Site icon Vistara News

TSS Totagars‌ : ಶತಮಾನದ ನಂತರ ಟಿಎಸ್‌ಎಸ್‌ ಆಡಳಿತ ಮಂಡಳಿಯಲ್ಲಿ ಹೊಸ ಅಲೆ; ಅಧ್ಯಕ್ಷ ಸ್ಥಾನದತ್ತ ಕುತೂಹಲ

Sirsi TSS and ramakrishna hegde and gopala krishna vaidya

ಭಾಸ್ಕರ್‌ ಆರ್‌ ಗೆಂಡ್ಲ, ವಿಸ್ತಾರ ನ್ಯೂಸ್‌, ಶಿರಸಿ

ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲೊಂದಾದ ಇಲ್ಲಿನ ದಿ ತೋಟಗಾರ್ಸ್ ಕೋ-ಆಪ್ ಸೇಲ್ ಸೊಸೈಟಿಯ (ಟಿಎಸ್‌ಎಸ್‌) (TSS Totagars‌) ಆಡಳಿತವು ಶತಮಾನದ ಬಳಿಕ ಕಡವೆ ಕುಟುಂಬದ ಕೈತಪ್ಪಿದೆ. ಕಡವೆ ಶ್ರೀಪಾದ ಹೆಗಡೆ (Kadave Sripada Hegde) ಅವರು 1923ರಲ್ಲಿ ಟಿಎಸ್‌ಎಸ್‌ ಅನ್ನು ಹುಟ್ಟುಹಾಕಿ, ಅದರ ಸಂಸ್ಥಾಪಕ ಅಧ್ಯಕ್ಷರಾಗಿದ್ದಾಗಿನಿಂದ ಇಲ್ಲಿಯವರಿಗೆ ಅವರ ಕುಟುಂಬದ ಹಿಡಿತದಲ್ಲಿದ್ದ ಆಡಳಿತ ಮಂಡಳಿಯು ಸರಿಯಾಗಿ 100 ವರ್ಷಗಳ ಬಳಿಕ ಬದಲಾವಣೆ ಕಂಡಿದೆ. ಈ ಬಾರಿ ನಡೆದ ಚುನಾವಣೆಯಲ್ಲಿ ಕಡವೆ ರಾಮಕೃಷ್ಣ ಹೆಗಡೆ (Kadave Ramakrishna Hegde) ಬಣದ ವಿರುದ್ಧ ಗೋಪಾಲಕೃಷ್ಣ ವೈದ್ಯ (Gopalakrishna Vaidya) ಅವರ ತಂಡವು ಪ್ರಚಂಡ ಬಹುಮತ ಸಾಧಿಸಿ, ಗೆಲುವಿನ ನಗೆ ಬೀರಿದೆ. ಹಾಗಾಗಿ ಮುಂದಿನ ಅಧ್ಯಕ್ಷರು ಯಾರಾಗುತ್ತಾರೆ ಎಂಬುದು ಸದ್ಯದ ಕುತೂಹಲವಾಗಿದೆ.

ಕಡವೆ ಶ್ರೀಪಾದ ಹೆಗಡೆ ತರುವಾಯ ಅವರ ಅಳಿಯ ಶಾಂತಾರಾಮ ಹೆಗಡೆ ಶೀಗೇಹಳ್ಳಿ (Shantaram Hegde Sheegehalli) ಅಧಿಕಾರ ವಹಿಸಿಕೊಂಡಿದ್ದರು. ಕಳೆದ ಐದು ವರ್ಷಗಳ ಹಿಂದೆ ಕಡವೆ ಶ್ರೀಪಾದ ಹೆಗಡೆ ಅವರ ಪುತ್ರ ರಾಮಕೃಷ್ಣ ಹೆಗಡೆ ಅವರು ಕಾರ್ಯಾಧ್ಯಕ್ಷರಾಗಿದ್ದರು. ಈ ಮೊದಲು ಟಿಎಸ್‌ಎಸ್‌ ಅಡಿಕೆ ವಹಿವಾಟಿಕೆ ಮಾತ್ರ ಸೀಮಿತವಾಗಿತ್ತು. ಈಗ 10 ವರ್ಷದಿಂದೇಚೆಗೆ ಸೂಪರ್‌ ಮಾರ್ಕೆಟ್‌ ಅನ್ನು ಪ್ರಾರಂಭಿಸಿ, ಚಿನ್ನ, ದಿನಸಿ ಉತ್ಪನ್ನ, ಬಟ್ಟೆ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಕೈಹಾಕಲಾಗಿತ್ತು. ಈ ಮೂಲಕ ಟಿಎಸ್‌ಎಸ್‌ ವ್ಯಾಪ್ತಿಯನ್ನು ವಿಸ್ತರಿಸಲಾಗಿತ್ತು.

