Site icon Vistara News

Nandini Milk Price Hike : ಕೈಗೆ ಸಿಗದ ನಂದಿನಿ ಹಾಲು; ಪರಿಷ್ಕೃತ ದರ ಎಷ್ಟು?

Nandini milk price hike

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಉಚಿತ ಕೊಡುಗೆಗಳು ಸಿಕ್ಕ ಖುಷಿಯಲ್ಲಿದ್ದ ಜನತೆಗೆ ಈಗ ಅಗತ್ಯ ವಸ್ತುಗಳ ಬೆಲೆ ಏರಿಕೆಯು ತಲೆ ಬಿಸಿ ಆಗಿದೆ. ಕುಡಿಯುವ ಹಾಲಿನಿಂದ (Nandini Milk Price Hike) ಹಿಡಿದು ತಿನ್ನುವ ತರಕಾರಿವರೆಗೆ ರೇಟು ಏರಿಕೆ ಆಗಿದೆ. ಬಡವರು, ಮಧ್ಯಮ ವರ್ಗದವರಿಗೆ ಅಂತೂ ದರ ಏರಿಕೆಯು ಬಿಸಿ ತುಪ್ಪದಂತಾಗಿದೆ. ದರ ಏರಿಕೆ ಬಿಸಿಯಿಂದಾಗಿ ನುಂಗುವಂತಿಲ್ಲ, ಉಗುಳುವಂತಿಲ್ಲ ಎಂಬಂತಾಗಿದೆ. ಸದ್ಯ ಇಂದಿನಿಂದ ನಂದಿನಿ ಹಾಲಿನ ಪರಿಷ್ಕೃತ ದರ ಏರಿಕೆ ಆಗಿದೆ. ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಒಂದು ಕಡೆ ಉಚಿತ ವಿದ್ಯುತ್, ಮನೆ ಯಜಮಾನಿಗೆ 2000 ರೂ, ಬಸ್‌ಲ್ಲಿ ಉಚಿತ ಪ್ರಯಾಣದಿಂದ ಖಜಾನೆಯಲ್ಲಿ ಒಂದಷ್ಟು ಉಳಿತಾಯ ಆಯಿತಪ್ಪಾ ಎಂದು ಅದೆಷ್ಟು ಮಂದಿ ನಿಟ್ಟುಸಿರು ಬಿಟ್ಟಿದ್ದರು. ಆದರೆ ಈಗ ನಂದಿನಿ ಪ್ರಾಡೆಕ್ಟ್‌ಗಳು ಏರಿಕೆ ಆಗಿವೆ. ನಂದಿನಿ ಹಾಲು, ಮೊಸರಿನ ಪರಿಷ್ಕೃತ ದರ ಜಾರಿಗೆ ಆಗಿದೆ.

ಯಾವ್ಯಾವ ಹಾಲಿನ ದರ ಎಷ್ಟಿದೆ?

ಸಮೃದ್ದಿ ಹಾಲು: ಹಿಂದಿನ ದರ ₹48 – ಇಂದಿನ ದರ ₹51
ಸ್ಪೆಷಲ್ ಹಾಲು: ಹಿಂದಿನ ದರ ₹43 – ಇಂದಿನ ದರ ₹46
ಸಂತೃಪ್ತಿ ಹಾಲು: ಹಿಂದಿನ ದರ ₹50 – ಇಂದಿನ ದರ ₹53
ಶುಭಂ ಹಾಲು: ಹಿಂದಿನ ದರ ₹43 – ಇಂದಿನ ದರ ₹46
ಟೋನ್ಡ್ ಹಾಲು: ಹಿಂದಿನ ದರ ₹37 – ಇಂದಿನ ದರ ₹40
ಡಬಲ್‌ ಟೋನ್ಡ್‌ ಹಾಲು: ಹಿಂದಿನ ದರ ₹36 – ಇಂದಿನ ದರ ₹39
ಹೊಮೋಜಿನೈಸ್ಡ್: ಹಿಂದಿನ ದರ ₹38 – ಇಂದಿನ ದರ ₹41

ನಂದಿನಿ ಬೂತ್‌ಗಳಲ್ಲಿ ಹಾಲಿನ ಕೊರತೆ

ಇಂದಿನಿಂದ (ಆ.1) ನಂದಿನಿ ಹಾಲಿನ ಪರಿಷ್ಕೃತ ದರವು ಜಾರಿ ಆಗಿದೆ. ಇತ್ತ ನಂದಿನಿ ಬೂತ್‌ಗಳಲ್ಲಿ ಹಾಲಿನ ಕೊರತೆ ಉಂಟಾಗಿದೆ. ಕಾರಣ ಹೊಸ ದರ ಮುದ್ರಿಸಿ ಪ್ಯಾಕೇಟ್ ಕಳುಹಿಸಬೇಕಿರುವ ಕಾರಣದಿಂದಾಗಿ ಸದ್ಯ ಬೆಳಗಿನ ಜಾವ ಬಂದಿರುವ ಹಾಲು ಮಾತ್ರ ಮಾರಾಟ ಮಾಡಲಾಗುತ್ತಿದೆ.

