Site icon Vistara News

Negligence of Mescom | ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಮೆಸ್ಕಾಂ ಉಪವಿಭಾಗ ಕಚೇರಿ ಮುಂದೆ ಶವ ಇಟ್ಟು ಪ್ರತಿಭಟನೆ

Negligence of Mescom

ಸೊರಬ: ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ (Negligence of Mescom) ತಾಲೂಕಿನ ಆನವಟ್ಟಿ ಬಳಿಯ ಎಣ್ಣೆಕೊಪ್ಪ ಗ್ರಾಮದ ರವಿ ದುರ್ಗಪ್ಪ (24) ಎಂಬ ಯುವಕ ಸೋಮವಾರ (ಡಿ.೧೯) ರಂದು ಮೃತಪಟ್ಟಿದ್ದ. ಈತನ ಸಾವಿಗೆ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರೇ ನೇರ ಹೊಣೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆರೋಪಿಸಿ, ಮಂಗಳವಾರ (ಡಿ.೨೦) ಯುವಕನ ಶವವನ್ನು ಆನವಟ್ಟಿಯ ಮೆಸ್ಕಾಂ ಉಪವಿಭಾಗ ಕಚೇರಿಯ ಮುಂದಿಟ್ಟು ಪ್ರತಿಭಟಿಸಿದರು. ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದರು.

ಇದನ್ನೂ ಓದಿ | Murugha Seer | ಮಠಾಧೀಶರ ಸಮಾಗಮ; ಮುರುಘಾ ಮಠದ ಆಡಳಿತಾಧಿಕಾರಿ ನೇಮಕ ವಾಪಸ್‌ ಪಡೆಯಲು ಆಗ್ರಹ

ವಿದ್ಯುತ್ ಗುತ್ತಿಗೆದಾರರ ಬಳಿ ದಿನಗೂಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಈತ, ಕುಬಟೂರು ಗ್ರಾಮದಲ್ಲಿ ಡಿ.17ರಂದು ವಿದ್ಯುತ್ ಪರಿವರ್ತಕ ಅಳವಡಿಕೆ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿದೆ. ಇದರಿಂದ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ. ಆನವಟ್ಟಿಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸೋಮವಾರ (ಡಿ.೧೯) ಮೃತಪಟ್ಟಿದ್ದಾನೆ.

ಕುಟುಂಬಸ್ಥರಿಗೆ ಆಧಾರವಾಗಿದ್ದ ಯುವಕನ ಸಾವಿಗೆ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರೇ ನೇರ ಹೊಣೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆರೋಪಿಸಿ, ಸೋಮವಾರ (ಡಿ.೧೯) ಮೆಸ್ಕಾಂ ಉಪವಿಭಾಗೀಯ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಮಂಗಳವಾರ (ಡಿ.೨೦) ಕೂಡ ಪ್ರತಿಭಟನೆ ಮುಂದುವರಿಸಿದರು.

ಇದನ್ನೂ ಓದಿ | KPTCL Exam | ಜನವರಿ ಮೊದಲ ವಾರದಲ್ಲಿ AE, JE ನೇಮಕ ಪರೀಕ್ಷೆ ಫಲಿತಾಂಶ

ಮೃತ ರವಿಯ ತಂದೆಗೆ ಇಬ್ಬರು ಮಕ್ಕಳು. ಅಪ್ಪ-ಅಮ್ಮ ಇಬ್ಬರಿಗೂ ಕೆಲಸಕ್ಕೆ ಹೋಗಲು ಸಾಧ್ಯವಾಗದ ಕಾರಣ ರವಿಯೇ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ. ಸಹೋದರಿ ಕಾಲೇಜು ವಿದ್ಯಾರ್ಥಿನಿ. ಇದೀಗ ರವಿ ಸಾವಿನಿಂದ ಅವರ ಕುಟುಂಬ ಬೀದಿಗೆ ಬಂದಂತಾಗಿದೆ. ರವಿಯ ಸಾವಿಗೆ ಮೆಸ್ಕಾಂ ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯವೇ ಕಾರಣವಾಗಿದ್ದು, ಸೂಕ್ತ ಪರಿಹಾರ ಸಿಗುವವರೆಗೂ ಶವವನ್ನು ತೆಗೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಕೊನೆಗೆ ಪ್ರತಿಭಟನಾಕಾರರ ಆಗ್ರಹಕ್ಕೆ ಮಣಿದ ಮೆಸ್ಕಾಂ ಮತ್ತು ಗುತ್ತಿಗೆದಾರರು ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈಬಿಡಲಾಗಿದೆ.

ಇದನ್ನೂ ಓದಿ | Student Protest | ಮಂಗಳೂರು ವಿವಿ ಪರೀಕ್ಷೆ ಫಲಿತಾಂಶ ವಿಳಂಬ; ರೊಚ್ಚಿಗೆದ್ದ ಎವಿಬಿಪಿ ಪ್ರತಿಭಟನೆ

Exit mobile version