Site icon Vistara News

National Green Hackathon: ಬೆಂಗಳೂರಿನಲ್ಲಿ ಫೆ.16ರಿಂದ ರಾಷ್ಟ್ರೀಯ ಹಸಿರು ಹ್ಯಾಕಥಾನ್; 12 ರಾಜ್ಯಗಳ ವಿದ್ಯಾರ್ಥಿನಿಯರು ಭಾಗಿ

#image_title

ಬೆಂಗಳೂರು: ನಗರದಲ್ಲಿ ಕ್ವೆಸ್ಟ್ ಅಲಯನ್ಸ್ ಸಂಸ್ಥೆ ವತಿಯಿಂದ ಫೆಬ್ರವರಿ 16ರಿಂದ 20ರವರೆಗೆ ʼರಾಷ್ಟ್ರೀಯ ಹಸಿರು ಹ್ಯಾಕಥಾನ್ʼ (National Green Hackathon) ಹಮ್ಮಿಕೊಂಡಿದ್ದು, 12 ರಾಜ್ಯಗಳ ಪ್ರೌಢಶಾಲಾ ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ. ತಮ್ಮ ಸಮುದಾಯಗಳು ದಿನನಿತ್ಯ ಎದುರಿಸುತ್ತಿರುವ ಪರಿಸರ ಸವಾಲುಗಳಿಗೆ, ಈ ವಿದ್ಯಾರ್ಥಿನಿಯರು ಪರಸ್ಪರ ಸಹಯೋಗದಿಂದ ಪರಿಹಾರಗಳನ್ನು ಕಂಡುಕೊಳ್ಳಲಿದ್ದಾರೆ.

‘ಹ್ಯಾಕ್ ಟು ದ ಫ್ಯೂಚರ್ – ದ ಗ್ರೀನ್ ಎಡಿಷನ್’ ಹ್ಯಾಕಥಾನ್‌ನಲ್ಲಿ ಕರ್ನಾಟಕ, ಒಡಿಶಾ, ಉತ್ತರಾಖಂಡ, ಜಾರ್ಖಂಡ್, ಅಸ್ಸಾಂ, ನಾಗಾಲ್ಯಾಂಡ್, ತೆಲಂಗಾಣ, ಆಂಧ್ರ ಪ್ರದೇಶ, ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಂದ ಸುಮಾರು 65 ವಿದ್ಯಾರ್ಥಿನಿಯರು ಸರ್ಕಾರಿ ಶಾಲೆಗಳನ್ನು ಪ್ರತಿನಿಧಿಸಲಿದ್ದಾರೆ.

ಒಂದು ಸಮಸ್ಯೆಯನ್ನು ಗುರುತಿಸುವುದು, ಸಮಸ್ಯೆಯನ್ನು ವ್ಯಾಖ್ಯಾನಿಸುವುದು, ಪರಿಹಾರವನ್ನು ದೃಶ್ಯೀಕರಿಸುವುದು, ಅದರ ಅನುಷ್ಠಾನ ಹಾಗೂ ಪ್ರತಿಕ್ರಿಯೆ ಪಡೆದುಕೊಳ್ಳುವುದು – ಹೀಗೆ ಒಂದು ಯೋಜನೆಯ ಇಡೀ ಲೈಫ್‌ ಸರ್ಕಲ್‌ ಅನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಹ್ಯಾಕಥಾನ್ ಅನ್ನು ಆಯೋಜಿಸಲಾಗಿದೆ. ಕ್ವೆಸ್ಟ್ ಅಲಯನ್ಸ್ ಎಂಬ ಸಂಸ್ಥೆಯು ಈ ಉಪಕ್ರಮದ ಮುಂದಾಳತ್ವ ವಹಿಸಿದ್ದು, ಐಬಿಎಂ, ಕ್ಯಾಪ್ ಜೆಮಿನಿ, ಅಮೆಜಾನ್, ಕಾಂಟರ್, ನಿಸ್ಸುಮ್ ಮುಂತಾದ ಬಹುರಾಷ್ಟ್ರೀಯ ಕಂಪನಿಗಳ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ.

