Site icon Vistara News

ಆನೇಕಲ್​ ಚಂದಾಪುರ ಕೆರೆ ನಿರ್ವಹಣೆ ವಿಫಲ; ರಾಜ್ಯ ಸರ್ಕಾರಕ್ಕೆ 500 ಕೋಟಿ ರೂ. ದಂಡ ವಿಧಿಸಿದ ಎನ್​ಜಿಟಿ

Chandapura Lake

ಆನೇಕಲ್​ ತಾಲೂಕಿನಲ್ಲಿರುವ ಚಂದಾಪುರ ಕೆರೆ ನಿರ್ವಹಣೆ, ಅಭಿವೃದ್ಧಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಷ್ಟ್ರೀಯ ಹಸಿರು ನಾಯಾಧಿಕರಣ (NGT) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಹಾಗೇ, ರಾಜ್ಯಸರ್ಕಾರಕ್ಕೆ 500 ಕೋಟಿ ರೂಪಾಯಿ ದಂಡ ವಿಧಿಸಿದೆ.

ಚಂದಾಪುರ ಕೆರೆ ಮಲಿನಗೊಂಡು, ನಾಶವಾಗುತ್ತಿದೆ ಎಂದು 2021ರಲ್ಲಿ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ರಾಷ್ಟ್ರೀಯ ಮಾಧ್ಯಮಗಳಲ್ಲೂ ಸಮಗ್ರ ವರದಿ ಪ್ರಕಟವಾಗಿತ್ತು. ಅವುಗಳನ್ನು ಗಮನಿಸಿದ ಎನ್​ಜಿಟಿ. ‘ಚಂದಾಪುರ ಸರೋವರದ ಸ್ಥಿತಿಗತಿ, ಆ ಸ್ಥಳದಲ್ಲಿ ನಡೆಯುತ್ತಿರುವ ಘನತ್ಯಾಜ್ಯ ನಿರ್ವಹಣೆ, ಕೆರೆ ರಕ್ಷಣೆ ಸಂಬಂಧಪಟ್ಟಂತೆ ಎಲ್ಲ ಮಾರ್ಗಸೂಚಿಗಳೂ ಪಾಲನೆಯಾಗುತ್ತಿವೆಯಾ ಎಂಬುದನ್ನು ಪರಿಶೀಲನೆ ನಡೆಸಲು ಏಳು ಜನ ತಜ್ಞರ ಸಮಿತಿಯನ್ನು ರಚನೆ ಮಾಡಿತ್ತು.

ಈ ಸಮಿತಿ ನೀಡಿದ ವರದಿ ಪರಿಶೀಲನೆ, ಸಂಪೂರ್ಣ ಹಾಳಾದ ಸರೋವರದ ಸ್ಥಿತಿಗತಿ ನೋಡಿ ಅಕ್ಟೋಬರ್​ 10ರಂದು ಆದೇಶ ಹೊರಡಿಸಿದ ಎನ್​ಜಿಟಿ, ‘ಪರಿಸರ ರಕ್ಷಣೆ ಮಾಡಿ, ನಾಗರಿಕರಿಗೆ ಸ್ವಚ್ಛ ವಾತಾವರಣ ಸಿಗುವಂತೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸರೋವರ ಮತ್ತು ಅದರ ಸುತ್ತಲಿನ ಪರಿಸರಕ್ಕೆ ಭಾರಿ ಹಾನಿಯಾಗಿದೆ. ಇಲ್ಲಿನ ಪರಿಸರ ಹಾನಿಗೆ ಪರಿಹಾರ ಒದಗಿಸುವುದು ರಾಜ್ಯ ಸರ್ಕಾರದ ಕರ್ತವ್ಯ’ ಎಂದು ಹೇಳಿದೆ.

ಕೆರೆ ನೀರಿನ ಗುಣಮುಟ್ಟ ಕಳಪೆಯಾಗಿದೆ. ಇಲ್ಲಿ ಕಾನೂನು ಬಾಹಿರ ಒತ್ತುವರಿಗಳು ಆಗಿವೆ, ಅಕ್ರಮ ಕಟ್ಟಡಗಳ ನಿರ್ಮಾಣವಾಗಿದೆ. ಅಷ್ಟೇ ಅಲ್ಲ, ಸ್ಥಳೀಯ ಕೈಗಾರಿಕೆಗಳು ಪರಿಸರ ರಕ್ಷಣೆ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿವೆ. ಈ ಎಲ್ಲ ಕಾರಣಗಳಿಂದ ಕೆರೆ ಮಲಿನ ಆಗುವ ಜತೆ, ನಾಶವೂ ಆಗುತ್ತಿದೆ. ಹೀಗೆ ಚಂದಾಪುರ ಕೆರೆ ಮಲಿನವಾಗಲು ಕಾರಣರಾದ ಒತ್ತುವರಿದಾರರು, ಕೈಗಾರಿಕೋದ್ಯಮಿಗಳು, ತಪ್ಪಿತಸ್ಥ ಅಧಿಕಾರಿಗಳಿಂದ ರಾಜ್ಯ ಸರ್ಕಾರ ಪರಿಹಾರ ಹಣವನ್ನು ಸಂಗ್ರಹಿಸಬಹುದು ಎಂದೂ ಎನ್​ಜಿಟಿ ಹೇಳಿದೆ. ಹಾಗೇ, 500 ಕೋಟಿ ರೂಪಾಯಿಯನ್ನು ಒಂದು ತಿಂಗಳ ಒಳಗೆ ಠೇವಣಿ ಮಾಡಬೇಕು ಎಂದೂ ತಿಳಿಸಿದೆ.

ಇದನ್ನೂ ಓದಿ: Bengaluru Rain | ಕೆರೆ, ರಾಜಕಾಲುವೆ ನುಂಗಿದ್ದರ ತನಿಖೆಗೆ ಆಯೋಗ, ಅಭಿವೃದ್ಧಿಗೆ ಟಾಸ್ಕ್‌ ಫೋರ್ಸ್‌

Exit mobile version