ಬೆಂಗಳೂರು: ಅಂತೂ 12 ಗಂಟೆಗಳ ಕಾರ್ಯಾಚರಣೆ ನಡೆಸಿ ಹಳಿಯಲ್ಲಿ ಸಿಲುಕಿದ್ದ ಮೆಂಟೈನ್ಸ್ ವೆಹಿಕಲ್‌ನ್ನು ಕ್ರೇನ್ ಮೂಲಕ ಲಿಫ್ಟ್ ಮಾಡಲಾಗಿದೆ. ಅಕ್ಟೋಬರ್ 2ರ ರಾತ್ರಿ ರಾಜಾಜಿನಗರ ಮೆಟ್ರೊ (namma metro) ನಿಲ್ದಾಣದ ತಿರುವಿನಲ್ಲಿ ನಿರ್ವಹಣೆಗಾಗಿ ಹೋಗಿದ್ದ ರೈಲ್ವೆ ವಾಹನವು (ರೀ ರೈಲ್ ವಾಹನ) ಹಳಿಯಲ್ಲೇ ಸಿಲುಕಿತ್ತು. ಪರಿಣಾಮ ಅ.3ರ ಬೆಳಗ್ಗೆ ಹಸಿರು ಮಾರ್ಗದಲ್ಲಿ ಮೆಟ್ರೋ ಓಡಾಟದಲ್ಲಿ ವ್ಯತ್ಯಯ ಉಂಟಾಗಿತ್ತು. ಕೊನೆಗೂ ಮೆಂಟೈನ್ಸ್ ವೆಹಿಕಲ್ ಅನ್ನು ಕ್ರೇನ್ ಮೂಲಕ ಟ್ರ್ಯಾಕ್‌ನಿಂದ ಕೆಳಗೆ ಇಳಿಸಲಾಗಿದೆ.
ಟ್ರ್ಯಾಕ್‌ನಲ್ಲಿ ವೆಹಿಕಲ್‌ನ ವ್ಹೀಲ್ ಜಾಮ್ ಆಗಿತ್ತು. ಹೀಗಾಗಿ ಲಿಫ್ಟ್ ಮಾಡಿ ಮೆಂಟೈನ್ಸ್ ರೈಲನ್ನು ರಸ್ತೆಗಿಳಿಸಲಾಗಿದೆ. ನಾಲ್ಕು ಕಡೆಗೂ ಬೆಲ್ಟ್ ಹಾಕಿ ಕ್ರೇನ್ ಮೂಲಕ ನಿಧಾನವಾಗಿ ಮೇಲೆತ್ತಿ ನಂತರ ಕೆಳಗೆ ಇಳಿಸಲಾಯಿತು ಎಂದು ಆಪರೇಷನ್ ಆ್ಯಂಡ್ ಮೆಂಟೇನೆನ್ಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶಂಕರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಇನ್ನು ಅರ್ಧ ಗಂಟೆಯಲ್ಲಿ ಮತ್ತೆ ಎಂದಿನಂತೆ ಮೆಟ್ರೋ ಸಂಚರಿಸುತ್ತದೆ. ಸದ್ಯ ಎಲ್ಲಾ ಕ್ಲಿಯರ್ ಆಗಿದೆ. ಟ್ರ್ಯಾಕ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ. ರೀ ರೈಲಿನ ಚಕ್ರ ಸಿಲುಕಿದ್ದರಿಂದ ಸಮಸ್ಯೆಯಾಗಿತ್ತು. ಈ ಹಿಂದೆ ಕೂಡ ರೀ ರೈಲು ಸಂಚಾರ ನಡೆಸಿದೆ. ಆದರೆ ಈ ರೀತಿಯ ಸಮಸ್ಯೆ ಆಗಿರಲಿಲ್ಲ. ಆದರೆ ಈ ಬಾರಿ ಸಮಸ್ಯೆ ಆಗಿ ಸಂಚಾರಕ್ಕೆ ಅಡ್ಡಯಾಗಿತ್ತು. ಈ ರೀ ರೈಲು ರಸ್ತೆ ಮತ್ತು ಟ್ರ್ಯಾಕ್ ಮೇಲೆ ಸಂಚರಿಸುತ್ತದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಅಂದರು.
