ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಏಡಿಯ ಹೊಸ ಕುಲ ಹಾಗೂ ಪ್ರಭೇದವೊಂದು (ತಳಿ) (Crab species) ಪತ್ತೆಯಾಗಿದೆ. ಹೊಸ ಕುಲಕ್ಕೆ ‘ಆರಾಧ್ಯ ಎಂದೂ, ಹೊಸ ಪ್ರಭೇದಕ್ಕೆ ಪ್ಲಾಸಿಡಾ’ ಎಂದೂ ನಾಮಕರಣ ಮಾಡಲಾಗಿದೆ.
ಜಿಲ್ಲೆಯ ನಿಸರ್ಗ ತಜ್ಞ ಗೋಪಾಲಕೃಷ್ಣ ಹೆಗಡೆ, ಅರಣ್ಯ ಇಲಾಖೆಯ ಸಿಬ್ಬಂದಿ ಪರಶುರಾಮ ಭಜಂತ್ರಿಯವರು ಪುಣೆಯ ಪ್ರಾಣಿ ಸರ್ವೇಕ್ಷಣಾಲಯದ ಡಾ. ಸಮೀರ್ ಕುಮಾರ್ ಪಾಟಿ ಅವರೊಂದಿಗೆ ಸೇರಿ ಈ ಹೊಸ ಕುಲದ ಏಡಿಯನ್ನು ಪತ್ತೆ ಮಾಡಿದ್ದಾರೆ. ಸಿಹಿ ನೀರಿನ ಏಡಿಯ ಹೊಸ ಕುಲ ಪತ್ತೆ ಕಾರ್ಯ ನಡೆದಿರುವುದು ಕರ್ನಾಟಕದ ಮಟ್ಟಿಗೆ ಇದೇ ಮೊದಲು ಎನ್ನಲಾಗಿದೆ.
ಇದನ್ನೂ ಓದಿ: ಕೇವಲ ಮೂರು ತಿಂಗಳ ಮಗುವಿಗೆ ಮೂತ್ರನಾಳಕ್ಕೆ ಸಂಬಂಧಿಸಿದ ಸರ್ಜರಿ, ವಿಶ್ವದಾಖಲೆ ಬರೆದ ಏಮ್ಸ್
ಹೊಸ ಕುಲಕ್ಕೆ ‘ಆರಾಧ್ಯ’ ಎಂದು ನಾಮಕರಣ
ಯಲ್ಲಾಪುರ ಭಾಗದಲ್ಲಿ ಪತ್ತೆಯಾದ ಏಡಿಯ ಹೊಸ ಕುಲಕ್ಕೆ ‘ಆರಾಧ್ಯ’ ಎಂದೂ, ಹೊಸ ಪ್ರಭೇದಕ್ಕೆ ‘ಪ್ಲಾಸಿಡಾ’ ಎಂದೂ ಹೆಸರಿಸಲಾಗಿದೆ. ಆರಾಧ್ಯ ಎಂಬುದು ಏಡಿ ಪತ್ತೆ ತಂಡದ ಪರಶುರಾಮ ಭಜಂತ್ರಿ ಅವರ ಮಗಳ ಹೆಸರಾಗಿದೆ. ಅದೇ ಹೆಸರನ್ನು ಈ ಏಡಿಯ ಕುಲಕ್ಕೆ ಇಡಲಾಗಿದೆ ಎಂದು ತಿಳಿಸಲಾಗಿದೆ. ಇದು ಸಿಹಿ ನೀರಿನ ಏಡಿಯಾಗಿದ್ದು, ಯಲ್ಲಾಪುರ ಭಾಗದ ಬಾರೆ, ಕಳಚೆಯಂಥ ಪ್ರದೇಶಗಳಲ್ಲಿ ಕಾಣಸಿಗುತ್ತಿವೆ.
