Site icon Vistara News

NCF 2023 Draft: ಪಿಯುಗೆ ವರ್ಷಕ್ಕೆ ಇನ್ಮುಂದೆ ಒಂದಲ್ಲ 2 ಬಾರಿ ಪರೀಕ್ಷೆ; ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ವರದಿಯಲ್ಲಿ ಏನಿದೆ?

#image_title

ಬೆಂಗಳೂರು: ಕೇಂದ್ರ ಶಿಕ್ಷಣ ಸಚಿವಾಲಯವು 9 ಮತ್ತು 10ನೇ ತರಗತಿ ಸೇರಿ ಪಿಯು ಶಿಕ್ಷಣ ವ್ಯವಸ್ಥೆಯಲ್ಲಿ (NCF 2023 Draft) ಬದಲಾವಣೆ ತರಲು ಮುಂದಾಗಿದೆ. ಕೇಂದ್ರ ಶಿಕ್ಷಣ ಸಚಿವಾಲಯವು ಏಪ್ರಿಲ್ 6ರಂದು ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಪೂರ್ವ ಕರಡು ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಶಿಕ್ಷಣ ಸಂಸ್ಥೆಗಳು, ಶಿಕ್ಷಣ ತಜ್ಞರು, ಪೋಷಕರು, ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗೆ ಕೋರಿದೆ.

ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಆಧಾರದ ಮೇಲೆ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು (ಎನ್‌ಸಿಎಫ್) ಅಭಿವೃದ್ಧಿಪಡಿಸಲಾಗಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಇಸ್ರೋ ಮಾಜಿ ಮುಖ್ಯಸ್ಥ ಕೆ. ಕಸ್ತೂರಿರಂಗನ್‌ ನೇತೃತ್ವದ 12 ತಜ್ಞರ ಸಮಿತಿ ಈ ವರದಿಯನ್ನು ಸಿದ್ಧಪಡಿಸಿದೆ. 2005ರಲ್ಲಿ ಪಠ್ಯಕ್ರಮ ಚೌಕಟ್ಟಿನ ಬದಲಾವಣೆ ಆದ ನಂತರ ಈಗ ಮತ್ತೆ ಮಹತ್ವದ ಬದಲಾವಣೆಗೆ ಕೇಂದ್ರ ಶಿಕ್ಷಣ ಸಚಿವಾಲಯ ಮುಂದಾಗಿದೆ.

ಕರಡು ವರದಿಯ ಪ್ರಕಾರ ಪಿಯುಸಿ ವಿದ್ಯಾರ್ಥಿಗಳಿಗೆ ಇನ್ಮುಂದೆ ವರ್ಷಕ್ಕೆ ಒಂದಲ್ಲ ಎರಡು ಬಾರಿ ಪರೀಕ್ಷೆ ಇರಲಿದೆ. ಅಂದರೆ ಸೆಮಿಸ್ಟರ್‌ ಪದ್ಧತಿ ಜಾರಿಗೆ ಬರಲಿದ್ದು, ವರ್ಷದಲ್ಲಿ ಎರಡು ಬಾರಿ ಪರೀಕ್ಷೆ ನಡೆಸುವುದು. ಮಾತ್ರವಲ್ಲದೆ ಈಗಿರುವಂತೆ ಕಲಾ, ವಾಣಿಜ್ಯ, ವಿಜ್ಞಾನ ಎಂಬ ವರ್ಗೀಕರಣ ಇರುವುದಿಲ್ಲ. ಬದಲಾಗಿ ವಿದ್ಯಾರ್ಥಿಗಳು ತಮ್ಮಿಷ್ಟದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಮಾಡಬಹುದಾಗಿದೆ.

ಏನೇನು ಬದಲಾವಣೆ?

