Site icon Vistara News

ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ | ವಿಸ್ತಾರ ನ್ಯೂಸ್‌ ಅಭಿಯಾನಕ್ಕೆ ಕುಪ್ಪಗಡ್ಡೆಯಲ್ಲಿ ಅದ್ಧೂರಿ ಆರಂಭ; ಕಳೆಗಟ್ಟಿದ ಮೆರವಣಿಗೆ

soraba nammura shale ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ ವಿಸ್ತಾರ ನ್ಯೂಸ್‌ ಅಭಿಯಾನ

ಶಿವಮೊಗ್ಗ: ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು. ಇದು ಸರ್ಕಾರದಿಂದಷ್ಟೆ ಸಾಧ್ಯವಿಲ್ಲ. ಮಾಧ್ಯಮಗಳು, ಸಾರ್ವಜನಿಕರ ಸಹಿತ ಎಲ್ಲರೂ ಕೈಜೋಡಿಸಿದಾಗ ಮಾತ್ರ ಸಾಧ್ಯ ಎಂಬ ನಿಟ್ಟಿನಲ್ಲಿ ವಿಸ್ತಾರ ನ್ಯೂಸ್‌ ರೂಪಿಸಿರುವ “ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆʼʼ ಅಭಿಯಾನಕ್ಕೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ಭಾನುವಾರ ಅದ್ಧೂರಿ ಶುಭಾರಂಭ ಸಿಕ್ಕಿದೆ. ಇಡೀ ಊರಿಗೆ ಊರೇ ಸಂಭ್ರಮದಲ್ಲಿ ಭಾಗಿಯಾಗಿದೆ. ಶಾಲೆಯ ಮಕ್ಕಳು ಸಮವಸ್ತ್ರ ಧರಿಸಿ ಕೈಯಲ್ಲಿ ಪ್ಲೆಕಾರ್ಡ್‌ ಹಿಡಿದು ಸಾಗಿದರೆ, ಪೂರ್ಣಕುಂಭ ಕಲಶ ಹೊತ್ತ ಮಹಿಳೆಯರು ಮೆರವಣಿಗೆಯ ಮೆರುಗು ಹೆಚ್ಚಿಸಿದರು.

soraba nammura shale ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ ವಿಸ್ತಾರ ನ್ಯೂಸ್‌ ಅಭಿಯಾನ

ಕುಪ್ಪಗಡ್ಡೆಯಲ್ಲಿ ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ ಅಭಿಯಾನದ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಓಣಿಗಳ ಸಹಿತ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚಾರ ಸಾಗಿದ್ದು, ಮಕ್ಕಳಾದಿಯಾಗಿ ಗ್ರಾಮಸ್ಥರು ಭಾಗಿಯಾಗುವ ಮೂಲಕ ಗಮನ ಸೆಳೆದರು. ಡೊಳ್ಳು ಕುಣಿತವೂ ಮೆರವಣಿಗೆಯಲ್ಲಿದ್ದು, ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

soraba nammura shale ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ ವಿಸ್ತಾರ ನ್ಯೂಸ್‌ ಅಭಿಯಾನ

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕುಡಚಿ ಕ್ಷೇತ್ರದ ಶಾಸಕ ಪಿ. ರಾಜೀವ್ ಮತ್ತು ಗ್ರಾಮಸ್ಥರು ಈ ಶಾಲೆಯನ್ನು ದತ್ತು ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ (ಡಿ. ೧೮) ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಶಾಸಕ ಪಿ.ರಾಜೀವ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಇದನ್ನೂ ಓದಿ | ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ | ವಿಸ್ತಾರ ನ್ಯೂಸ್‌ ಅಭಿಯಾನದಡಿ ಇಂದು ಸೊರಬದ ಕುಪ್ಪಗಡ್ಡೆಯ ಸರ್ಕಾರಿ ಶಾಲೆ ದತ್ತು ಸಮಾರಂಭ

soraba nammura shale ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ ವಿಸ್ತಾರ ನ್ಯೂಸ್‌ ಅಭಿಯಾನ

