Site icon Vistara News

Kuchipudi Dance: ಅ.28ಕ್ಕೆ ನಾಟ್ಯ ಪರಂಪರಾ ದಶಮಾನೋತ್ಸವ, ಕುಚಿಪುಡಿ ನೃತ್ಯರೂಪಕ ಪ್ರದರ್ಶನ

Natya parampara dashamanotsava on october 23, 2023 and Kuchipudi Dance

ಬೆಂಗಳೂರು: ಭಾರತ ನೃತ್ಯೋತ್ಸವದ ಪ್ರತೀಕವಾದ ‘ನಾಟ್ಯ ಪರಂಪರ ಉತ್ಸವ’ವು (Natya parampara utsav) ಭಾರತ ಮಾತ್ರವಲ್ಲದೆ, ಅಮೆರಿಕ, ರಷ್ಯಾ, ತೈವಾನ್, ಕೆನಡಾ ಮುಂತಾದೆಡೆಗಳ ಕುಚಿಪುಡಿ (Kuchipudi Dance) ಮತ್ತು ಇನ್ನಿತರ ನೃತ್ಯಶೈಲಿಗಳ ಖ್ಯಾತ ಕಲಾವಿದರ ನೃತ್ಯ ಪ್ರದರ್ಶನಗಳನ್ನು ಅರ್ಪಿಸುತ್ತ ಬಂದಿರುವುದು ಹೆಗ್ಗಳಿಕೆಯ ಸಂಗತಿ. ಕೋವಿಡ್ ನಂಥ ದುಸ್ತರ ಪರಿಸ್ಥಿತಿಯಲ್ಲೂ ಅಂತರ್ಜಾಲದ ಮೂಲಕ ಕಲೆಯನ್ನು ಜೀವಂತವಾಗಿಡಲು ಸಂಸ್ಥೆ ಪರಿಶ್ರಮಿಸಿದೆ ಎಂದರೆ ಅತಿಶಯೋಕ್ತಿಯಲ್ಲ. ಈ ನೃತ್ಯೋತ್ಸವವು, ಕಲಾರಸಿಕರ ಬೆಂಬಲ-ಸಹಾಯದ ಜೊತೆಗೆ, ನವದೆಹಲಿಯ ಸಂಗೀತ ನಾಟಕ ಅಕಾಡೆಮಿ ಮತ್ತು ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂತಾದ ಸರ್ಕಾರಿ ಸಂಸ್ಥೆಗಳ ಆಶ್ರಯ-ಪ್ರೋತ್ಸಾಹಗಳನ್ನು ಪಡೆದುಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ.

ನಾಲ್ಕುದಶಕಗಳಿಂದ ಅಚ್ಚ ಶಾಸ್ತ್ರೀಯ ಕೂಚಿಪುಡಿಯ ನೃತ್ಯಶೈಲಿಯಲ್ಲಿ ಪರಿಶ್ರಮಿಸುತ್ತಿರುವ ಆಚಾರ್ಯ ದೀಪಾ ನಾರಾಯಣನ್ ಶಶೀಂದ್ರನ್ ಸುಮಾರು ಐದುನೂರು ವರ್ಷಗಳ ಇತಿಹಾಸವುಳ್ಳ ಕೂಚಿಪುಡಿ ನೃತ್ಯಶೈಲಿಯ ಖ್ಯಾತ ಗುರು ಪದ್ಮಭೂಷಣ ಡಾ. ವೆಂಪಟಿ ಚಿನ್ನಸತ್ಯಂ ಅವರ ಎರಡನೆಯ ಪರಂಪರೆಗೆ ಸೇರಿದವರು. ತಮ್ಮ ಅಸಂಖ್ಯ ನೃತ್ಯಪ್ರದರ್ಶನಗಳಿಂದ ಖ್ಯಾತರಾದವರು. ತಮ್ಮ `ಕೂಚಿಪುಡಿ ಪರಂಪರಾ ಫೌಂಡೆಶನ್ ‘ ಮೂಲಕ ನೃತ್ಯಾಭಿವೃದ್ಧಿಯ ಸಾಧನೆಯಲ್ಲಿ ನಿರತರಾದ ದೀಪಾ, ಪರಿಣಿತ ಅಭಿನಯ- ಮನೋಜ್ಞ ನೃತ್ಯಪ್ರಸ್ತುತಿಗಳಿಂದ ಕಲಾರಸಿಕರ ಗಮನ ಸೆಳೆದಿದ್ದಾರೆ. ಶಂಕರಾಭರಣ ಚಲನಚಿತ್ರ ಖ್ಯಾತಿಯ ಮಂಜುಭಾರ್ಗವಿ ಅವರ ಪ್ರಧಾನಶಿಷ್ಯರಾಗಿ ಅವರಲ್ಲಿ ಸತತ ಇಪ್ಪತ್ತೈದು ವರುಷಗಳು ನಾಟ್ಯಶಿಕ್ಷಣ ಪಡೆದು ಗುರುಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಅಗ್ಗಳಿಕೆ ಇವರದು.

