ಯಲ್ಲಾಪುರ: ಮಕ್ಕಳು ಮತ್ತು ಯುವ ಜನರು ದೊಡ್ಡ ಪ್ರಮಾಣದಲ್ಲಿ ಮಾನಸಿಕ ಒತ್ತಡ ಎದುರಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿ. ಹೀಗಾಗಿ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಮಾನಸಿಕ ಒತ್ತಡಗಳನ್ನು ನಿಯಂತ್ರಿಸುವ ಶಿಕ್ಷಣವನ್ನು (Nandolli School) ನೀಡುವ ಅಗತ್ಯ ಇದೆ ಎಂದು ಸ್ವರ್ಣವಲ್ಲೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ತಾಲೂಕಿನ ನಂದೊಳ್ಳಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ (ಜ.೨೯) ನಡೆದ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಆತ್ಮಹತ್ಯೆಯ ಸಂಖ್ಯೆ ಹೆಚ್ಚುತ್ತಿದೆ. ಪಾಲಕರು ಮಕ್ಕಳ ಮೇಲೆ ಒತ್ತಡ ಹಾಕುವುದನ್ನು ನಿಲ್ಲಿಸಿ, ಪ್ರೇರಣೆ ನೀಡುವ ಕಾರ್ಯ ಮಾಡಬೇಕು. ಮಕ್ಕಳ ಭೌತಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರನ್ನು ಪ್ರೋತ್ಸಾಹಿಸಬೇಕು. ಇದರಿಂದ ಒಂದು ಮಟ್ಟಕ್ಕೆ ಯುವ ಜನರ ಆತ್ಮಹತ್ಯೆ ಹಾಗೂ ಹೃದಯಾಘಾತದ ಪ್ರಕರಣಗಳನ್ನು ನಿಯಂತ್ರಿಸಬಹುದು ಎಂದು ಹೇಳಿದರು.
ಮಕ್ಕಳಿಗೆ ನೈತಿಕ ಶಿಕ್ಷಣವನ್ನು ಒದಗಿಸುವಲ್ಲಿ ಶಿಕ್ಷಕರ ಹಾಗೂ ಪಾಲಕರ ಪಾತ್ರ ಹೆಚ್ಚಿನದ್ದು. ಮಕ್ಕಳನ್ನು ಬಹಳ ನಾಜೂಕಿನಿಂದ ಬೆಳೆಸಬೇಕು. ಪ್ರೌಢಶಾಲಾ ಹಂತದಲ್ಲಿ ಮಕ್ಕಳಿಗೆ ಯೋಗ ಶಿಕ್ಷಣ ನೀಡುವುದು ಮಕ್ಕಳಿಗೆ ಒತ್ತಡದ ಜೀವನ ನಿಭಾಯಿಸಲು ಒಂದು ದಾರಿಯಾಗುತ್ತದೆ. ಈಗಿನ ಮಕ್ಕಳಲ್ಲಿ ಪುಸ್ತಕಗಳನ್ನು ಓದುವ, ಹೊರಾಂಗಣ ಆಟಗಳನ್ನು ಆಡುವ ಉತ್ಸುಕತೆ ಕಡಿಮೆಯಾಗುತ್ತಿದೆ. ಅವುಗಳನ್ನು ಮತ್ತೆ ಹುಟ್ಟಿಸಿ, ಅವರ ಸರ್ವತೋಮುಖ ಬೆಳವಣಿಗೆಗಾಗಿ ಶಿಕ್ಷಕರು ಹಾಗೂ ಪಾಲಕರು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಪಂಚಾಯತ್ ರಾಜ್ ವಿಕೇಂದ್ರೀಕರಣ ಸಮಿತಿಯ ಉಪಾಧ್ಯಕ್ಷ ಪ್ರಮೋದ್ ಹೆಗಡೆ ಮಾತನಾಡಿ, ನೂರು ವರ್ಷಗಳ ಹಿಂದೆ ನಂದೊಳ್ಳಿ ಹೇಗಿತ್ತು ಎಂಬುದನ್ನು