ನಿವೃತ್ತ ಶಿಕ್ಷಕರು, ಹಳೇ ವಿದ್ಯಾರ್ಥಿಗಳ ಜತೆ ಸಂವಾದ
ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ, ಸಿಇಒ ಹರಿಪ್ರಕಾಶ್ ಕೋಣೆಮನೆ, ಶಾಸಕ ಪಿ. ರಾಜೀವ್‌, ಬಾಲ ಉತ್ಸವ್ ಮುಖ್ಯಸ್ಥ ರಮೇಶ್ ಬಾಲಸುಂದರಮ್ ಸೇರಿ ಹಲವರು ಭಾಗಿಯಾಗಿದ್ದಾರೆ. ಇದೇ ವೇಳೆ ಕುಪ್ಪಗಡ್ಡೆ ಶಾಲೆಯ ನಿವೃತ್ತ ಶಿಕ್ಷಕರು ಹಾಗೂ ಹಳೇ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು.

soraba nammura shale ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ ವಿಸ್ತಾರ ನ್ಯೂಸ್‌ ಅಭಿಯಾನ

ಶಿಕ್ಷಣ ಸಚಿವರಿಂದ ಉದ್ಘಾಟನೆ
ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಅವರು ಕಾರ್ಯಕ್ರಮವನ್ನು ಮಧ್ಯಾಹ್ನ 3.30ಕ್ಕೆ ಉದ್ಘಾಟಿಸಲಿದ್ದಾರೆ. ಸೊರಬ ವಿಧಾನಸಭೆ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್‌ ಮಾಜಿ ಸದಸ್ಯ, ಪಿಇಎಸ್‌ ವಿವಿ ಕುಲಾಧಿಪತಿ, ಕರ್ನಾಟಕ ಸರ್ಕಾರದ ಶೈಕ್ಷಣಿಕ ಸುಧಾರಣೆಗಳ ಸಲಹೆಗಾರ ಪ್ರೊ. ಎಂ.ಆರ್‌. ದೊರೆಸ್ವಾಮಿ, ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಶಿವಮೊಗ್ಗ ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ, ಬಾಲ ಉತ್ಸವ ಮುಖ್ಯಸ್ಥರಾದ ರಮೇಶ್‌ ಬಾಲಸುಂದರಮ್‌, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ, ಕುಪ್ಪಗುಡ್ಡೆ ಗ್ರಾ.ಪಂ ಅಧ್ಯಕ್ಷರಾದ ವಿದ್ಯಾ, ಎಸ್‌ಡಿಎಂಸಿ ಅಧ್ಯಕ್ಷರಾದ ದಯಾನಂದ ಶಾನಭಾಗ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿಸ್ತಾರ ನ್ಯೂಸ್‌ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ, ಚೇರ್ಮನ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಚ್‌.ವಿ. ಧರ್ಮೇಶ್‌, ನಿರ್ದೇಶಕರಾದ ಶ್ರೀನಿವಾಸ್‌ ಎಸ್‌. ಹೆಬ್ಬಾರ್‌ ಅವರು ಈ ಜನೋಪಯೋಗಿ ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.

೫ ಸಾವಿರ ಮಂದಿಗೆ ಅಡುಗೆ ವ್ಯವಸ್ಥೆ
ಕಾರ್ಯಕ್ರಮಕ್ಕೆ ಭವ್ಯವಾದ ವೇದಿಕೆ ಸಿದ್ಧವಾಗಿದ್ದು, ಎರಡು ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. ಸ್ವತಃ ಗ್ರಾಮಸ್ಥರೇ ಐದು ಸಾವಿರ ಮಂದಿಗೆ ಅಡುಗೆ ವ್ಯವಸ್ಥೆ ಮಾಡಿದ್ದಾರೆ. ತಾಲೂಕಿನಲ್ಲಿ ಹೋಬಳಿ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕುಪ್ಪಗಡ್ಡೆ ಗ್ರಾಮದಲ್ಲಿ ಇದೀಗ ಹಬ್ಬದ ವಾತಾವರಣ ಮೂಡಿದೆ.

ಏನಿದು ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ?
ಇದು ಸರ್ಕಾರಿ ಶಾಲೆಗಳ ಸುಧಾರಣೆಗೆ ವಿಸ್ತಾರ ನ್ಯೂಸ್‌ ಆರಂಭ ಮಾಡಿರುವ ಬಹುದೊಡ್ಡ ಅಭಿಯಾನ. ಶಿಕ್ಷಣದ ಮಹತ್ವವನ್ನು ಅರಿತಿರುವ ವಿಸ್ತಾರ ನ್ಯೂಸ್‌, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು ಎಂಬ ಹಂಬಲದಿಂದ ಬಾಲ ಉತ್ಸವ ಎಂಬ ಎನ್‌ಜಿಒ ಜತೆಗೂಡಿ ಈ ಅಭಿಯಾನ ರೂಪಿಸಿದೆ.

