ಬೆಂಗಳೂರು: ನೌಕರಿ ಕಾಯಂ ಹಾಗೂ ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಒಳಗುತ್ತಿಗೆ ನೌಕರರು (NHM Workers Protest) ನಡೆಸುತ್ತಿರುವ ಪ್ರತಿಭಟನೆ ಸೋಮವಾರಕ್ಕೆ 29 ದಿನ ಪೂರೈಸಿದೆ. ಬೇಡಿಕೆಗಳಿಗೆ ಮೇಲಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಹೋರಾಟ ತೀವ್ರಗೊಳಿಸಲು ಒಳಗುತ್ತಿಗೆ ನೌಕರರು ತೀರ್ಮಾನಿಸಿದ್ದು, 30 ಸಾವಿರ ನೌಕರರು ಒಗ್ಗಟ್ಟಾಗಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ನಗರದ ಫ್ರೀಡಂ ಪಾರ್ಕ್‌ನಲ್ಲಿ ಕಳೆದ 29 ದಿನದಿಂದ ಒಳಗುತ್ತಿಗೆ ನೌಕರರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಒಳಗುತ್ತಿಗೆ ನೌಕರಿ ಕಾಯಂ ಮಾಡಿ ಲಿಖಿತ ಆದೇಶ ನೀಡುವವರೆಗೆ ಪ್ರತಿಭಟನೆ ಹಿಂಪಡೆಯಲ್ಲ ಎಂದು ಎನ್‌ಎಚ್‌ಎಂ ಒಳಗುತ್ತಿಗೆ ನೌಕರರ ಸಂಘ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ | Lokayukta raid : ಮಾಡಾಳು ವಿರೂಪಾಕ್ಷಪ್ಪ ಮಧ್ಯಂತರ ಜಾಮೀನು ರದ್ದು ಕೋರಿ ಸು.ಕೋರ್ಟ್‌ಗೆ ಲೋಕಾಯುಕ್ತ ಮೊರೆ
ಮಂಗಳವಾರದಿಂದ ಎಲ್ಲ ಜಿಲ್ಲೆಗಳ ಎನ್‌ಎಚ್‌ಎಂ ಒಳಗುತ್ತಿಗೆ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದು, ಆರೋಗ್ಯ ಸೇವೆಯಲ್ಲಿ ಏನಾದರೂ ವ್ಯತ್ಯಾಸವಾದರೆ ಅದಕ್ಕೆ ಸರ್ಕಾರವೇ ಹೊಣೆ. ಹೀಗಾಗಿ ಆರೋಗ್ಯ ಸಚಿವರು, ಮುಖ್ಯಮಂತ್ರಿಯವರು ನಮ್ಮ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಬೇಕು. ಇಲ್ಲದಿದ್ದರೆ ಇನ್ನೂ ಉಗ್ರ ಹೋರಾಟ ಮಾಡಬೇಕಾಗುವುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರತಿಭಟನೆ?
ಮಣಿಪುರ, ಒಡಿಶಾ, ರಾಜಸ್ಥಾನ, ಪಂಜಾಬ್ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಈಗಾಗಲೇ ಎನ್‌ಎಚ್‌ಎಂ ನೌಕರರನ್ನು ಕಾಯಂ ಮಾಡಲಾಗುತ್ತಿದೆ. ರಾಜ್ಯದಲ್ಲೂ ಈ ಕೆಲಸ ಮಾಡಬೇಕು. ಎನ್‌ಎಚ್‌ಎಂ ನೌಕರರು ಮಳೆ, ಬಿಸಿಲು ಎನ್ನದೆ ಕೊರೊನಾ ಸಂದರ್ಭದಲ್ಲೂ ಸೇವೆ ಸಲ್ಲಿಸಿದ್ದರು. ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಅವರ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಹಾಗಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೇಮಕವಾಗಿರುವ ಒಳಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ನಿಗದಿ ಮಾಡಿ ಅವರ ಹುದ್ದೆಯನ್ನು ಕಾಯಂಗೊಳಿಸಬೇಕು ಎಂದು ಎನ್‌ಎಚ್‌ಎಂ ಒಳಗುತ್ತಿಗೆ ನೌಕರರ ಸಂಘ ಒತ್ತಾಯಿಸಿದೆ.