ಹೊಸ ಜಾತಿಯ ಗುಣಲಕ್ಷಣಗಳು
‘ಆರಾಧ್ಯ’ ಕುಲದ ಏಡಿಗಳು ಸಿಹಿ ನೀರಿನಲ್ಲಿ ಕಂಡುಬರುವ ಹಾಗೂ ಬಹಳ ಸೌಮ್ಯ ಸ್ವಭಾವದ್ದಾಗಿದೆ ಎಂದು ಸಂಶೋಧನೆಯಲ್ಲಿ ಕಂಡುಬಂದಿದೆ. ಸಾಮಾನ್ಯವಾಗಿ ಯಾವುದೇ ಏಡಿಗಳನ್ನು ಒಂದು ಕಡೆಯಲ್ಲಿ ಗುಂಪಾಗಿಟ್ಟರೆ ಅವು ಕೊಂಬುಗಳನ್ನು ಮುರಿದುಕೊಳ್ಳುವವರೆಗೂ ಹೊಡೆದಾಡಿಕೊಳ್ಳುತ್ತವೆ. ಆದರೆ, ಈ ಏಡಿಗಳು ಮಾತ್ರ ಯಾವುದೇ ಆಕ್ರಮಣ ಮಾಡದೆ, ಒಂದು ಜಾಗದಲ್ಲಿ ಕದಲದೆ ಕುಳಿತುಕೊಂಡಿರುತ್ತವೆ ಎಂಬ ಸಂಗತಿ ಸಂಶೋಧನೆ ವೇಳೆ ತಿಳಿದುಬಂದಿದೆ.
ಎರಡು ವರ್ಷಗಳಲ್ಲಿ ಮೂರು ಏಡಿಗಳ ಪತ್ತೆ
ಮೂಲಗಳ ಪ್ರಕಾರ, ಗುಜರಾತ್‌ನಿಂದ ತಮಿಳುನಾಡಿನವರೆಗೆ ಚಾಚಿರುವ ಪಶ್ಚಿಮ ಘಟ್ಟದಲ್ಲಿ ಈವರೆಗೆ 21 ಕುಲದ ಏಡಿಗಳನ್ನು ಪತ್ತೆ ಹಚ್ಚಲಾಗಿದ್ದು, ಯಲ್ಲಾಪುರದಲ್ಲಿ ಪತ್ತೆಯಾದ ‘ಆರಾಧ್ಯಾ, ಪ್ಲಾಸಿಡಾ’ 22ನೆಯದ್ದಾಗಿದೆ. ಈವರೆಗೆ 76 ಪ್ರಭೇದದ ಏಡಿಗಳನ್ನು ಪಶ್ಚಿಮ ಘಟ್ಟದಲ್ಲಿ ಸಂಶೋಧನೆ ಮಾಡಲಾಗಿದೆ. ಭಾರತದ 75ನೇ ಏಡಿ ‘ಘಟಿಯಾನ ದ್ವಿ ವರ್ಣ’ದ ನಂತರ 76ನೇ ಪ್ರಭೇದ ‘ವೇಲಾ ಬಾಂಧವ್ಯ’ವನ್ನೂ ಕೂಡ ಗೋಪಾಲಕೃಷ್ಣ ಹಾಗೂ ಭಜಂತ್ರಿಯವರ ತಂಡ ಕಳೆದ ಎರಡು ವರ್ಷಗಳಲ್ಲಿ ಪತ್ತೆ ಮಾಡಿತ್ತು. ಇದೀಗ 77ನೇ ಹೊಸ ಕುಲ, ಹೊಸ ಪ್ರಭೇದದ ಏಡಿಯನ್ನೂ ಇದೇ ಜೋಡಿ ಪತ್ತೆ ಮಾಡಿರುವುದು ವಿಶೇಷವಾಗಿದೆ.
ಇದನ್ನೂ ಓದಿ: Weather Report: ರಾಜ್ಯದಲ್ಲಿ ಇನ್ನೂ ಎರಡು ದಿನ ವರುಣಾರ್ಭಟ; ಯಾವ್ಯಾವ ಜಿಲ್ಲೆಗಳಿಗೆ ಅಲರ್ಟ್?
ಹೊಸ ಕುಲದ ಏಡಿಯ ಕುರಿತಾದ ಸಂಶೋಧನಾ ವರದಿಯು ಪ್ರಾಣಿ ವರ್ಗೀಕರಣ ಶಾಸ್ತ್ರಜ್ಞರಿಗಾಗಿಯೇ ಇರುವ ನ್ಯೂಜಿಲ್ಯಾಂಡ್‌ನ ವೈಜ್ಞಾನಿಕ ಸಂಶೋಧನಾ ಜರ್ನಲ್ ‘ಝೂಟಾಕ್ಸಾ’ದಲ್ಲಿ ಪ್ರಕಟಗೊಂಡಿದೆ. ಈ ಕುಲದ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕಿದೆ ಎನ್ನಲಾಗಿದೆ.