Ramakrishna Hegade kadave

ಒಂದು ಹಂತದಲ್ಲಿ ಶಿರಸಿ ಮಟ್ಟಿಗೆ ಇದು ಒಂದು ಸಾಧನೆಯೆಂದೇ ಹೇಳಲಾಗಿತ್ತು. ಇದರ ಜತೆಗೆ ರಿಯಲ್‌ ಎಸ್ಟೇಟ್‌ ವ್ಯವಹಾರವನ್ನು ಸಹ ಟಿಎಸ್‌ಎಸ್‌ ಶುರು ಮಾಡಿತ್ತು. ಆದರೆ, ಆಡಳಿತ ಮಂಡಳಿಯ ಕೆಲವು ಹೊಸ ಯೋಜನೆಗಳ ಬಗ್ಗೆ ಷೇರುದಾರರಲ್ಲಿ ಭಿನ್ನಾಭಿಪ್ರಾಯ ಇತ್ತು. ಇದೇ ವೇಳೆ ನಡೆದ ಚುನಾವಣೆಯಲ್ಲಿ ಈಗ ಗೋಪಾಲಕೃಷ್ಣ ವೈದ್ಯ ಅವರ ಬಣ ಅಭೂತಪೂರ್ವ ಗೆಲುವು ಸಾಧಿಸಿದೆ.

ಕಳೆದ ಬಾರಿ ನಡೆದಿರಲಿಲ್ಲ ಚುನಾವಣೆ

ಐದು ವರ್ಷಗಳಿಗೊಮ್ಮೆ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯುತ್ತಿತ್ತು. ಆದರೆ, 2018ರಲ್ಲಿ ಚುನಾವಣೆ ನಡೆಸದೆ ಅವಿರೋಧವಾಗಿ ಆಯ್ಕೆ ಆಗಿತ್ತು. ಈ ಹಿಂದೆ ಚುನಾವಣೆ ನಡೆದರೂ ಕಡವೆ ಬಣವೇ ಮೇಲುಗೈ ಸಾಧಿಸುತ್ತಿತ್ತು. ಈಗ 15 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 14 ಸ್ಥಾನದಲ್ಲಿ ಗೋಪಾಲಕೃಷ್ಣ ಬಣವು ಗೆಲುವು ಸಾಧಿಸುವ ಮೂಲಕ ಟಿಎಸ್‌ಎಸ್‌ನಲ್ಲಿ ಹೊಸ ಇತಿಹಾಸ ಬರೆದಿದೆ.

ಕುತೂಹಲ ಮೂಡಿಸಿದ್ದ ಹಣಾಹಣಿ

ಗೋಪಾಲಕೃಷ್ಣ ವೈದ್ಯ ಅವರ ಬಣದ ಒಟ್ಟು 14 ಅಭ್ಯರ್ಥಿಗಳು ಜಯ ಸಾಧಿಸಿದ್ದು, ಮಹಿಳಾ ಮೀಸಲು ಕ್ಷೇತ್ರದಿಂದ ಇಬ್ಬರು ಮಹಿಳಾ ಅಭ್ಯರ್ಥಿಗಳು ಜಯಶೀಲರಾಗಿದ್ದಾರೆ. ಒಟ್ಟು 3543 ಷೇರುದಾರಿರುವ ಸದಸ್ಯರಲ್ಲಿ 3145 ಮಂದಿ ಸದಸ್ಯರು ಮತದಾನ ಮಾಡಿದ್ದರು. ಸಂಸ್ಥೆಯ ಹಾಲಿ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಬಣ ಹಾಗೂ ಮುಂಡಗನಮನೆ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಬಣದ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಚುನಾವಣೆ ತೀವ್ರ ಕುತೂಹಲ ಮೂಡಿಸಿತ್ತು. ಮಂಡಳಿಯ 15 ಸ್ಥಾನಗಳಿಗೆ 32 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆಗಸ್ಟ್‌ 20ರ ಭಾನುವಾರ ತಡರಾತ್ರಿ 1.30ರವರೆಗೆ ನಡೆದ ಮತ ಎಣಿಕೆಯಲ್ಲಿ ಗೋಪಾಲಕೃಷ್ಣ ವೈದ್ಯ ಸೇರಿದಂತೆ ಹದಿನಾಲ್ಕು ಮಂದಿ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: Power Point with HPK : ಶಾಸಕರಿಗೆ ಹೆಚ್ಚಿನ ಅನುದಾನ ಬೇಕಿದ್ದರೆ ಮುಂದಿನ ಬಜೆಟ್‌ವರೆಗೆ ಕಾಯಬೇಕೆಂದ ಜಾರ್ಜ್!

