Site icon Vistara News

John Wilson Gonsalves: ರಾಷ್ಟ್ರೀಯ ವಾಲಿಬಾಲ್ ತರಬೇತುದಾರ ಜಾನ್ ವಿಲ್ಸನ್ ಗೋನ್ಸಾಲ್ವಿಸ್ ನಿಧನ

volleyball coach John Wilson Gonsalves passed away

ಹೊಸನಗರ: ಜ್ಯೂನಿಯರ್ ವಿಭಾಗದಲ್ಲಿ ಕೆಲವು ಸಮಯ ರಾಷ್ಟ್ರೀಯ ವಾಲಿಬಾಲ್ ತರಬೇತುದಾರರಾಗಿ (National volleyball coach) ಸೇವೆ ಸಲ್ಲಿಸಿದ್ದ, ವಾಲಿಬಾಲ್ ಜಾನ್‌ ಎಂದು ರಾಜ್ಯದೆಲ್ಲೆಡೆ ಖ್ಯಾತರಾಗಿದ್ದ ಪಟ್ಟಣದ ಕ್ರಿಶ್ಚಿಯನ್ ಕಾಲೋನಿ ನಿವಾಸಿ ಜಾನ್ ವಿಲ್ಸನ್ ಗೋನ್ಸಾಲ್ವಿಸ್ (59) ಶಿವಮೊಗ್ಗದಲ್ಲಿ ನಿಧನ ಹೊಂದಿದ್ದಾರೆ.

ಕೆಲವು ದಶಕಗಳ ಹಿಂದೆ ಬಟ್ಟೆಗಳ ಬ್ಯಾನರ್ ಮೇಲೆ ಅಕ್ಷರಗಳ ಬರೆಯುವ ಮೂಲಕ ಬದುಕು ಕಟ್ಟಿಕೊಂಡಿದ್ದ ಅವರು, ನಂತರ ಸ್ಥಳೀಯ ಖಾಸಗಿ ಶಾಲೆಗಳಲ್ಲಿ ವಾಲಿಬಾಲ್ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದರು. ತಾಲೂಕು, ಜಿಲ್ಲೆಯ ಅನೇಕ ವಿದ್ಯಾರ್ಥಿಗಳಿಗೆ ವಾಲಿಬಾಲ್ ತರಬೇತಿ ನೀಡಿ ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಪಟುಗಳನ್ನಾಗಿ ರೂಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ವಾಲಿಬಾಲ್ ಕ್ರೀಡಾ ವಿಭಾಗದ ರಾಷ್ಟ್ರೀಯ ತರಬೇತುದಾರ ಹಾಗೂ ತೀರ್ಪುಗಾರ ಆಗಿದ್ದ ಜಾನ್, ಉತ್ತಮ ಸ್ನೇಹ ಜೀವಿಯಾಗಿದ್ದರು. ಈ ಹಿಂದೆ ಪಟ್ಟಣದ ಶ್ರೀನಿಧಿ ಫೈನಾನ್ಸ್‌, ಸ್ಪೋರ್ಟ್ಸ್‌ ಅಸೋಸಿಯೇಷನ್, ಕುವೆಂಪು ವಿದ್ಯಾಸಂಸ್ಥೆಗಳಲ್ಲಿ ತಮ್ಮ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಸ್ಥಳೀಯ ಜಿಮ್ಮಿ ಜಾರ್ಜ್ ವಾಲಿಬಾಲ್ ಸಂಸ್ಥೆ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಮೃತರ ಆತ್ಮಕ್ಕೆ ಶಾಂತಿ ಕೋರಿವೆ.

Exit mobile version