ಏನಿದು ಘಟನೆ?
ಬೆಂಗಳೂರು: ರಾಜಾಜಿನಗರ ಮೆಟ್ರೊ (namma metro) ನಿಲ್ದಾಣದ ತಿರುವಿನಲ್ಲೇ ನಿರ್ವಹಣೆಗಾಗಿ ಹೋಗಿದ್ದ ವಾಹನವು (ರೀ ರೈಲ್ ವಾಹನ) ಹಳಿಯಲ್ಲೇ ಸಿಲುಕಿತ್ತು. ಪರಿಣಾಮ ಹಸಿರು ಮಾರ್ಗದಲ್ಲಿ ಮೆಟ್ರೋ ಓಡಾಟದಲ್ಲಿ ಮಂಗಳವಾರ ವ್ಯತ್ಯಯ ಉಂಟಾಗಿತ್ತು. ಮೆಂಟೈನ್ಸ್ ವೆಹಿಕಲ್ ಆಯತಪ್ಪಿ ಟ್ರ್ಯಾಕ್‌ನಿಂದ ವಾಲಿದ ಪರಿಣಾಮ ಹೀಗಾಗಿದೆ ಎನ್ನಲಾಗಿತ್ತು.
17 ಟನ್ ತೂಕ ಇರುವ ಮೆಂಟೈನ್ಸ್ ವಾಹನ
ಮೆಂಟೈನ್ಸ್ ವಾಹನವನ್ನು (ರೀ ರೈಲ್ ವೆಹಿಕಲ್) ಹಳಿಗೆ ತರಲು ಸಿಬ್ಬಂದಿ ಹರಸಾಹಸ ಪಟ್ಟಿದ್ದರು. ಹಳಿಯಲ್ಲಿ ಸಿಲುಕಿರುವ ಸುಮಾರು 17 ಟನ್ ಇರುವ ಮೆಂಟೈನ್ಸ್ ವಾಹನವನ್ನು ವಾಪಸ್ ಹಳಿ ಮೇಲೆ ಕೂರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕ್ರೇನ್ ಮೂಲಕ ಲಿಫ್ಟಿಂಗ್ ಮಾಡುವ ಕಾರ್ಯಾಚರಣೆಗೆ ಮುಂದಾಗಿತ್ತು.
200 ಟನ್ ಲಿಫ್ಟ್ ಮಾಡುವ ಸಾಮರ್ಥ್ಯ ಹೊಂದಿರುವ ಕ್ರೇನ್ ಬಳಸಿ ಮೆಂಟೈನ್ಸ್ ವಾಹನವನ್ನು ಕೆಳಗಿಳಿಸಲು ಮೆಟ್ರೋ ಇಂಜಿನಿಯರ್ ಕ್ರೇನ್ ಆಪರೇಟರ್‌ಗೆ ಸೂಚನೆ ನೀಡಿದ್ದರು. ಹೀಗಾಗಿ ಬೆಲ್ಟ್ ಸಿಲಿಂಗ್ ಅಳವಡಿಸಿ ಮೆಂಟೈನ್ಸ್ ವಾಹನವನ್ನು ಲಿಫ್ಟ್ ಮಾಡಲು ಮುಂದಾಗಿದ್ದರು. 4 ಮೂಲೆಯಲ್ಲೂ ಸಿಲಿಂಗ್ ಬೆಲ್ಟ್ ಅಳವಡಿಕೆ ಮಾಡಿ ಲಿಫ್ಟಿಂಗ್ ಮಾಡಲು ಮುಂದಾಗಿದ್ದರು.
