ಬೆಂಗಳೂರು: ಕೊರೊನಾ ಸೋಂಕಿನಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಹೊಸ ವರ್ಷದ (New Year 2023) ಸಾಮೂಹಿಕ ಸಂಭ್ರಮಕ್ಕೆ ಆರೋಗ್ಯ ಇಲಾಖೆ ಹಾಗೂ ಸರ್ಕಾರ ಬ್ರೇಕ್ ಹಾಕಿತ್ತು. ಇದೀಗ ಸೋಂಕು ಕ್ಷೀಣಿಸಿದ್ದು 2023ರ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲು ರಾಜಧಾನಿ ಬೆಂಗಳೂರಿಗರು ಸಜ್ಜಾಗುತ್ತಿದ್ದಾರೆ.
ಇದಕ್ಕಾಗಿ ಪ್ರತಿಷ್ಠಿತ ಏರಿಯಾದಲ್ಲಿರುವ ಪಬ್, ಬಾರ್ ಮಾಲೀಕರು ಭರ್ಜರಿ ತಯಾರಿ ಮಾಡಿಕೊಂಡಿದ್ದು, ಮತ್ತೆ ಗತವೈಭವ ಮರುಕಳಿಸುವ ಸಾಧ್ಯತೆ ಕಂಡುಬಂದಿದೆ. ಈಗಾಗಲೇ ಪಬ್, ಬಾರ್ ಮಾಲೀಕರ ಜತೆ ಪೊಲೀಸರು ಸಭೆ ನಡೆಸಿದ್ದಾರೆ. ಹೊಸ ವರ್ಷ ಸಂಭ್ರಮಕ್ಕಾಗಿ ಈ ಬಾರಿ ಮಧ್ಯರಾತ್ರಿ 2 ಗಂಟೆ ತನಕ ಅವಕಾಶಕ್ಕೆ ಮಾಲೀಕರು ಮನವಿ ಮಾಡಿದ್ದಾರೆ.
ಮತ್ತೊಂದೆಡೆ ಈ ಹಿಂದೆ ನಡೆದ ಕಹಿ ಘಟನೆಗಳ ಕುರಿತು ಎಚ್ಚರಿಕೆ ವಹಿಸಿರುವ ಪಬ್ ಮಾಲೀಕರು ಮಹಿಳೆಯರ ಸುರಕ್ಷತೆಗಾಗಿ ವಿಶೇಷ ಒತ್ತು ನೀಡಿದ್ದಾರೆ. ಪಬ್‌ಗಳಿಗೆ ಬರುವ ಮಹಿಳೆಯರ ಸುರಕ್ಷತೆಗಾಗಿ ಲೇಡಿ ಬೌನ್ಸರ್ಸ್ ನಿಯೋಜನೆ ಮಾಡಿದ್ದಾರೆ. ಮಹಿಳೆಯರು ಕುಣಿದು ಕುಪ್ಪಳಿಸಲು ಪ್ರತ್ಯೇಕ ಡ್ಯಾನ್ಸ್ ಫ್ಲೋರ್ ಇರಲಿದೆ. ಡ್ಯಾನ್ಸ್ ಫ್ಲೋರ್‌ನಲ್ಲಿ ಪತಿ- ಪತ್ನಿ, ಪ್ರೇಮಿಗಳಿಗೆ ಪ್ರತ್ಯೇಕ ಅವಕಾಶ ನೀಡಲಾಗಿದೆ.
12 ಗಂಟೆಗೆ ನೋ ಲೈಟ್ಸ್ ಆಫ್
ನ್ಯೂ ಇಯರ್ ಸೆಲೆಬ್ರೆಷನ್ ಕೌಂಟ್‌ಡೌನ್ ಮಾಡುವಾಗ ಲೈಟ್ಸ್ ಆಫ್ ಮಾಡಿ, 12 ಗಂಟೆಗೆ ಲೈಟ್ಸ್ ಆನ್ ಮಾಡಿ ಪರಸ್ಪರ ಒಬ್ಬರಿಗೊಬ್ಬರು ಶುಭಾಶಯ ತಿಳಿಸುವ ಸಂಪ್ರದಾಯ ಇದೆ. ಆದರೆ ಈ ಬಾರಿ ಇಂತಹ ಲೈಟ್ಸ್ ಆಫ್ ಕಾರ್ಯಕ್ರಮಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಅಂದು ಲೈಟ್ಸ್ ಬಂದ್ ಮಾಡದೇ, ಬೆಳಕಿನಲ್ಲಿಯೇ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಪೊಲೀಸರು ಸೂಚಿಸಿದ್ದಾರೆ.
ಇದನ್ನೂ ಓದಿ | Atlee Kumar | 8 ವರ್ಷಗಳ ನಂತರ ಮಗುವಿನ ನಿರೀಕ್ಷೆಯಲ್ಲಿ ನಿರ್ದೇಶಕ ಅಟ್ಲೀ ದಂಪತಿ