ಮಧ್ಯಾಹ್ನ 12 ಗಂಟೆ ವೇಳೆಗೆ ಪರಿಷ್ಕೃತ ದರ ಇರುವ ಹಾಲಿನ ಪ್ಯಾಕೇಟ್ ಬರುವ ಸಾಧ್ಯತೆ ಇದೆ. ಹಾಲಿನ ದರ ಹೆಚ್ಚಳದ ಬಗ್ಗೆ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ. ಪ್ರತಿದಿನ ಬೇಕಿರುವ ವಸ್ತುವಿನ ದರ ಹೆಚ್ಚಾದರೆ ಏನು ಮಾಡೋಣ ಎಂದು ಪ್ರಶ್ನೆ ಮಾಡಿದ್ದಾರೆ. ಸರ್ಕಾರವೇನೊ ದರ ಹೆಚ್ಚಳ ಮಾಡಿದೆ ಆದರೆ ಖರೀದಿ ಮಾಡುವುದು ಅನಿವಾರ್ಯ ಎನ್ನುತ್ತಿದ್ದಾರೆ.

ನಂದಿನಿ ಬೂತ್ ವ್ಯಾಪಾರಿಗಳ ಆತಂಕ

ರಾಜ್ಯದಲ್ಲಿ ಇಷ್ಟು ದಿನ ನಂದಿನಿ ಹಾಲಿನ ದರವು ಬೇರೆ ಬ್ರ್ಯಾಂಡ್‌ಗಳಿಗಿಂತ ಕಡಿಮೆ ದರದಲ್ಲಿ ಇತ್ತು. ಇದೀಗ ನಂದಿನಿ ಹಾಲಿನ ದರವು ಏರಿಕೆ ಆಗಿರುವುದರಿಂದ ಬೇರೆ ಬ್ರ್ಯಾಂಡ್‌ನ ಹಾಲಿನ ದರವು ಕಡಿಮೆ ಇದೆ. ಗ್ರಾಹಕರು ಕಡಿಮೆ ದರ ಇರುವ ಬೇರೆ ಬ್ರ್ಯಾಂಡ್ ಕಡೆಗೆ ಮುಖ ಮಾಡಬಹುದು ಎಂದು ಬೂತ್‌ ವ್ಯಾಪಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ನಂದಿನಿ ಹಾಲು ನಮ್ಮ ಹೆಮ್ಮೆ, ದರ ಹೆಚ್ಚಾದರೂ ಜನರ ಮೆಚ್ಚುಗೆಯ ಬ್ರ್ಯಾಂಡ್ ಆಗಿದೆ ಎನ್ನುತ್ತಿದ್ದಾರೆ.

ಹೋಟೆಲ್ ಗ್ರಾಹಕರಿಗೆ ಶಾಕ್

ಹಾಲಿನಿಂದ ಹಿಡಿದು ತರಕಾರಿ ದರವು ಏರಿಕೆ ಆಗುತ್ತಿರುವುದರಿಂದ ಹೋಟೆಲ್‌ ಉದ್ಯಮದವರು ಅನಿರ್ವಾಯ ಕಾರಣದಿಂದಾಗಿ ತಿಂಡಿ ತಿನಿಸುಗಳ ಬೆಲೆ ಏರಿಕೆ ಮಾಡುವಂತಾಗಿದೆ. ನಗರದಲ್ಲಿ ಈಗಾಗಲೇ ಹಲವು ಹೋಟೆಲ್‌ ಮಾಲೀಕರು ದರ ಏರಿಕೆ ಮಾಡಿದ್ದಾರೆ. ಕಾಫಿ-ಟೀಗೆ 3 ರೂಪಾಯಿ ಹೆಚ್ಚಳ, ತಿಂಡಿ‌-ತಿನಿಸು ‌‌‌5-10 ರೂ. ಏರಿಕೆ, ಊಟದ ದರ 10 ರೂ. ಏರಿಕೆ ಆಗುವ ಸಾಧ್ಯತೆ ಇದೆ.

ಯಾವೆಲ್ಲಾ ತರಕಾರಿ ಬೆಲೆ ಏರಿಕೆ?

ತರಕಾರಿ- ಹಿಂದಿನ ದರ – ಈಗೀನ ದರ
ಟೊಮ್ಯಾಟೊ: ಹಿಂದಿನ ದರ ₹110 – ಇಂದಿನ ದರ ₹120
ಮೆಣಸಿನಕಾಯಿ: ಹಿಂದಿನ ದರ ₹60 – ಇಂದಿನ ದರ ₹120
ಶುಂಠಿ: ಹಿಂದಿನ ದರ ₹160 – ಇಂದಿನ ದರ ₹300
ಬೆಳ್ಳುಳ್ಳಿ: ಹಿಂದಿನ ದರ ₹100 – ಇಂದಿನ ದರ ₹200
ಹುರುಳಿಕಾಯಿ: ಹಿಂದಿನ ದರ ₹80 – ಇಂದಿನ ದರ ₹100
ಕ್ಯಾರೆಟ್: ಇಂದಿನ ₹60
ಬೀಟ್ ರೋಟ್: ಇಂದಿನ ದರ ₹30
ಮೂಲಂಗಿ: ಇಂದಿನ ದರ ₹20
ಗುಂಡು‌ ಬದನೆಕಾಯಿ: ಇಂದಿನ ದರ ₹60
ಕ್ಯಾಪ್ಸಿಕಾಮ್: ಇಂದಿನ ದರ ₹60
ಹೀರೇಕಾಯಿ: ಇಂದಿನ ದರ ₹80
ಬೆಂಡೆಕಾಯಿ: ಇಂದಿನ ದರ ₹60

Exit mobile version