ಇದನ್ನೂ ಓದಿ | Grama vastavya | ದಲಿತರ ಮನೆಯಲ್ಲಿ ಉಪಾಹಾರ ಸೇವಿಸಿದ ಸಚಿವ ಅಶೋಕ್;‌ ಮಕ್ಕಳೊಂದಿಗೆ ಗಿಡ ನೆಟ್ಟರು, ಗ್ರಾಮ ಸಭೆ ನಡೆಸಿದರು

ಸರ್ಕಾರಿ ಶಾಲೆಗಳೆಂದರೆ ಸಾರ್ವಜನಿಕರ ಶಾಲೆಗಳು. ಇವುಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದು ನಮ್ಮ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ರಾಜ್ಯದಲ್ಲಿನ ಪ್ರತಿ ಸರ್ಕಾರಿ ಶಾಲೆಯೂ ಅತ್ಯುತ್ತಮ ಶಿಕ್ಷಣ ಒದಗಿಸುವ ಶಾಲೆಯಾಗಬೇಕು. ಪ್ರತಿ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ಲಭ್ಯವಾಗಬೇಕು ಎಂಬುದು ನಮ್ಮ ಉದ್ದೇಶ. ಹಾಗಾಗಿ ಶಾಲೆ ದತ್ತು ಪಡೆಯುವುದೂ ಸೇರಿದಂತೆ ಸರ್ಕಾರದ ಜತೆ ಸಮಾಜವನ್ನು ಬೆಸೆಯುವ ಈ ಮಹತ್ಕಾರ್ಯವನ್ನು ದಾನಿಗಳ ನೆರವಿನೊಂದಿಗೆ ಮಾಡಲಾಗುತ್ತಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಪ್ಪಗಡ್ಡೆ
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಕುಪ್ಪಗಡ್ಡೆ ಗ್ರಾಮವು ʼಪುಷ್ಪಗಡ್ಡೆʼ ಎಂಬ ಪೌರಾಣಿಕ ಹೆಸರನ್ನು ಹೊಂದಿದೆ. ಈ ಗ್ರಾಮ 650ಕ್ಕಿಂತ ಹೆಚ್ಚು ಕುಟುಂಬಗಳನ್ನು ಹೊಂದಿದ್ದು, ಐತಿಹಾಸಿಕ ಪ್ರಸಿದ್ಧ ಶ್ರೀ ರಾಮೇಶ್ವರ ದೇವಾಲಯದಿಂದ ಪ್ರಖ್ಯಾತಿ ಪಡೆದಿದೆ. ಬಸವೇಶ್ವರ ಹಾಗೂ ಮಾರಿಕಾಂಬ ಗ್ರಾಮ ದೇವತೆಗಳ ದೇವಾಲಯಗಳು ಇದ್ದು, ಸುತ್ತಮುತ್ತಲಿನ ಗ್ರಾಮಗಳ ಸಾಕಷ್ಟು ಭಕ್ತರನ್ನು ಹೊಂದಿದೆ.

ಈ ಗ್ರಾಮದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1939-40ರಲ್ಲಿ ಚಿಕ್ಕ ದೇವಸ್ಥಾನವೊಂದರಲ್ಲಿ ಶಾಲೆ ಪ್ರಾರಂಭವಾಯಿತು. ನಂತರ ಅನೇಕ ಏಳು-ಬೀಳುಗಳನ್ನು ಕಂಡ ಈ ಶಾಲೆಯು ಈಗ ವ್ಯವಸ್ಥಿತ ಕಟ್ಟಡ ಹೊಂದಿದೆ. ಇದು ತಾಲೂಕಿನ ಮಾದರಿ ಶಾಲೆಯಾಗಿದೆ. 2.04 ಎಕರೆ ವಿಸ್ತೀರ್ಣದ ಜಾಗವನ್ನು ಹೊಂದಿದೆ.