ವಿಜೇತ ಅಭ್ಯರ್ಥಿಗಳ ಮತಗಳು-ಕಿರುಪರಿಚಯ

ಗೋಪಾಲಕೃಷ್ಣ ವೈದ್ಯ ಮತ್ತಿಘಟ್ಟ (2072 – ಮತಗಳು)

ಗೋಪಾಲಕೃಷ್ಣ ವೈದ್ಯ ಮತ್ತಿಘಟ್ಟ ಅವರು ಮುಂಡಗನಮನೆ ಸಹಕಾರಿ ಸೊಸೈಟಿಯಲ್ಲಿ ಮೊದಲ 3 ವರ್ಷ ನಿರ್ದೇಶಕರಾಗಿದ್ದು, ಕಳೆದ 30 ವರ್ಷದಿಂದ ಅಧ್ಯಕ್ಷರಾಗಿದ್ದಾರೆ. ಕೈಗಾರಿಕಾ ಸಹಕಾರಿ ಸಂಘ ಮುಂಡಗನಮನೆಯಲ್ಲಿ 15 ವರ್ಷ ಅಧ್ಯಕ್ಷರಾಗಿದ್ದ ಇವರು, ಹಾಲಿ ನಿರ್ದೇಶಕರಾಗಿದ್ದಾರೆ. ಶಿರಸಿಯ ಜನತಾ ಬಝಾರ್‌ನಲ್ಲಿ ಈ ಹಿಂದೆ ನಿರ್ದೇಶಕರಾಗಿದ್ದ ಇವರು, ಮತ್ತಘಟ್ಟದ ಶ್ರೀ ರಾಮಲಿಂಗೇಶ್ವರ ದೇವಾಲಯದ ಟ್ರಸ್ಟ್‌ನ ಅಧ್ಯಕ್ಷರಾಗಿದ್ದಾರೆ. ಕೆಳಗನಕೇರಿ ಶಂಭುಲಿಂಗೇಶ್ವರ ದೇವಾಲಯ ಸಮಿತಿಯ ಖಜಾಂಚಿಯಾಗಿದ್ದಾರೆ. ಸ್ವರ್ಣವಲ್ಲಿ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ನಿರ್ದೇಶಕರಾಗಿದ್ದು, ಸ್ವರ್ಣವಲ್ಲೀ ಶ್ರೀಗಳ ನೇತೃತ್ವದ ಉ.ಕ ಜಿಲ್ಲಾ ಹಿಂದು ಧಾರ್ಮಿಕ ದೇವಾಲಯಗಳ ಮಹಾಮಂಡಳದ ಕಾರ್ಯದರ್ಶಿಯಾಗಿದ್ದಾರೆ. ಮತ್ತಘಟ್ಟದ ಬೆಳೆಸಿರಿ ಎಫ್.ಪಿ.ಓನ ಸಂಸ್ಥಾಪಕ ಅಧ್ಯಕ್ಷರಾಗಿದ್ದು, ಪ್ರಸ್ತುತ ನಿರ್ದೇಶಕರಾಗಿದ್ದಾರೆ. ಇನ್ನು ಶಿರಸಿ ಹೊಸ ಮಾರುಕಟ್ಟೆ ಶಾಖೆಯ ಕೆಡಿಸಿಸಿ ಬ್ಯಾಂಕಿನ ಸಲಹಾ ಸಮಿತಿ ಸದಸ್ಯರಾಗಿದ್ದಾರೆ.