ಖ್ಯಾತ ಕೂಚಿಪುಡಿ ನಾಟ್ಯಗುರು-ನೃತ್ಯ ಕಲಾವಿದೆ, ಸಂಯೋಜಕಿಯಾದ ಇವರು, ‘ಕೂಚಿಪುಡಿ ಪರಂಪರ ಫೌಂಡೆಶನ್ ಟ್ರಸ್ಟ್’ನ ಲೈಫ್ ಟ್ರಸ್ಟಿಯಾಗಿ ವರ್ಷಪೂರ್ತಿ ನಿರಂತರ ಒಂದಲ್ಲ ಒಂದು ನೃತ್ಯ ಚಟುವಟಿಕೆಗಳಲ್ಲಿ ಕಾರ್ಯನಿರತರು.

ಈ ಸುದ್ದಿಯನ್ನೂ ಓದಿ: World Culture Festival: ಸಂಗೀತ, ನೃತ್ಯಗಳ ಮೂಲಕ ‘ವಸುದೈವ ಕುಟುಂಬಕಂ’ ಸಂದೇಶ ಸಾರಿದ ವಿಶ್ವ ಸಾಂಸ್ಕೃತಿಕ ಉತ್ಸವ

ಇದೀಗ ‘ನಾಟ್ಯ ಪರಂಪರ ದಶಮಾನೋತ್ಸವ -2023’ ರ ಸಂಭ್ರಮಾಚರಣೆ ಇದೇ ತಿಂಗಳ 28 ಶನಿವಾರ ಸಂಜೆ 6 ಗಂಟೆಗೆ ಸಂಜಯನಗರದ ರಮಣ ಮಹರ್ಷಿ ಹೆರಿಟೇಜ್ ಆಡಿಟೋರಿಯಂನಲ್ಲಿ ವೈವಿಧ್ಯಪೂರ್ಣ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಸಮಾರಂಭದಲ್ಲಿ ರಾಜಮುಂಡ್ರಿಯ ಉತ್ತಮ ನಾಟ್ಯಾಚಾರ್ಯರಾದ ಹಿರಿಯ ಗುರು ಶ್ರೀ ಭಗವತುಲ ಮೋಹನ ರಾವ್ ಅವರ ಕಲಾಸೇವೆಯನ್ನು ಗುರುತಿಸಿ ಗೌರವಾರ್ಪಣೆ ಮತ್ತು ಕಥಕ್ ನೃತ್ಯ ದಂಪತಿಗಳಾದ ಖ್ಯಾತ ಕಲಾವಿದರಾದ ಹರಿ ಮತ್ತು ಚೇತನ ಅವರನ್ನು ಸನ್ಮಾನಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ವಾರ್ಷಿಕೋತ್ಸವ ಕಾರ್ಯಕ್ರಮದ ವಿಶೇಷ ಆಕರ್ಷಣೆ – 17 ನೇ ಶತಮಾನದ ಖ್ಯಾತ ಕವಿ ಶ್ರೀ ಮುನೆಪಲ್ಲಿ ಸುಬ್ರಮಣ್ಯ ಕವಿ ವಿರಚಿತ ‘ಭವ ನುತ’ – ಸಂಪೂರ್ಣ ಆಧ್ಯಾತ್ಮ ರಾಮಾಯಣದ ಕಥೆಯ ಸುತ್ತ ಹೆಣೆಯಲಾದ ಕುಚಿಪುಡಿ ನಾಟ್ಯದ ಅದ್ಭುತ ನೃತ್ಯರೂಪಕ ಪ್ರದರ್ಶನ. ಈ ವಿಶಿಷ್ಟ ನೃತ್ಯರೂಪಕದ ಪರಿಕಲ್ಪನೆ-ನಿರ್ಮಾಣ ಮತ್ತು ನೃತ್ಯ ಸಂಯೋಜನೆ ಆಚಾರ್ಯ ದೀಪಾ ನಾರಾಯಣನ್ ಸಶೀಂದ್ರನ್ ಅವರದು. ಸಂಗೀತ ಸಂಯೋಜನೆ- ಗುರುಮೂರ್ತಿ. ಪ್ರಸ್ತುತಪಡಿಸುವವರು `ಕೂಚಿಪುಡಿ ಪರಂಪರಾ ಫೌಂಡೆಶನ್ ‘ ಸಂಸ್ಥೆಯ ನೃತ್ಯ ವಿದ್ಯಾರ್ಥಿಗಳು. ಈ ನಯನ ಮನೋಹರವಾದ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಆದರದ ಸ್ವಾಗತವಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version