ಬೆಳಗಾವಿ: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಬಿಗ್‌ಬಾಸ್ ಈಗ ಒಟಿಟಿಯಲ್ಲಿ ಬರಲು ಸಜ್ಜಾಗಿದೆ. ಈಗಾಗಲೇ ಎರಡು ಸ್ಪರ್ಧಿಗಳ ಮಾಹಿತಿ ಹೊರಬಿದ್ದಿದೆ. ಇದೇ ವೇಳೆ ಅತ್ಯಾಚ್ಯಾರ ಬೆದರಿಕೆ, ಅಶ್ಲೀಲ ವಿಡಿಯೊ ಬ್ಲಾಕ್‌ಮೇಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ರಾವ್ ಸಹ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀರಾವ್ (Navyashree) ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮಕ್ಕೆ ನವ್ಯಶ್ರೀ ಆಯ್ಕೆ ಏಕೆ ಆಗಬಾರದು? ಎಂದು ಪ್ರಶ್ನಿಸಿರುವ ಅವರು, ನನ್ನ ಸಂಬಂಧಿತ ದಾಖಲೆ ಸಹ ಆ ವಾಹಿನಿಗೆ ಹೋಗಿದ್ದು, ಕೆಲವು ಹಂತದ ಚರ್ಚೆಯಾಗಿದೆ ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.
ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ ವಿರುದ್ಧ ಆರೋಪ ಪ್ರಕರಣ ಕುರಿತು ಮಾತನಾಡಿದ ನವ್ಯಶ್ರೀ ರಾವ್, ವಿದೇಶದಿಂದ ಬಂದ ಬಳಿಕ 20 ದಿನಗಳಿಂದ ಬೆಳಗಾವಿಯಲ್ಲಿ ಇದ್ದು ಕಾನೂನು ಹೋರಾಟ ಮಾಡಿದ್ದೇನೆ. ನನಗೆ ಆದ ಅನ್ಯಾಯ ವಿರುದ್ಧ ಎಪಿಎಂಸಿ ಠಾಣೆಗೆ ದೂರು ನೀಡಿದ್ದೆ. ರಾಜಕುಮಾರ ಟಾಕಳೆ ನಿರೀಕ್ಷಣಾ ಜಾಮೀನು ತಿರಸ್ಕಾರ ಆಗಿದೆ. ರಾಜಕುಮಾರ ಟಾಕಳೆ ವಿರುದ್ಧ ಎಫ್ಐಆರ್ ಆಗಿ 13 ದಿನ ಆಗಿದೆ. ಈವರೆಗೂ ಅವರ ಬಂಧನವಾಗಿಲ್ಲ. ಘನ ನ್ಯಾಯಾಲಯ ನವ್ಯಶ್ರೀಗೆ ಶಕ್ತಿ ಕೊಟ್ಟಿದೆ. ನಾನು ಬೆಂಗಳೂರಿಗೆ ಹೋಗಿ ವಕೀಲರಿಗೆ ಭೇಟಿ ನೀಡಿದ್ದೆ. ವಿಡಿಯೊ ವೈರಲ್ ಆಗಿದ್ದು, ಈ ಕುರಿತು ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದೆ. ನನ್ನ ಹೋರಾಟಕ್ಕೆ ಮುಂದಿನ ದಿನಗಳಲ್ಲಿ ನ್ಯಾಯ ಸಿಗಲಿದೆ ಎಂಬ ಭರವಸೆ ಇದೆ ಎಂದು ಹೇಳಿದರು.
ನನಗೂ ಮದುವೆಯಾಗಬೇಕೆಂಬ ಆಸೆ ಇತ್ತು
ನನಗೂ ಎಲ್ಲ ಹೆಣ್ಣು ಮಕ್ಕಳ ರೀತಿ ಮದುವೆ ಆಗಬೇಕು, ಮಕ್ಕಳನ್ನು ಪಾಲನೆ ಮಾಡಬೇಕು ಎಂದು ಆಸೆ ಇತ್ತು. ರಾಜಕುಮಾರ ಟಾಕಳೆ ನನಗೆ ಮೋಸ ಮಾಡಿ, ಹೊಡೆದು ಬಡಿದು ಮಾಡಿದ್ದಾರೆ. ನವ್ಯಶ್ರೀ ಫೌಂಡೇಶನ್ ಸರ್ಕಾರದಿಂದ ನೊಂದಾಯಿತಗೊಂಡಿರುವ ಸಂಸ್ಥೆ. ನವ್ಯ ಫೌಂಡೇಶನ್‌ಗೆ ನವ್ಯಶ್ರೀ ಒಬ್ಬಳೇ ಅಲ್ಲ, ಪದಾಧಿಕಾರಿಗಳು ಸಹ ಇದ್ದಾರೆ. ಈ ಫೌಂಡೇಶನ್‌ಗೆ ಬಹಳಷ್ಟು ಜನ ಸಹಕಾರ ಕೊಟ್ಟಿದ್ದಾರೆ ಎಂದ ನವ್ಯಶ್ರೀ, ರಾಜಕುಮಾರ ಟಾಕಳೆಗೆ ದುಡ್ಡು ಕೊಟ್ಟು ಕೊಂಡುಕೊಳ್ಳುವ ಅಭ್ಯಾಸ ಇದೆ ಎಂದು ಆರೋಪಿಸಿದ್ದಾರೆ.