ಗಣಪತಿ ಜೋಶಿ ಕೊಪ್ಪಲತೋಟ (2008)

ಸೋಂದಾ ಸೊಸೈಟಿಯಲ್ಲಿ ಈ ಹಿಂದೆ 2 ಅವಧಿ ನಿರ್ದೇಶಕರಾಗಿದ್ದ ಇವರು, ಇದೀಗ ಹಾಲಿ ಅಧ್ಯಕ್ಷರಾಗಿದ್ದಾರೆ. ಶಿರಸಿಯ ಡೆವಲಪ್ಮೆಂಟ್ ಸೊಸೈಟಿಯಲ್ಲಿ 30 ವರ್ಷಗಳ ಕಾಲ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಸ್ವರ್ಣವಲ್ಲೀ ಮಠದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ 8ವರ್ಷಗಳ ಕಾಲ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

ರವೀಂದ್ರ ಹೆಗಡೆ ಹಿರೇಕೈ (1855)

ವಕೀಲ ವೃತ್ತಿಯಲ್ಕಿದ್ದ ಇವರು, ಬಾನ್ಕುಳಿ ಮಠದ ಆಡಳಿತ ಸಮಿತಿಯ ಮಾಜಿ ಸದಸ್ಯರು ಹಾಗೂ ಗಾಳಿಜಡ್ಡಿಯ ಸ.ಹಿ.ಪ್ರಾ ಶಾಲೆ ಎಸ್.ಡಿ‌ಎಂ.ಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ‌ ಶುಭೋದಯ ಸೌಹಾರ್ದ ಕೋ ಆಪರೇಟಿವ್ ಸಂಸ್ಥಾಪಕ ನಿರ್ದೇಶಕರಾಗಿದ್ದ ಇವರು, ಶಿವಮೊಗ್ಗ ಕರ್ನಾಟಕ ಅಡಿಕೆ ಮಾರಾಟ ಮಹಾ ಮಂಡಳದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: Power Point with HPK : ಭಾಷಣದ ಉತ್ಸಾಹದಲ್ಲಿ ಸಿದ್ದರಾಮಯ್ಯ ನಂಗೂ-ನಿಂಗೂ ಫ್ರೀ ಅಂದ್ರು ಅಷ್ಟೆ: ಕೆ.ಜೆ. ಜಾರ್ಜ್

ವೀರೇಂದ್ರ ಗೌಡರ್ ತೋಟದಮನೆ (1822)

ಹುಲೆಕಲ್ ಸೊಸೈಟಿಯ ಅಧ್ಯಕ್ಷರಾಗಿ 9 ವರ್ಷಗಳಿಂದ ಸೇವೆ ಸಲ್ಲಿಸಿದ್ದು, ಕಳೆದ 14 ವರ್ಷದಿಂದ ನಿಲ್ಕುಂದದ ಶ್ರೀ ವೀರಭದ್ರೇಶ್ವರ ದೇವಾಲಯದ ಅಧ್ಯಕ್ಷರಾಗಿದ್ದಾರೆ. ಪ್ರಸ್ತುತ ಹುಲೇಕಲ್ ಶ್ರೀ ಮಾರುತಿ ದೇವಸ್ಥಾನದ ಕಮಿಟಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಎಂ.ಎನ್.ಭಟ್ ತೋಟಿಮನೆ (1820)

ದಿವಂಗತ ಶ್ರೀಪಾದ ಹೆಗಡೆ ಕಡವೆ ಅವರ ಒಡನಾಡಿಯಾಗಿದ್ದ ಇವರು, ಈ ಹಿಂದೆ ಮೆಣಸಿ ಸೊಸೈಟಿಯ ಆಡಳಿತ ಸಮಿತಿ ಸದಸ್ಯರಾಗಿ ಅನುಭವ ಹೊಂದಿದ್ದರು. 1983ರಲ್ಲಿ ಶಿರಸಿ ಎಪಿಎಂಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಶಿರಸಿ ಜನತಾ ಬಝಾರಲ್ಲಿ ನಿರ್ದೇಶಕರಾಗಿದ್ದ ಇವರು, ಇದೀಗ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.

ಅಶೋಕ ಹೆಗಡೆ ಬಿಳಗಿ (1813)

ಕೃಷಿ ಕುಟುಂಬದಿಂದ ಬಂದ ಇವರು ಸರಳ ಕೃಷಿಕರಾಗಿದ್ದಾರೆ. ಕೃಷಿ ಚಟುವಟಿಕೆಯಲ್ಲಿ ಇವರು ಸಾಕಷ್ಟು ಹೆಸರು ಮಾಡಿದವರು. ಸಹಕಾರಿ ಕ್ಷೇತ್ರದ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ಹಂಬಲ ಹೊಂದಿರುವ ಇವರು ಆ ನಿಟ್ಟಿನಲ್ಲಿ ತಮ್ಮ ಹೆಜ್ಜೆಯನ್ನಿಟ್ಟಿದ್ದಾರೆ.