ಕುಪ್ಪಗಡ್ಡೆ ಗ್ರಾಮ ಪಂಚಾಯಿತಿಯ ಏಕೈಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದಾಗಿದ್ದು, ಸುತ್ತಮುತ್ತಲ ಗ್ರಾಮದ ನೂರಾರು ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಈ ಶಾಲೆಗೆ ಬರುತ್ತಾರೆ. ಕ್ಲಸ್ಟರ್‌ ಕೇಂದ್ರವನ್ನೂ ಈ ಶಾಲೆ ಹೊಂದಿರುತ್ತದೆ. ಶಾಲೆಯಲ್ಲಿ ಮುಖ್ಯ ಶಿಕ್ಷಕರು ಸೇರಿದಂತೆ 8 ಹುದ್ದೆಗಳ ಮಂಜೂರಾತಿ ಇದ್ದು, 7 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ 1ರಿಂದ 8ನೇ ತರಗತಿಯವರೆಗೆ ಕನ್ನಡ ಮಾಧ್ಯಮ ಹಾಗೂ 1ರಿಂದ 3ನೇ ತರಗತಿಯವರೆಗೆ ಇಂಗ್ಲೀಷ್ ಮಾಧ್ಯಮದ ಒಟ್ಟು 11 ತರಗತಿಗಳಿವೆ. 217 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯು ಪ್ರತಿವರ್ಷ ಕ್ರೀಡೆ ಹಾಗೂ ಇತರೆ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ತೋರುತಿದ್ದು, ಕಳೆದ ಸಾಲಿನಲ್ಲಿ ಈ ಶಾಲೆಯ ವಿದ್ಯಾರ್ಥಿ ವಿಜ್ಞಾನ ಮಾದರಿ ತಯಾರಿಕೆಯಲ್ಲಿ ರಾಜ್ಯಮಟ್ಟದ ಯಂಗ್‌ ಸೈನ್ಸ್‌ ಮಾಡೆಲ್ ಇನ್ಪೈಯರ್‌ ಅವಾರ್ಡ್ ಪಡೆದಿದ್ದಾನೆ. ಈ ವರ್ಷದಲ್ಲೇ ಅಥ್ಲೆಟಿಕ್ಸ್ ವಿಭಾಗ ಕ್ರೀಡಾಕೂಟದಲ್ಲಿ ಇಬ್ಬರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಇದನ್ನೂ ಓದಿ | ಎಲೆಕ್ಷನ್‌ ಹವಾ | ಜಗಳೂರು | ಬಿಜೆಪಿಯ ರಾಮಚಂದ್ರಪ್ಪ ವಿರುದ್ಧ ಜಗಳಕ್ಕೆ ಯಾರು ನಿಲ್ಲುತ್ತಾರೆ ಎನ್ನುವುದೇ ಅಸ್ಪಷ್ಟ

ಇಷ್ಟೆಲ್ಲ ಸಾಧನೆಯ ನಡುವೆಯೂ ಶಾಲೆಯು ಅನೇಕ ಸಮಸ್ಯೆಗಳನ್ನು ಹೊಂದಿದೆ. ಹಳೆ ವಿದ್ಯಾರ್ಥಿಗಳು, ಎಸ್.ಡಿ.ಎಮ್.ಸಿ., ಸ್ಥಳೀಯ ಗ್ರಾಮ ಪಂಚಾಯಿತಿ, ಜನಪ್ರತಿನಿಧಿಗಳ ಸಹಕಾರದಿಂದ ಸಮಸ್ಯೆ ಪರಿಹರಿಸಿಕೊಳ್ಳಲು ಪ್ರಯತ್ನಿಸಿದೆ. ಮುಖ್ಯವಾಗಿ ಉತ್ತಮ ಕೊಠಡಿಗಳ ಕೊರತೆ ಹೊಂದಿದ್ದ ಈ ಶಾಲೆಯ ವಿದ್ಯಾರ್ಥಿ ಪ್ರಸ್ತುತ ಕುಡುಚಿ ಶಾಸಕರು, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆದ ಪಿ. ರಾಜೀವ್ ಅವರ ವೈಯಕ್ತಿಕ ಕಾಳಜಿಯಿಂದ ಸುಸಜ್ಜಿತ 9 ಕೊಠಡಿಗಳು ನಿರ್ಮಾಣವಾಗಿವೆ. ಹೆಚ್ಚುವರಿ 4 ಕೊಠಡಿಗಳ ನಿರ್ಮಾಣಕ್ಕೂ ಅವರು ಅನುಮತಿ ಕೊಡಿಸಿದ್ದಾರೆ. ಹೊಸ ಕಟ್ಟಡವು 17-06-2022ರಂದು ಸೊರಬದ ಶಾಸಕರಾದ ಕುಮಾರ್‌ ಬಂಗಾರಪ್ಪ ಅವರಿಂದ ಉದ್ಘಾಟನೆಗೊಂಡಿದೆ.