ಇದನ್ನೂ ಓದಿ | Teachers suspended : ಮೋದಿ ಕೇರ್‌ ಚೈನ್‌ ಲಿಂಕ್‌ ವ್ಯವಹಾರದಲ್ಲಿ ತೊಡಗಿದ್ದ ಶಿಕ್ಷಕರ ಅಮಾನತು: ಶಿಕ್ಷಣ ಇಲಾಖೆ ಆದೇಶ

ಒಂದು ವಾರ ನಡೆಯಲಿರುವ ಈ ವಸತಿ ಸಹಿತ ತರಬೇತಿ ಕಾರ್ಯಕ್ರಮದಲ್ಲಿ ಸ್ಟೆಮ್ (STEM) ಕ್ಷೇತ್ರಗಳ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಗಣಿತ) ತಜ್ಞರು ವಿದ್ಯಾರ್ಥಿನಿಯರಿಗೆ ವೈಜ್ಞಾನಿಕ ಪರಿಹಾರಗಳನ್ನು ನಿರ್ಮಿಸಲು ಮಾರ್ಗದರ್ಶನ ನೀಡಲಿದ್ದಾರೆ. ಡ್ರೋನ್, 3ಡಿ ಪ್ರಿಂಟರ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ವರ್ಚುವಲ್ ರಿಯಾಲಿಟಿ/ ಅಗ್ಮೆಂಟೆಡ್ ರಿಯಾಲಿಟಿ ಮುಂತಾದ ಭವಿಷ್ಯದ ತಂತ್ರಜ್ಞಾನಗಳನ್ನು ವಿದ್ಯಾರ್ಥಿನಿಯರಿಗೆ ಪರಿಚಯಿಸಲಿದ್ದು, ವಿದ್ಯಾರ್ಥಿನಿಯರು ತಾವು ಅಭಿವೃದ್ಧಿಪಡಿಸಲಿರುವ ಮೂಲ ಮಾದರಿ, ಉತ್ಪನ್ನಗಳಲ್ಲಿ ಈ ತಂತ್ರಜ್ಞಾನಗಳನ್ನು ಅಳವಡಿಸುವ ಪ್ರಯತ್ನ ಮಾಡಲಿದ್ದಾರೆ.