ದತ್ತಗುರು ಹೆಗಡೆ ಕಡವೆ (1765)

2003-04ನೇ ಸಾಲಿನಿಂದ ಆರ್.ಡಿ‌.ಸಿ ಸೊಸೈಟಿ ತಾರಗೋಡ ಇದರ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ ಇವರು, 2005ನೇ ಸಾಲಿನಿಂದ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದು, ಶಿರಸಿ ಎಪಿಎಂಸಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಪುರುಷೋತ್ತಮ ಹೆಗಡೆ ಕಳಲೆಮಕ್ಕಿ (1734)

ಸಾಲ್ಕಣಿ ಸೊಸೈಟಿಯಲ್ಲಿ ಮೊದಲ 5 ವರ್ಷ ನಿರ್ದೇಶಕರಾಗಿ ನಂತರ 10 ವರ್ಷ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಇದೀಗ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಾಂತಪುರ ಸೀಮಾ ಉಪಾಧ್ಯಕ್ಷರಾಗಿ 5 ವರ್ಷ ಕಾರ್ಯ ಮಾಡಿ ಕಳೆದ 7 ವರ್ಷದಿಂದ ಸ್ವರ್ಣವಲ್ಲೀ ಸಂಸ್ಥಾನದ ಆಡಳಿತ ಕಮಿಟಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಸಂತ ಹೆಗಡೆ ಶಿರೆಕುಳಿ (1593)

ಶಿರಸಿಯ ಪಿ.ಎಲ್.ಡಿ ಬ್ಯಾಂಕಿನಲ್ಲಿ ನಿರ್ದೇಶಕರಾಗಿದ್ದು, ಕಳೆದ ಹತ್ತು ವರ್ಷದಿಂದ ಜಾನ್ಮನೆ ಸೊಸೈಟಿಯಲ್ಲಿ ನಿರ್ದೇಶಕರಾಗಿದ್ದಾರೆ. ರೇವಣಕಟ್ಟಾ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅಧ್ಯಕ್ಷರಾಗಿ ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ರೇವಣಕಟ್ಟಾ ಸಿದ್ದಿವಿನಾಯಕ ದೇವಾಲಯದ ಅಧ್ಯಕ್ಷರಾಗಿದ್ದಾರೆ.

ಇದನ್ನೂ ಓದಿ: Power Point with HPK : 2.5 ವರ್ಷ ಅಲ್ಲ, ಈಗಲೇ ಅಧಿಕಾರ ಬಿಟ್ಟುಕೊಡುವೆ;‌ ಲಂಚ ಕೊಡೋದನ್ನು ಜನರೇ ಬಿಡಲೆಂದ ಜಾರ್ಜ್!

ರವೀಂದ್ರ ಹೆಗಡೆ ಹಳದೋಟ (1705)

ಹುತ್ಗಾರ ಗ್ರಾ.ಪಂ ಸದಸ್ಯರಾಗಿ 5 ವರ್ಷಗಳ ಕಾಲ ಸದಸ್ಯರಾಗಿದ್ದ ಇವರು, ಕಳೆದ ಎರಡು ವರ್ಷಗಳಿಂದ ಗ್ರಾ.ಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಶಿರಸಿ ತಾ.ಪಂನ ಇಟಗುಳಿ ಕ್ಷೇತ್ರದ ಸದಸ್ಯರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಸ್ಥಾಯಿಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು.

ಕೃಷ್ಣ ಹೆಗಡೆ ಜೂಜಿನಬೈಲ್ (1683)

Ramakrishna Hegade kadave

ಮೂಲತಃ ಯಲ್ಲಾಪುರದ ಜೂಜಿನಬೈಲ್ ಗ್ರಾಮದವರಾದ ಇವರು, ಸವಣಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ನಿರ್ದೇಶಕರಾಗಿ ಸೇವೇ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಸವಣಗೇರಿ ಆದರ್ಶ ಯುವಕ ಸಂಘದಲ್ಲಿ ಐದು ವರ್ಷಗಳ ಕಾಲ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣ, ಸಾಮಾಜಿಕ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ದೇವೇಂದ್ರ ನಾಯ್ಕ ಕುಪ್ಪಳ್ಳಿ (1686)

