ಬೆಂಗಳೂರು/ನವದೆಹಲಿ: ಮೇ 5ರಂದು ನಡೆದಿದ್ದ ನೀಟ್ ಪರೀಕ್ಷೆಯ (NEET UG 2024) ಫಲಿತಾಂಶ ಜೂ.4ರಂದು ಪ್ರಕಟಗೊಂಡಿದೆ. ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸಿದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಕರ್ನಾಟಕದ ಆರು ವಿದ್ಯಾರ್ಥಿಗಳು ಮೊದಲ ರ‍್ಯಾಂಕ್ ಪಡೆದಿದ್ದಾರೆ.
ದೇಶದಲ್ಲಿ ಮೊದಲ ರ‍್ಯಾಂಕ್ ಪಡೆದ ಟಾಪ್ 100 ವಿದ್ಯಾರ್ಥಿಗಳ ಪಟ್ಟಿಯಲ್ಲಿ 6 ವಿದ್ಯಾರ್ಥಿಗಳು ಮೊದಲ ಸ್ಥಾನವನ್ನು ಪಡೆದಿದ್ದಾರೆ. ಕರ್ನಾಟಕದ ವಿ.ಕಲ್ಯಾಣ್, ಶ್ಯಾಮ್ ಶ್ರೇಯಸ್ ಜೋಸೆಫ್, ಅರ್ಜುನ್ ಕಿಶೋರ್, ಪದ್ಮನಾಭ್ ಮೆನನ್, ಪ್ರಜ್ಞಾ ಪಿ.ಶೆಟ್ಟಿ, ಖುಷಿ ಮಗನೂರ್ ಎಂಬ ವಿದ್ಯಾರ್ಥಿಗಳು ಶೇ.99.98 ಅಂಕಗಳನ್ನು ಗಳಿಸುವ ಮೂಲಕ ಟಾಪರ್ ಸ್ಥಾನದಲ್ಲಿದ್ದಾರೆ.
ಅಂದಹಾಗೇ, ದೇಶಾದ್ಯಂತ 571 ನಗರಗಳಲ್ಲಿ ಹಾಗೂ ಹೊರಗಿನ 14 ನಗರಗಳು ಸೇರಿದಂತೆ 4750 ವಿವಿಧ ಕೇಂದ್ರಗಳಲ್ಲಿ 05 ಮೇ 2024 ರಂದು ನೀಟ್ ಯುಜಿ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆಯನ್ನು 13 ಭಾಷೆಗಳಲ್ಲಿ (ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು) ನಡೆಸಲಾಗಿತ್ತು. ನೀಟ್ ಪರೀಕ್ಷೆಗೆ 24,06,079 ಅಭ್ಯರ್ಥಿಗಳ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 23,33,297 ಪರೀಕ್ಷೆ ಹಾಜರಾಗಿದ್ದು, 72782 ಗೈರು ಹಾಜರಾಗಿದ್ದರು. ಇದರಲ್ಲಿ ಬಾಲಕರು 10,29,154 ಹಾಗೂ ಬಾಲಕಿಯರು 13,76,831, ತೃತೀಯ ಲಿಂಗಿಗಳು 18 ಮಂದಿ ಪರೀಕ್ಷೆಯನ್ನು ಬರೆದಿದ್ದರು.
ಇದನ್ನೂ ಓದಿ: NEET UG Results 2024: ನೀಟ್ ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಹೀಗೆ ಮಾಡಿ
ದೇಶದಾದ್ಯಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದಿದ್ದ ನೀಟ್ ಪರೀಕ್ಷೆಯ ಫಲಿತಾಂಶವು ಪ್ರಕಟಗೊಂಡಿದ್ದು, ಉತ್ತರ ಪತ್ರಿಕೆಗಳ ಮರುಪರಿಶೀಲನೆ ಅಥವಾ ಮರುಮೌಲ್ಯಮಾಪನಕ್ಕೆ ಅವಕಾಶವಿಲ್ಲ ಎನ್ನಲಾಗಿದೆ. ಇನ್ನೂ ನೀಟ್ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಮೇ 29 ರಂದು ಬಿಡುಗಡೆ ಮಾಡಲಾಗಿತ್ತು. ಇದಕ್ಕೆ ಆಕ್ಷೇಪಣೆ ಸಲ್ಲಿಸಿದ ಬಳಿಕ ಅಂತಿಮ ಕೀ ಉತ್ತರಗಳನ್ನು ಜೂನ್ 3 ರಂದು ಬಿಡುಗಡೆ ಮಾಡಲಾಗಿತ್ತು. ಈಗಾಗಲೇ ಬಿಡುಗಡೆಯಾಗಿರುವ ಅಂತಿಮ ಕೀ ಉತ್ತರಗಳ ಆಧಾರದ ಮೇಲೆ ನೀಟ್ ಯುಜಿ 2024ರ ಫಲಿತಾಂಶವನ್ನು ಪ್ರಕಟಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