ಈ ಬಗ್ಗೆ ಕ್ವೆಸ್ಟ್ ಅಲಯನ್ಸ್ ಶಾಲಾ ಕಾರ್ಯಕ್ರಮದ ನಿರ್ದೇಶಕಿ ನೇಹಾ ಪರ್ತಿ ಪ್ರತಿಕ್ರಿಯಿಸಿ, “ಒಂದು ಪ್ರಯೋಗಶೀಲ ಅನುಭವ ನೀಡುವ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ತಂತ್ರಜ್ಞಾನದ ಬಳಕೆಯಲ್ಲಿರುವ ಸಂಭಾವ್ಯತೆ ಬಗ್ಗೆ ಅರಿವು ಮೂಡಿಸುವುದು ಮತ್ತು ತಮ್ಮನ್ನು ಭವಿಷ್ಯದ ನವೋದ್ಯಮಿಗಳು ಹಾಗೂ ಸಂಶೋಧಕರಾಗಿ ಕಲ್ಪಿಸಿಕೊಳ್ಳುವ ಮನಸ್ಥಿತಿಯನ್ನು ನಿರ್ಮಿಸುವ ಉದ್ದೇಶವನ್ನು ಈ ಉಪಕ್ರಮ ಹೊಂದಿದೆ. ಮುಂಬರುವ ದಿನಗಳಲ್ಲಿ ಹವಾಮಾನ ಬದಲಾವಣೆಯು ಇಡೀ ವಿಶ್ವದ ಮೇಲೆ, ಅದರಲ್ಲೂ ವಿಶೇಷವಾಗಿ ಅಂಚಿನಲ್ಲಿರುವ ಸಮುದಾಯಗಳ ಮೇಲೆ, ಪರಿಣಾಮ ಬೀರಲಿದೆ. ಆದ್ದರಿಂದ ಯುವ ಜನಾಂಗ, ಅದರಲ್ಲೂ ಹೆಣ್ಣು ಮಕ್ಕಳು – ಸ್ಟೆಮ್ ಮನೋವೃತ್ತಿ ಬೆಳೆಸಿಕೊಳ್ಳಲಿ, ಆ ಮೂಲಕ ಉತ್ತಮ ಭವಿಷ್ಯ ರೂಪಿಸಲು ಕೊಡುಗೆ ನೀಡಲಿ ಎನ್ನುವುದೇ ನಮ್ಮ ಆಶಯ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಈ ಹ್ಯಾಕಥಾನ್ ಒಂದು ವಸತಿ ಉಪಕ್ರಮವಾಗಿರುವುದರಿಂದ ವಿವಿಧ ರಾಜ್ಯಗಳ ವಿದ್ಯಾರ್ಥಿನಿಯರಿಗೆ ತಮ್ಮ ಸಂಸ್ಕೃತಿ, ಅನುಭವಗಳನ್ನು ಪರಸ್ಪರ ಹಂಚಿಕೊಳ್ಳುವ ವೇದಿಕೆ ದೊರೆಯಲಿದೆ. ಎಲ್ಲರೂ ಒಟ್ಟಿಗೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಪರಸ್ಪರ ಹೊಸ ವಿಷಯಗಳನ್ನು ಕಲಿಯುವ ಮತ್ತು ತಮ್ಮ ಸಮುದಾಯಗಳ ಸಮಸ್ಯೆಗಳನ್ನು ಹಂಚಿಕೊಳ್ಳುವ ಅವಕಾಶ ಸಿಗಲಿದೆ” ಎಂದು ನೇಹಾ ಪರ್ತಿ ತಿಳಿಸಿದ್ದಾರೆ.

ಕ್ವೆಸ್ಟ್ ಅಲಯನ್ಸ್‌ನ ಸ್ಕೂಲ್ಸ್ ಪ್ರೋಗ್ರಾಮ್ ವಿದ್ಯಾರ್ಥಿನಿಯರಿಗೆ 21ನೇ ಶತಮಾನದ ಕೌಶಲಗಳನ್ನು ರೂಪಿಸಿಕೊಳ್ಳುವ, ಲಿಂಗ ತಾರತಮ್ಯಗಳಿಗೆ ಸವಾಲೊಡ್ಡುವ ಮತ್ತು ಸ್ಟೆಮ್ ಶಿಕ್ಷಣ ಕೇಂದ್ರಿತ ಉದ್ಯೋಗಾವಕಾಶಗಳನ್ನು ಅನ್ವೇಷಿಸಲು ಸಹಾಯಕವಾಗುವ ಕಲಿಕಾ ಅನುಭವಗಳನ್ನು ಸೃಷ್ಟಿಸುತ್ತಿದೆ. ವಿದ್ಯಾರ್ಥಿಗಳಿಗೆ ಕೋಡಿಂಗ್ ಅನ್ನು ಅಭಿವ್ಯಕ್ತಿಯ ಮಾಧ್ಯಮವಾಗಿ ಬಳಸಿಕೊಳ್ಳಲು ಮತ್ತು ತಂತ್ರಜ್ಞಾನದ ಗ್ರಾಹಕರಾಗುವ ಬದಲು, ತಂತ್ರಜ್ಞಾನದ ಸೃಷ್ಟಿಕರ್ತರಾಗಲು ಪ್ರೋತ್ಸಾಹ ನೀಡುತ್ತಿದೆ.

