ರಂದು ವೆಂಕಟೇಶಪುರ ನಿಲ್ದಾಣದಿಂದ ಸುರಂಗ ಮಾರ್ಗದ ಕಾಮಗಾರಿಯನ್ನು ಪ್ರಾರಂಬಿಸಿತ್ತು. 2023ರ ಡಿ. 6ರಂದು ಅರೇಬಿಕ್ ಕಾಲೇಜು ಬಳಿಯ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ನಿಲ್ದಾಣದಲ್ಲಿ 1184.4 ಮೀ ಕಾಮಗಾರಿ ಪೂರ್ಣಗೊಳಿಸಿ ಹೊರಬಂದಿದೆ. ಈ ಮೂಲಕ ಒಟ್ಟು 20,992 ಮೀಟರ್ಗಳಲ್ಲಿ 18, 832.30 ಮೀ ಅಂದರೆ ಶೇ. 89.70ರಷ್ಟು ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ರೀಚ್ 6ರ ಸುರಂಗ ಮಾರ್ಗಕ್ಕಾಗಿ ನಿಯೋಜಿಸಲಾದ 9 ಟಿಬಿಎಂಗಳಲ್ಲಿ 7 ಟಿಬಿಎಂಗಳು ಸುರಂಗ ಮಾರ್ಗದ ಕಾಮಗಾರಿಗಳನ್ನು ಪೂರ್ಣಗೊಳಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.