ಇದರ ನಡುವೆಯೂ ಶಾಲೆ ಅನೇಕ ಸಮಸ್ಯೆಗಳನ್ನು ಹೊಂದಿದೆ. ಶಾಲಾ ಆವರಣದ ಸುತ್ತ 300 ಅಡಿಗಳ ಭಾಗಶಃ ಕಾಂಪೌಂಡ್ ಇದ್ದು, ಇನ್ನೂ 800 ಅಡಿಗಳ ಕಾಂಪೌಂಡ್ ನಿರ್ಮಾಣದ ಅಗತ್ಯವಿದೆ.

ಹೊಸ ಕಟ್ಟಡಕ್ಕೆ ಹೊಂದಿಕೊಂಡಂತೆ ಸುಸಜ್ಜಿತ ಅಡುಗೆ ಕೋಣೆ, ದಾಸ್ತಾನು ಕೊಠಡಿ ಹಾಗೂ ಶುದ್ಧ ಕುಡಿಯುವ ನೀರನ್ನು ಒಳಗೊಂಡ ವ್ಯವಸ್ಥಿತ ಭೋಜನಾಲಯದ ಅವಶ್ಯಕತೆ ಇದೆ. ಮಕ್ಕಳ ಹೆಚ್ಚಿನ ಓದಿಗೆ ಪ್ರತ್ಯೇಕ ಗ್ರಂಥಾಲಯ ಕೊಠಡಿ, ತಂತ್ರಜ್ಞಾನ ಕಲಿಕೆಗೆ ಸ್ಮಾರ್ಟ್‌ ಕ್ಲಾಸ್‌ ಹಾಗೂ ಪ್ರತ್ಯೇಕ ವಿಜ್ಞಾನ ಪ್ರಯೋಗಾಲಯದ ಕೊಠಡಿ ಬೇಕಾಗಿದೆ.
ಇಂಗ್ಲೀಷ್ ಮಾಧ್ಯಮದ ತರಗತಿಗಳ ಬೋಧನೆಗೆ ಪ್ರತ್ಯೇಕ ಶಿಕ್ಷಕರ ಅಗತ್ಯ ಇದೆ. ಶಾಲಾ ಆವರಣದಲ್ಲಿ ಕೈತೋಟ ನಿರ್ಮಾಣ, ಎಲ್ಲಾ ಮಕ್ಕಳಿಗೂ ಹೈಟೆಕ್ ಶೌಚಾಲಯ ನಿರ್ಮಾಣ ಹಾಗೂ ಪ್ರತ್ಯೇಕ ಕೊಳವೆಬಾವಿ ಅವಶ್ಯಕತೆ ಇದೆ. ಮಕ್ಕಳು ಆಟ ಆಡಲು ವಿಶಾಲ ಆಟದ ಮೈದಾನ, ಶಾಲಾ ದಾಖಲಾತಿ ನಿರ್ವಹಣೆಗೆ ಪ್ರತ್ಯೇಕ ಗುಮಾಸ್ತರ ಅವಶ್ಯಕತೆ ಇರುತ್ತದೆ.

ಈ ಎಲ್ಲ ಅಗತ್ಯತೆಗಳ ಪೂರೈಕೆಗಾಗಿ ಎಸ್.ಡಿ.ಎಂ.ಸಿ, ಹಳೆಯ ವಿದ್ಯಾರ್ಥಿಗಳು, ಸ್ಥಳೀಯ ಗ್ರಾಮ ಪಂಚಾಯಿತಿ, ಊರ ಗ್ರಾಮಸ್ಥರು ಹಾಗೂ ಸರ್ಕಾರದ ಎಲ್ಲ ಜನಪ್ರತಿನಿಧಿಗಳ ನೆರವನ್ನು ಶಾಲೆ ನಿರೀಕ್ಷಿಸಿದೆ.

ಇದನ್ನೂ ಓದಿ | Border Dispute | ಎಂಇಎಸ್‌ ಪುಂಡರನ್ನು ಹದ್ದುಬಸ್ತಿನಲ್ಲಿ ಇಡುವುದು ನಮಗೆ ಗೊತ್ತಿದೆ: ಸಿಎಂ ಬೊಮ್ಮಾಯಿ

Exit mobile version