ಕ್ವೆಸ್ಟ್ ಅಲಯನ್ಸ್ (Quest Alliance) ಸಂಸ್ಥೆ ವತಿಯಿಂದ ಈ ಹಿಂದೆ ದೇಶಾದ್ಯಂತ ಹಲವಾರು ರಾಜ್ಯಗಳಲ್ಲಿ ಶಾಲಾ ಮಟ್ಟದ ಹ್ಯಾಕಥಾನ್‌ಗಳು ನಡೆಸಲಾಗಿದ್ದರೂ, ‘ಹ್ಯಾಕ್ ಟು ದ ಫ್ಯೂಚರ್ – ದ ಗ್ರೀನ್ ಎಡಿಷನ್ ಮೊದಲ ರಾಷ್ಟ್ರ ಮಟ್ಟದ ಹ್ಯಾಕಥಾನ್ ಆಗಿದೆ.

ಬೆಂಗಳೂರಿನ ಗರುಡಾಚಾರ್ ಪಾಳ್ಯದ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಜಿ.ಭಾವನಾ ಪ್ರತಿಕ್ರಿಯಿಸಿ, ಈ ಹ್ಯಾಕಥಾನ್‌ನಲ್ಲಿ ಪಾಲ್ಗೊಳ್ಳಲು ಖುಷಿಯಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. “ಪ್ರಸ್ತುತ ನನ್ನ ನೆರೆಹೊರೆಯಲ್ಲಿ ಕಸ ವಿಲೇವಾರಿ ದೊಡ್ಡ ಸವಾಲಾಗಿದೆ. ಅದರ ಜತೆಗೆ ನೀರು ತರಲು ಬಹಳ ದೂರ ಹೋಗಬೇಕು. ಈ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬಹುದು ಎನ್ನುವುದು ನನ್ನ ಆಶಯ. ಈ ರೀತಿ ಇನ್ನಿತರ ವಿದ್ಯಾರ್ಥಿನಿಯರು ತಮ್ಮ ನೆರೆಹೊರೆಯಲ್ಲಿ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಯಲು ಉತ್ಸುಕಳಾಗಿದ್ದೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ | Uniform, shoe row : ಸಮವಸ್ತ್ರ, ಶೂ ವಿತರಣೆ ಮಾಹಿತಿ ನೀಡದ ಸರ್ಕಾರ; ಅಧಿಕಾರಿಯನ್ನು ಜೈಲಿಗಟ್ಟಿದರೆ ಸರಿ ಹೋಗ್ತದೆ ಎಂದ ನ್ಯಾಯಮೂರ್ತಿಗಳು

ಕ್ವೆಸ್ಟ್ ಅಲಯನ್ಸ್ ಬಗ್ಗೆ

ಕ್ವೆಸ್ಟ್ ಅಲಯನ್ಸ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು, 21ನೇ ಶತಮಾನದ ಯುವಕ-ಯುವತಿಯರು ಸ್ವಯಂ-ಅಧ್ಯಯನದ ಮೂಲಕ ಕೌಶಲಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತಿದೆ. ಗುಣಮಟ್ಟದ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿಯಲ್ಲಿರುವ ಕೊರತೆಗಳನ್ನು ನಿವಾರಿಸಲು ಸೂಕ್ತ ಪರಿಹಾರ ವಿನ್ಯಾಸಗೊಳಿಸುತ್ತಿದೆ. ಕಲಿಕಾ ಜಾಲಗಳು ಹಾಗೂ ಸಹಯೋಗಗಳನ್ನು ನಿರ್ಮಿಸುವ ಮೂಲಕ ಸಂಶೋಧನೆ ಮತ್ತು ಆವಿಷ್ಕಾರ ಪ್ರಣೀತ ಬದಲಾವಣೆಗಳನ್ನು ತರುವತ್ತ ಕಾರ್ಯ ನಿರ್ವಹಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಜಾಲತಾಣ: https://www.questalliance.net ಭೇಟಿ ನೀಡಬಹುದಾಗಿದೆ.

Exit mobile version