ಅವಿಭಕ್ತ ಕೃಷಿ ಕುಟುಂಬದವರಾದ ಇವರು, ಕುಪ್ಪಳ್ಳಿಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಗ್ರಾಮದ ಅಭಿವೃದ್ಧಿ, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ನಿರ್ಮಲಾ ಭಟ್ ಬೊಮ್ಮನಳ್ಳಿ (1885)

ಅಗಸಾಲ ಬೊಮ್ಮನಳ್ಳಿಯ ವಿ.ಎಫ್.ಸಿಯಲ್ಲಿ ನಿರ್ದೇಶಕರಾಗಿದ್ದವರು. ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ನಿರ್ದೇಶಕರಾಗಿದ್ದು, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸದಾಶಿವಳ್ಳಿ ಗ್ರಾ.ಪಂ.ನ ಸೃಷ್ಟಿ ಸಂಜೀವಿನಿ ಒಕ್ಕೂಟದ ಉಪಾಧ್ಯಕ್ಷರಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ತೋಟಗಾರ್ಸ್ ಗ್ರೀನ್ ಗ್ರೂಪ್ ಎಫಪಿಒದಲ್ಲಿ ನಿರ್ದೇಶಕರಾಗಿದ್ದಾರೆ.

ವಸುಮತಿ ಭಟ್ ಕ್ಯಾದಗಿ (1745)

ಹೂವಿನಮನೆ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ನಾಲ್ಕು ವರ್ಷಗಳ ಕಾಲ ಉಪಾಧ್ಯಕ್ಷರಾಗಿದ್ದರು. ಸ್ವತಃ ಕೃಷಿ ನಿರ್ವಹಣೆಯ ಅನುಭವ ಹೊಂದಿರುವ ಇವರು, ಸಾಂಸ್ಕೃತಿಕ ಚಟುವಟಿಕೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದವರು. ಜೇನು ಸಾಕಣೆಯನ್ನು ಮಾಡಿದ ಅನುಭವ ಹೊಂದಿದ್ದ ಇವರು, ಭಾನ್ಕುಳಿ ಹಾಗೂ ರಾಮಚಂದ್ರಾಪುರ ಮಠದಲ್ಲಿ ಆಯೋಜಿಸಿದ್ದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ್ದಾರೆ.

ರಾಮಕೃಷ್ಣ ಹೆಗಡೆ ಕಡವೆ (1518)

ಮಾಜಿ ಶಾಸಕ, ಸಹಕಾರಿ ಭೀಷ್ಮ ಹಾಗೂ ಟಿಎಸ್ಎಸ್ ಮಾಜಿ ಅಧ್ಯಕ್ಷ ಶ್ರೀಪಾದ ಹೆಗಡೆ ಕಡವೆ ಅವರ ಪುತ್ರ. ಟಿಎಸ್ಎಸ್‌ನ ಹಾಲಿ ಕಾರ್ಯಾಧ್ಯಕ್ಷರಾಗಿದ್ದ ಇವರು, 2019ರಲ್ಲಿ ಭೀಕರ ಬರಗಾಲದಿಂದ ಕಂಗೆಟ್ಟ ಜನರಿಗೆ ಜೀವನಾಂಶ ಹಾಗೂ ಜೀವನಕ್ಕೆ ಅವಶ್ಯಕ ವಸ್ತುಗಳನ್ನು ಪೂರೈಕೆ ಮಾಡಿದ್ದರು. ಸಹಕಾರಿ ಕ್ಷೇತ್ರದಲ್ಲಿ ತಂದೆಯ ಹಾದಿಯನ್ನೇ ಹಿಡಿದ ಇವರು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ತಮ್ಮದೇ ಆದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಒಟ್ಟಾರೆ ಭಾರಿ ಕುತೂಹಲ ಮೂಡಿಸಿದ್ದ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಟಿಎಸ್ಎಸ್ ಚುನಾವಣೆ ಫಲಿತಾಂಶದಲ್ಲಿ ವೈದ್ಯ ಬಣ ಗೆಲುವು ಸಾಧಿಸಿದೆ. ಇನ್ನು ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಯಾರು ಪಡೆಯಲಿದ್ದಾರೆ ಎಂಬ ಕುತೂಹಲ ಮೂಡಿದೆ.

Exit mobile version