• ಈ ಹಿಂದಿನ 10 + 2 ನೀತಿಯ ಬದಲಾಗಿ 5+3+3+4 ಪದ್ಧತಿ ಜಾರಿ ಮಾಡುವಂತೆ ಶಿಫಾರಸು ಮಾಡಲಾಗಿದೆ.
• 11 ಮತ್ತು 12ನೇ ತರಗತಿಗಳಿಗೆ (Puc Students) ವರ್ಷಕ್ಕೆ ಎರಡು ಬಾರಿ ಪರೀಕ್ಷೆ ಆಯೋಜಿಸಬೇಕು. ಸೆಮಿಸ್ಟರ್‌ ಮಾದರಿ ಅಳವಡಿಕೆಗೆ ಒತ್ತು ನೀಡುವುದು.
• 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ಮೌಲ್ಯಮಾಪನದ ವೇಳೆ ಹಿಂದಿನ ತರಗತಿಯ ಅಂಕಗಳ ಪರಿಗಣೆನೆ ಮಾಡುವುದು.
• 11 ಮತ್ತು 12ನೇ ತರಗತಿಗೆ ಒಟ್ಟು 16 ವಿಷಯಗಳನ್ನು ವಿದ್ಯಾರ್ಥಿಗಳು ಅಭ್ಯಾಸ ಮಾಡಿ, ಪರೀಕ್ಷೆ ಬರೆಯಬೇಕು.
• 11 ಹಾಗೂ 12ನೇ ತರಗತಿಯಲ್ಲಿ ಆರ್ಟ್ಸ್‌, ಕಾಮರ್ಸ್‌, ಸೈನ್ಸ್‌ ಎಂಬ 3 ವಿಭಾಗದ ಬದಲು ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಯಾವುದೇ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡುವುದು.
• ಈ ಹೊಸ ಮಾದರಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಬಹುದು.

ಶಾಲಾ-ಕಾಲೇಜಿನಲ್ಲಿ ಸ್ವಚ್ಛತೆಗೂ ಒತ್ತು

ಈ ಕರಡು ವರದಿಯಲ್ಲಿ ಆಟ-ಪಾಠಕ್ಕಷ್ಟೇ ಅಲ್ಲದೆ, ಸ್ವಚ್ಚತಾ ಪಾಠಕ್ಕೂ ಒತ್ತು ನೀಡಲಾಗಿದೆ. ಶಾಲಾ-ಕಾಲೇಜಿನಲ್ಲಿ ಸುರಕ್ಷಿತ ಮತ್ತು ಸ್ವಚ್ಛ ಶೌಚಾಲಯಗಳು ಇರಬೇಕು. ಲಿಂಗವಾರು ಮತ್ತು ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯಗಳನ್ನು ಒದಗಿಸಬೇಕು. ಬಾಲಕಿಯರ ಶೌಚಾಲಯದಲ್ಲಿ ಅಗತ್ಯವಾಗಿ ಸ್ಯಾನಿಟರಿ ಪ್ಯಾಡ್‌ ಇರಬೇಕು ಹಾಗೂ ಬಳಸಿದ ಪ್ಯಾಡ್‌ಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಹಾಗೇ ಮಧ್ಯಾಹ್ನದ ಊಟಕ್ಕಾಗಿ ಪ್ರತ್ಯೇಕ ಡೈನಿಂಗ್‌ ಹಾಲ್‌ ಹೊಂದಿರಬೇಕು ಎಂದು ಶಿಫಾರಸಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Nandini vs Amul: ಒಂದು ದೇಶ-ಒಂದು ಅಮುಲ್, ಒಂದೇ ಹಾಲು, ಒಂದೇ ಗುಜರಾತ್: ಎಚ್.ಡಿ. ಕುಮಾರಸ್ವಾಮಿ ಸರಣಿ ಟ್ವೀಟ್‌

ಆಕ್ಷೇಪಣೆ ಸಲ್ಲಿಸುವುದು ಹೇಗೆ?

ಕೇಂದ್ರ ಸರ್ಕಾರದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಕರಡು ವರದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ. ಇಲ್ಲಿ ನೀವೂ 628 ಪುಟಗಳು ಇರುವ ಪಿಡಿಎಫ್‌ ವರದಿಯನ್ನು ಓದಬಹುದು. ಬಳಿಕ ಈ ಸಂಬಂಧ ಫೀಡ್ ಬ್ಯಾಕ್ ಅನ್ನು ಇ-ಮೇಲ್ ಮೂಲಕ ncf.ncert@ciet.nic.in ಕಳುಹಿಸಬಹುದಾಗಿದೆ.

Exit mobile version