ಊಹಿಸಿಕೊಳ್ಳಲೂ ಆಗದಂತಹ ಕಾಲದಲ್ಲಿ ಒಂದು ವಿದ್ಯಾ ದೇಗುಲವನ್ನು ಆರಂಭಿಸಿದ ಹಿರಿಯ ಕಾರ್ಯ ಮಹತ್ತರವಾದದ್ದು. ಶತಮಾನದ ಸಂಸ್ಕಾರಯುತ ಶಿಕ್ಷಣಕ್ಕೆ ಸಾಕ್ಷಿಯಾಗಿ ಈ ಶಾಲೆ ಬೆಳೆದು ಬಂದಿದೆ. ಸಾವಿರಾರು ಜನರಿಗೆ ವಿದ್ಯಾರ್ಜನೆ ನೀಡುವ ಶಾಲೆಯ ಒಂದು ಕೋಣೆ ದೇಶವನ್ನು ಕಟ್ಟುವಂತಹ ಕಾರ್ಯ ಸ್ಥಾನವಾಗಿದೆ. ಉತ್ತಮ ಶಿಕ್ಷಕ ಹಾಗೂ ಶಿಕ್ಷಣ ದೇಶದ ಏಳಿಗೆಗೆ ಮಹತ್ತರವಾದ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಇದನ್ನೂ ಓದಿ | Mahatma Gandhi : ಇಂದು ಗಾಂಧೀಜಿ ಪುಣ್ಯ ತಿಥಿ: ಮಹಾತ್ಮರು ಹೇಳಿದ ಅದ್ಭುತ ನುಡಿಮುತ್ತುಗಳಿವು
ಆಶಯ ನುಡಿಗಳನ್ನಾಡಿದ ವಿಸ್ತಾರ ಮೀಡಿಯಾದ ಪ್ರಧಾನ ಸಂಪಾದಕ ಹಾಗೂ ಸಿ.ಇ.ಒ ಹರಿಪ್ರಕಾಶ ಕೋಣೆಮನೆ ಮಾತನಾಡಿ, “ನೂರು ವರ್ಷಗಳನ್ನು ಪೂರೈಸಿರುವಂತಹ ನನ್ನ ಶಾಲೆಯು ಇನ್ನೂ ನೂರಾರು ವರ್ಷಗಳ ಕಾಲ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ಕೇಂದ್ರವಾಗಿ ಮುನ್ನಡೆಯಲಿ ಎಂಬುದು ನನ್ನ ಆಶಯವಾಗಿದೆ. ಹಿಂದಿನ ನಂದೊಳ್ಳಿ ಶಾಲೆಗೆ ಹೋಲಿಸಿದಾಗ, ಇಂದಿನ ಶಾಲೆಯ ಪರಿಸರ ಅತ್ಯುತ್ತಮವಾಗಿ ಬೆಳವಣಿಗೆ ಹೊಂದಿದೆ.
ಗ್ರಾಮೀಣ ಭಾಗದ ಪಾಲಕರಿಗೂ ತಮ್ಮ ಮಕ್ಕಳು ಖಾಸಗಿ ಶಾಲೆಯಲ್ಲಿ ಕಲಿಯಬೇಕು ಎಂಬ ಬಯಕೆ ಇರುತ್ತದೆ. ಆದರೆ ಅಂತಹ ಎಲ್ಲಾ ಶಾಲೆಗಳು ಗುಣಾತ್ಮಕ ಶಿಕ್ಷಣವನ್ನು ಕಲಿಸುತ್ತಿದೆಯೇ ಎಂಬುದನ್ನು ಪಾಲಕರು ಆಲೋಚಿಸಬೇಕಿದೆ. ಮುಂದಿನ ದಿನಗಳಲ್ಲಿ ನಗರದ ಜನ ಮತ್ತೆ ಗ್ರಾಮಗಳತ್ತ ಹಿಂದಿರುಗುವ ಕಾಲ ಸನ್ನಿಹಿತವಾಗುತ್ತಿದೆ. ಎಲ್ಲರೂ ಮತ್ತೆ ಗುಣಮಟ್ಟದ ಶಿಕ್ಷಣ, ಸಂಸ್ಕಾರಯುತ ಜೀವನ ಶೈಲಿಯನ್ನು ಅರಸಿ ಬರುತ್ತಿದ್ದಾರೆ. ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿದಲ್ಲಿ ನಮ್ಮ ಸರ್ಕಾರಿ ಶಾಲೆಗಳು ಸಹ ಜಗತ್ತಿನ ಯಾವುದೇ ಶಿಕ್ಷಣವನ್ನು ಕಲಿಸಬಲ್ಲದು. ಇದಕ್ಕಾಗಿ ನಮ್ಮ ವಿಸ್ತಾರ ಮೀಡಿಯಾದ ವತಿಯಿಂದ ಸರ್ಕಾರಿ ಶಾಲೆಗಳ ದತ್ತು ಪಡೆದುಕೊಳ್ಳುವ ಕಾರ್ಯ ರೂಪಿಸಿದ್ದು, ಆ ಮೂಲಕ ಶಾಲೆಗಳನ್ನು ದಾನಿಗಳ ಮೂಲಕ ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತಿದ್ದೇವೆ. ಇಂದಿನ ಈ ಶುಭ ಸಂದರ್ಭದಲ್ಲಿ ನಂದೊಳ್ಳಿ ಶಾಲೆಯನ್ನು ನಾನು ದತ್ತು ಪಡೆಯುವುದಾಗಿ ಸಂತಸದಿಂದ ಹೇಳುತ್ತೇನೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಂದೊಳ್ಳಿ ಗ್ರಾಮ ಪಂಚಾಯಿತಿ ಹಾಗೂ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನರಸಿಂಹ ಕೋಣೆಮನೆ ಮಾತನಾಡಿ, ದಾನಿಗಳ ಸಹಾಯದಿಂದ ಶಾಲೆಯಲ್ಲಿನ ಮೂಲಭೂತ ಸೌಕರ್ಯಗಳು ಅಭಿವೃದ್ಧಿ ಹೊಂದಿವೆ ಎಂದರು.
ಇದನ್ನೂ ಓದಿ | Taraka Ratna: ತಾರಕ ರತ್ನಗೆ ಮುಂದುವರಿದ ಚಿಕಿತ್ಸೆ; ಆರೋಗ್ಯದ ಬಗ್ಗೆ ಮಾಹಿತಿ ಬಿಟ್ಟು ಕೊಡದ ಆಸ್ಪತ್ರೆ ಆಡಳಿತ ಮಂಡಳಿ
ಸಭಾ ಕಾರ್ಯಕ್ರಮಕ್ಕೂ ಮುನ್ನ ನೂತನ ಶ್ರದ್ಧಾ ವಾಚನಾಲಯವನ್ನು ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿಯ ವತಿಯಿಂದ ಟಿ.ಕೆ. ಭಾಗ್ವತ್, ಹರಿಪ್ರಕಾಶ ಕೋಣೆಮನೆ, ನರಸಿಂಹ ಕೋಣೆಮನೆ ಹಾಗೂ ಸದಾಶಿವ ಹೆಗಡೆ ಅವರನ್ನು ಸನ್ಮಾನಿಲಾಯಿತು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ, ಟಿಎಂಎಸ್ ಅಧ್ಯಕ್ಷ ನಾರಾಯಣ ಭಟ್ ಅಗ್ಗಾಶಿಕುಂಬ್ರಿ, ಚಂದಗುಳಿ ಪಂ. ಸದಸ್ಯ ಆರ್.ಎಸ್. ಭಟ್, ಎಸ್.ಡಿ.ಎಂ.ಸಿ. ಅಧ್ಯಕ್ಷ ವಿನಾಯಕ ಭಟ್, ಮುಖ್ಯ ಶಿಕ್ಷಕ ಭಾಸ್ಕರ್ ನಾಯ್ಕ ಇದ್ದರು. ನಾಗರಾಜ ಮತ್ತು ಸಂಗಡಿಗರು ವೇದಘೋಷ ಮಾಡಿದರು. ಪ್ರಣತಿ ಮತ್ತು ಶ್ರೀಶ ಸಂಗಡಿಗರು ಪ್ರಾರ್ಥಸಿದರು. ಕೃತಿ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಆರ್. ಆರ್. ಭಟ್ ಸ್ವಾಗತಸಿದರು. ಶಿಕ್ಷಕ ಅಮಿತ್ ಚೌಹಾಣ್ ಶಾಲೆಯ ವರದಿ ವಾಚಿಸಿದರು. ಎಂ.ಎನ್. ಭಟ್ ಹಾಗೂ ಮೇಘನಾ ನಾಯಕ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ | Bharat Jodo Yatra: ರಾಹುಲ್ ಗಾಂಧಿ ಕೈಗೊಂಡಿದ್ದ ಭಾರತ್ ಜೋಡೋ ಯಾತ್ರೆಗೆ ಇಂದು ತೆರೆ