Site icon Vistara News

Natyotsava | ಫೆಬ್ರವರಿ 3ರಿಂದ ʼಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-13ʼ; ಅನಂತ ನಾಗ್‌, ತಿಮ್ಮಪ್ಪ ಹೆಗಡೆಗೆ ಪ್ರಶಸ್ತಿ

Natyotsava

ಕಾರವಾರ: ಕೆರೆಮನೆಯ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ ಫೆಬ್ರವರಿ 3ರಿಂದ ೭ರವರೆಗೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ʼಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-೧೩ʼ, ‘ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ’ ಹಾಗೂ ‘ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ (Natyotsava) ಎಂದು ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದ್ದಾರೆ.

ಯಕ್ಷಗಾನ ಕುರಿತು ಸಮಗ್ರ ಅರಿವು, ವಿದ್ವತ್ತು, ಸೃಜನಶೀಲತೆಯನ್ನು ಮೆರೆಯುವ ಮೂಲಕ ಮಂಡಳಿಯ ಹಿಂದಿನ ನಿರ್ದೇಶಕ ದಿ. ಕೆರೆಮನೆ ಶಂಭು ಹೆಗಡೆ ಅವರು ಯಕ್ಷಗಾನ ರಂಗಭೂಮಿಗೆ ಅಪಾರ ಕೊಡುಗೆ ನೀಡಿದ್ದಾರೆ. ಯಕ್ಷಗಾನಕ್ಕಾಗಿ ತಮ್ಮ ಬದುಕನ್ನು ಸಮರ್ಪಿಸಿದ ಅವರ ನೆನಪಿನಲ್ಲಿ ಮಂಡಳಿಯು ಕಳೆದ ೧೨ ವರ್ಷಗಳಿಂದ ರಾಷ್ಟ್ರೀಯ ನಾಟ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ. ಈ ಬಾರಿಯೂ ರಾಷ್ಟ್ರ ಮಟ್ಟದ 5 ದಿನಗಳ ಸಾಂಸ್ಕೃತಿಕ ಉತ್ಸವವನ್ನು ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅನಂತ ನಾಗ್‌ ಮತ್ತು ತಿಮ್ಮಪ್ಪ ಹೆಗಡೆ

ಮಂಡಳಿಯಿಂದ ಪ್ರತಿ ವರ್ಷವೂ ‘ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ’ ಹಾಗೂ ‘ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ’ ನೀಡಲಾಗುತ್ತಿದೆ. ಆದರಂತೆ ಈ ಬಾರಿಯೂ ಇಬ್ಬರು ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಯಕ್ಷಗಾನ ಮಂಡಳಿ ಸ್ಥಾಪಕ ಹಾಗೂ ಪ್ರಸಿದ್ಧ ಯಕ್ಷಗಾನ ವಿದ್ವಾಂಸ ಕೆರೆಮನೆ ಶಿವರಾಮ ಹೆಗಡೆ ಅವರ ಸ್ಮರಣಾರ್ಥ ಸ್ಥಾಪಿತವಾದ ಪ್ರತಿಷ್ಠಿತ ‘ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ-೨೦೨೩’ಗೆ ಖ್ಯಾತ ಹಿರಿಯ ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದ ಅನಂತ ನಾಗ್‌ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ೨೫ ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ ಮತ್ತು ಇತರ ಗೌರವಗಳನ್ನು ಒಳಗೊಂಡಿದೆ. ನಾಟ್ಯೋತ್ಸವದಲ್ಲಿ ಇವರಿಗೆ ಫೆ.3ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಶಿವಶರಣರು ಹೊಸ ಧರ್ಮ ಸ್ಥಾಪಿಸಿದರು ಎನ್ನುವುದು ತಲೆಬುಡವಿಲ್ಲದ ವಾದ: ಡಾ. ಸಂಗಮೇಶ ಸವದತ್ತಿಮಠ ಆಕ್ರೋಶ

ಇನ್ನು ಯಕ್ಷಗಾನದ ಸರ್ವ ಸಮರ್ಥ ಕಲಾವಿದ ಕೆರೆಮನೆ ಗಜಾನನ ಹೆಗಡೆ ಹೆಸರಿನಲ್ಲಿ ಸ್ಥಾಪಿತವಾದ “ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ-೨೦೨೩”ಗೆ ಪ್ರಸಿದ್ಧ ಯಕ್ಷಗಾನ ಕಲಾವಿದ ತಿಮ್ಮಪ್ಪ ಹೆಗಡೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ೧೫ ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ, ಗೌರವಗಳನ್ನು ಹೊಂದಿದೆ. ಫೆ.೪ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ನಾಟ್ಯೋತ್ಸವದಲ್ಲಿ ದೇಶದ ಶ್ರೇಷ್ಠ ಕಲಾ ಪರಿಣಿತರು, ಚಿಂತಕರು, ಭಾಗವಹಿಸಲಿದ್ದಾರೆ. ಸಂಗೀತ, ನೃತ್ಯ, ಜಾನಪದ ಮುಂತಾದ ವಿವಿಧ ಪ್ರಕಾರಗಳ ವಿಶಿಷ್ಟ ಕಲಾತಂಡಗಳು, ಭಾಗವಹಿಸುವ ಈ ನಾಟ್ಯೋತ್ಸವದಲ್ಲಿ ಕಲಾವಿದರಿಗೆ ಸನ್ಮಾನ, ವಿಚಾರ ಗೋಷ್ಠಿ, ನೃತ್ಯ, ಪ್ರಾತ್ಯಕ್ಷಿಕೆ ಮುಂತಾದವು ನಡೆಯಲಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Moral education | ಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣ ಹೇಗೆ?: ಸೋಮವಾರ ಮಹತ್ವದ ದುಂಡು ಮೇಜಿನ ಸಮಾಲೋಚನಾ ಸಭೆ

Exit mobile version