ಕೆಟ್ಟು ನಿಂತ ಮೆಂಟೈನ್ಸ್ ರೈಲ್ವೆ ವೆಹಿಕಲ್
ಈ ಸಂಬಂಧ ಪ್ರತಿಕ್ರಿಯಿಸಿರುವ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚವ್ಹಾಣ್, ನಮ್ಮ ಮೆಟ್ರೋ ನೆಟ್ ವರ್ಕ್ ವಿಸ್ತರಣೆ ಆಗುತ್ತಿದೆ. ಪ್ರತಿ ಡಿಪೋದಲ್ಲಿ ರೋಡ್ ಕಂ ರೈಲ್ವೆ ವೆಹಿಕಲ್ ಇರುತ್ತದೆ. ಮೆಟ್ರೋ ರೈಲು ಕೆಟ್ಟು ನಿಂತರೆ ಅದನ್ನು ಈ ರೈಲ್ವೆ ವೆಹಿಕಲ್ ಹಳಿಯಲ್ಲಿ ಹೋಗಿ ಸರಿ ಪಡಿಸುತ್ತದೆ. ಈ ರೋಡ್ ಕಂ ರೈಲಿನಲ್ಲಿ ಮೆಟ್ರೋ ಸರಿಪಡಿಸುವ ಗ್ಯಾಜೇಟ್ಸ್ ಗಳಿರುತ್ತೆ. ಸೋಮವಾರ ರಾತ್ರಿ ಈ ವೆಹಿಕಲ್ ಕಾರ್ಯಾಚರಣೆಗೆ ಹೋದಾಗ ಕೆಟ್ಟು ಹೋಗಿದ್ಯಾ ಅಥವಾ ಹಳಿ ತಪ್ಪಿದ್ಯಾ ಎಂಬ ಮಾಹಿತಿ ಇಲ್ಲ ಎಂದರು.
ಬೆಂಗಳೂರಿಗೆ ದೆಹಲಿ ಟೀಂ
ಮೆಟ್ರೋ ಟ್ರ್ಯಾಕ್‌ನಲ್ಲಿ ಮೆಂಟೈನ್ಸ್ ವಾಹನವು ಅರ್ಧಕ್ಕೆ ವಾಲಿದೆ. ಇದು ಇನ್ನಷ್ಟು ವಾಲುವ ಸಾಧ್ಯತೆ ಇದೆ. ಹೀಗಾಗಿ ದೆಹಲಿಯ ತಜ್ಞರ ತಂಡವನ್ನು ಕರೆಸುವ ಸಾಧ್ಯತೆ ಇದೆ. ಇತ್ತ ಮೆಂಟೈನ್ಸ್ ವಾಹನವನ್ನು ಮೇಲೆತ್ತಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿತ್ತು.
ಕೈ ಕೊಟ್ಟ ಮೆಟ್ರೋ; ಬಿಎಂಟಿಸಿಯತ್ತ ಹೆಜ್ಜೆ ಹಾಕಿದ ಪ್ರಯಾಣಿಕರು
ಸಾಲು ಸಾಲು ರಜೆಯನ್ನು ಮುಗಿಸಿ ವಾಪಸ್ ತಮ್ಮ ಕೆಲಸ- ಕಾರ್ಯಗಳತ್ತ ಮುಖ ಮಾಡಿದ್ದ ಜನರಿಗೆ ಇದು ಅನಾನುಕೂಲ ಉಂಟು ಮಾಡಿತ್ತು. ಪೀಕ್ ಅವರ್‌ನಲ್ಲೇ ರೈಲು ಓಡಾಟವು ಸ್ಥಗಿತವಾಗಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ಶಾಲಾ-ಕಾಲೇಜು ಮಕ್ಕಳಿಂದ ಹಿಡಿದು ಉದ್ಯೋಗಿಗಳಿಗೆ ಸಮಸ್ಯೆ ಆಗಿತ್ತು. ಮೆಟ್ರೋ ಅರ್ಧಕ್ಕೆ ಕೈಕೊಟ್ಟ ಪರಿಣಾಮ ಬಹುತೇಕರು ಬಿಎಂಟಿಸಿ ಬಸ್‌ನತ್ತ ಹೆಜ್ಜೆ ಹಾಕಿದ್ದರು. ಇತ್ತ ಒಂದು ಟ್ರ್ಯಾಕ್ ಬಳಕೆಗೆ ಬರದ ಕಾರಣಕ್ಕೆ ಏಕಮುಖವಾಗಿ ಮಾತ್ರ ರೈಲುಗಳು ಸಂಚರಿಸುತ್ತಿದ್ದವು.
