ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಆಗಸ್ಟ್ 21ರಿಂದ ನ್ಯಾಷನಲ್ ಕಾಮನ್ ಮೊಬಿಲಿಟಿ (NCMC Card) ಕಾರ್ಡ್ ಮಾರಾಟ ಮಾಡುವುದಾಗಿ ಬಿಎಂಆರ್‌ಸಿಎಲ್ ಮಾಹಿತಿ ನೀಡಿದ್ದು, ಈ ಕಾರ್ಡ್ ನಮ್ಮ ಮೆಟ್ರೋ, ಬಿಎಂಟಿಸಿ ಸೇರಿ ದೇಶದ ಎಲ್ಲ ಸಾರಿಗೆ ವ್ಯವಸ್ಥೆಗಳು ಹಾಗೂ ಹೆಚ್ಚುವರಿಯಾಗಿ ಚಿಲ್ಲರೆ ಅಂಗಡಿ, ಪೆಟ್ರೋಲ್ ಬಂಕ್‌ಗಳು, ಶಾಪಿಂಗ್ ಇತ್ಯಾದಿ ಅಗತ್ಯಗಳಿಗಾಗಿ ಬಳಸಲು ಅನುಕೂಲವಾಗಲಿದೆ ಎಂದು ತಿಳಿಸಿದೆ.
ಪ್ರಸ್ತುತ ಬಳಕೆಯಲ್ಲಿರುವ ಕಾಂಟ್ಯಾಕ್ಟ್‌ಲೆಸ್ ಸ್ಮಾರ್ಟ್ ಕಾರ್ಡ್‌ಗಳು (CSC) ಕ್ಲೋಸ್ಡ್ ಕಾರ್ಡ್‌ಗಳಾಗಿದ್ದು, ನಮ್ಮ ಮೆಟ್ರೋ ಪ್ರಯಾಣದಲ್ಲಿ ಮಾತ್ರ ಬಳಸಬಹುದಾಗಿದೆ. ಆದರೆ, ಕೇಂದ್ರದ ʼಓನ್ ನೇಷನ್ ಒನ್ ಕಾರ್ಡ್ʼ ಯೋಜನೆ ಅನುಗುಣವಾಗಿ ಹೊಸದಾಗಿ ರುಪೇ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ತೆರೆದ ಲೂಪ್ ಕಾರ್ಡ್ ಅನ್ನು ಪರಿಚಯಿಸಲಾಗಿದ್ದು, ಇದನ್ನು ವಿವಿಧ ಉದ್ದೇಶಗಳಿಗೆ ಬಳಸಬಹುದಾಗಿದೆ.
ರುಪೇ ಎನ್‌ಸಿಎಂಸಿ ಕಾರ್ಡ್ ತ್ವರಿತ ವಿತರಣೆಗಾಗಿ ಪ್ರಯಾಣಿಕರು ತಮ್ಮ ಸ್ವ ವಿವರಗಳನ್ನು (KYC) ನಮ್ಮ ಮೆಟ್ರೋ ವೆಬ್‌ಸೈಟ್ ಅಥವಾ ʼಬಿಎಂಆರ್‌ಸಿಎಲ್ ಆರ್‌ಬಿಎಲ್ ಬ್ಯಾಂಕ್ ಎನ್‌ಡಿಎಂಸಿʼ ಮೊಬೈಲ್ ಆ್ಯಪ್‌ನಲ್ಲಿ ಸ್ವಯಂ ನೋಂದಣಿ ಮಾಡಿಕೊಂಡು, ನೋಂದಣಿ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಟಿಕಟ್ ಕೌಂಟರ್‌ನ ನಿರ್ವಾಹಕರಿಗೆ ತಿಳಿಸಬೇಕು.
ಇದನ್ನೂ ಓದಿ | Indira Canteen: ಇಂದಿರಾ ಕ್ಯಾಂಟೀನ್ ಊಟದ ದರದಲ್ಲಿ ಹೆಚ್ಚಳ ಇಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಕಾರ್ಡ್ ಮಾರಾಟ ಬೆಲೆ 50 ರೂ. ಇದ್ದು, ಸ್ಮಾರ್ಟ್ ಕಾರ್ಡ್‌ಗಳಲ್ಲಿ ಲಭ್ಯವಿರುವ ಶೇ.5 ಪ್ರಯಾಣ ದರದ ರಿಯಾಯಿತಿಯು ಎನ್‌ಸಿಎಂಸಿ ಕಾರ್ಡ್‌ಗಳಿಗೂ ಅನ್ವಯಿಸುತ್ತದೆ. ರುಪೇ ಕಾಮನ್ ಮೊಬಿಲಿಟಿ ಕಾರ್ಡ್‌ಗಳು (CMC) ಎಲ್ಲಾ ಆರ್.ಬಿ.ಎಲ್ (RBL) ಬ್ಯಾಂಕ್ ಶಾಖೆಗಳಲ್ಲೂ ಲಭ್ಯವಿರುತ್ತವೆ. ಪ್ರಯಾಣ ಮತ್ತು ಶಾಪಿಂಗ್ ಬೇಕಾಗಿರುವ ವಿವಿಧ ಕಾರ್ಡುಗಳ ಅಗತ್ಯತೆಯನ್ನು ಕಡಿಮೆ ಮಾಡುವ ಸಲುವಾಗಿ ನಮ್ಮ ಮೆಟ್ರೋ ಮುಂದಿನ ದಿನಗಳಲ್ಲಿ ಕಾಂಟ್ಯಾಕ್ಟ್‌ಲೆಸ್ ಸ್ಮಾರ್ಟ್ ಕಾರ್ಡ್‌ಗಳನ್ನು (CSC) ಹಂತ ಹಂತವಾಗಿ ತೆಗೆದು ಹಾಕಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಇನ್ನು ಕಾಂಟ್ಯಾಕ್ಟ್‌ಲೆಸ್ ಸ್ಮಾರ್ಟ್ ಕಾರ್ಡ್‌ಗಳು (CSC) ಬೆಳಗ್ಗೆ 6 ಗಂಟೆಯಿಂದ 11 ಗಂಟೆಯವರೆಗೆ ಮತ್ತು ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಮಾರಾಟಕ್ಕೆ ಲಭ್ಯವಿರುತ್ತದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.