ಬೆಂಗಳೂರು: ಹೊಸವರ್ಷ, ಕ್ರಿಸ್‌ಮಸ್ ಮತ್ತು ಸಂಕ್ರಾಂತಿ ಹಬ್ಬಗಳ ಪ್ರಯುಕ್ತ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ವತಿಯಿಂದ ಒಂದು ತಿಂಗಳ ಕಾಲ (ಡಿ.೧೯ರಿಂದ) ರಾಜ್ಯಾದ್ಯಂತ ʼನಂದಿನಿ ಸಿಹಿ ಉತ್ಸವʼ ಆಯೋಜಿಸಲಾಗಿದೆ. ಈ ಉತ್ಸವಕ್ಕೆ (Nandini Sihi Utsava) ನಗರದ ನಂದಿನಿ ಪಾರ್ಲರ್‌ನಲ್ಲಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಪಿ.ಸತೀಶ್ ಅವರು ಸೋಮವಾರ ಸಾಂಕೇತಿಕವಾಗಿ ಚಾಲನೆ ನೀಡಿ, ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕೋರಿದರು.
ನಂದಿನಿ ಸಿಹಿ ಉತ್ಪನ್ನಗಳ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸುವ ಸಲುವಾಗಿ ಕಳೆದ 5 ವರ್ಷಗಳಿಂದ ಕರ್ನಾಟಕ ಹಾಲು ಮಹಾಮಂಡಳವು (ಕೆಎಂಎಫ್) ʼನಂದಿನಿ ಸಿಹಿ ಉತ್ಸವʼ ಆಯೋಜಿಸುತ್ತಾ ಬಂದಿದೆ. ಸಿಹಿ ಉತ್ಪನ್ನಗಳ ದರದ ಮೇಲೆ ಸಾಕಷ್ಟು ರಿಯಾಯಿತಿ ನೀಡಲಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕೆಎಂಎಫ್ ತಿಳಿಸಿದೆ.
ಇದನ್ನೂ ಓದಿ | DK Shivakumar | ಡಿಕೆಶಿ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿಗೆ ಖರ್ಗೆ ಆಕ್ರೋಶ: ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪ
ಈ ಬಾರಿಯೂ ಒಂದು ತಿಂಗಳ ಕಾಲ ನಂದಿನಿ ಸಿಹಿ ಉತ್ಸವವನ್ನು ರಾಜ್ಯದಾದ್ಯಂತ ಆಚರಿಸಲಾಗುತ್ತಿದ್ದು, ಎಲ್ಲಾ ನಂದಿನಿ ಉತ್ಪನ್ನಗಳಾದ ಮೈಸೂರ್‌ಪಾಕ್, ಪೇಡ, ಧಾರವಾಡ ಪೇಡ, ಕೇಸರ್ ಪೇಡ, ಏಲಕ್ಕಿ ಪೇಡ, ಬಾದಾಮ್, ಕ್ಯಾಶು, ಡ್ರೈ ಫ್ರೂಟ್ಸ್, ಕೋಕೋನಟ್, ಚಾಕೊಲೇಟ್ ಬರ್ಫಿಗಳು, ಸಿರಿಧಾನ್ಯ ಲಾಡು, ಸಿರಿಧಾನ್ಯ ಹಾಲಿನ ಪುಡಿ, ಚಕ್ಕಿ ಲಾಡು, ಕುಕೀಸ್, ಕುಂದ, ಜಾಮೂನ್, ರಸಗುಲ್ಲಾ ಹಾಗೂ ಇನ್ನಿತರ ಸಿಹಿ ಉತ್ಪನ್ನಗಳ ಮಾರಾಟ ದರದ ಮೇಲೆ ಪ್ರಪ್ರಥಮವಾಗಿ ಶೇ. 20 ರಷ್ಟು ರಿಯಾಯಿತಿಯನ್ನು ನೇರವಾಗಿ ಗ್ರಾಹಕರಿಗೆ ನೀಡಲಾಗುತ್ತಿದೆ ಎಂದು ಕರ್ನಾಟಕ ಹಾಲು ಮಹಾಮಂಡಳ ಹೇಳಿದೆ.
ಈ ಬಾರಿ ಗ್ರಾಹಕರ ಅಭಿರುಚಿಯನ್ನು ಪರಿಗಣಿಸಿ ಹೊಸದಾಗಿ ಬೋವಾ ಬಾದಮ್ ರೋಲ್, ಖೋವಾ ಚಾಕೋನಟ್ಟಿ ರೋಲ್, ಗೋಡಂಬಿ ರೋಲ್, ಬೆಲ್ಲದ ಬರ್ಫಿ, ಕಲಾಕಂದ್, ಬೋವಾ ಲಾಡು, ಕರದಂಟು, ಅಕ್ಕಿ ಪಾಯಸ ಮಿಶ್ರಣ, ಗುಡ್‌ಲೈಫ್ ಚಾಕೋಲೇಟ್ ಗಿಫ್ಟ್ ಬಾಕ್ಸ್ ಇತ್ಯಾದಿ ಅನೇಕ ಸಿಹಿ ಉತ್ಪನ್ನಗಳ ಸೇರ್ಪಡೆ ಮಾಡಿದ್ದು, ಈ ನೂತನ ಉತ್ಪನ್ನಗಳಿಗೂ ಶೇ. 20 ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ | Rescue Operation | ಕಿಡ್ನ್ಯಾಪ್ ಆಗಿದ್ದ 12 ಗಂಟೆಯೊಳಗೆ ಬಾಲಕನ ರಕ್ಷಿಸಿದ ರೈಲ್ವೆ ಪೊಲೀಸರು