ಸದ್ಯ ನಾಗಸಂದ್ರದಿಂದ ಯಶವಂತಪುರ ಮತ್ತು ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆಯಿಂದ ರೇಷ್ಮೆ ಸಂಸ್ಥೆ ಮೆಟ್ರೊ ನಿಲ್ದಾಣದ ನಡುವೆ ಮಾತ್ರ ಹಸಿರು ಮಾರ್ಗದಲ್ಲಿ ರೈಲು ಸೇವೆಗಳು ಲಭ್ಯವಿತ್ತು. ಯಶವಂತಪುರದಿಂದ ಮಂತ್ರಿ ಸ್ಕ್ವೇರ್ ವರೆಗೆ ಸೇವೆ ಲಭ್ಯವಿರಲಿಲ್ಲ. ಶ್ರೀರಾಮಂಪುರ, ಕುವೆಂಪುನಗರ, ರಾಜಾಜಿನಗರ, ಮಹಾಲಕ್ಷ್ಮೀ, ಸ್ಯಾಂಡಲ್ ಸೋಪ್ ಫ್ಯಾಕ್ಟರಿ ನಡುವೆ ಮೆಟ್ರೋ ಸೇವೆ ಸಂಚಾರ ಇರಲಿಲ್ಲ.
ಯಶವಂತಪುರ ಮೆಟ್ರೋ ನಿಲ್ದಾಣ ಹೌಸ್ ಫುಲ್
ಹಸಿರು ಮಾರ್ಗದಲ್ಲಿ ತಾಂತ್ರಿಕ ದೋಷ ಉಂಟಾಗಿದ ಹಿನ್ನೆಲೆಯಲ್ಲಿ 5 ನಿಮಿಷಕ್ಕೊಂದು ಓಡಾಡುತ್ತಿದ್ದ ರೈಲು ಈಗ ಅರ್ಧ ಗಂಟೆಗೊಮ್ಮೆ ರೈಲು ಓಡಾಡುತ್ತಿದ್ದವು. ಯಶವಂತಪುರ ಮೆಟ್ರೋ ನಿಲ್ದಾಣವು ಪ್ರಯಾಣಿಕರಿಂದ ತುಂಬಿ ಹೋಗಿತ್ತು. ಫ್ಲಾಟ್ ಫಾರಂನಲ್ಲಿ ಜನರು ನಿಲ್ಲಲು ಆಗದಷ್ಟು ಕಿಕ್ಕಿರಿದು ತುಂಬಿದ್ದರು. ಕೆಲವರು ಮೆಟ್ರೋ ಪ್ರವೇಶ ದ್ವಾರದ ಗ್ಲಾಸ್‌ಅನ್ನು ಕಾಲಿನಲ್ಲಿ ಒದ್ದು ದಾಟಿ ಹೋಗಿದ್ದಾರೆ. ಯಶವಂತಪುರ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರ ( ಶರ್ಟರ್ ) ಗಳನ್ನು ಮೆಟ್ರೋ ಸಿಬ್ಬಂದಿ ಬಂದ್ ಮಾಡಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